ಮೈಸೂರು ವಿವಿ 98ನೇ ಘಟಿಕೋತ್ಸವ; ಅನ್ಯಾಯದ ಸಂಪತ್ತು ಗುರುತಿಸದಹೊರತು ಸತ್ಯ ಹೊರ ಬರಲು ಅಸಾಧ್ಯ

ಮೈಸೂರು, ಮಾ.12- ಎಲ್ಲಿಯವರೆಗೆ ಸಮಾಜ ನ್ಯಾಯಯುತ ಸಂಪತ್ತು ಮತ್ತು ನ್ಯಾಯಬಾಹಿರ ಸಂಪತ್ತುಗಳ ನಡುವೆ ವ್ಯತ್ಯಾಸ ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಜಯ ಸಿಗಲಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಸೌಧದಲ್ಲಿ ನಡೆದ 98ನೇ ವಾರ್ಷಿಕ ಘಟಿಕೋತ್ಸವದಲ್ಲಿ 27502 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದರು. ಉತ್ಕೃಷ್ಟತೆಯನ್ನು ಸಾಧಿಸಬೇಕಾದರೆ ಅದರಲ್ಲೂ ವಿಶೇಷವಾಗಿ ಶಿಕ್ಷಣಕ್ಷೇತ್ರದಲ್ಲಿ ಪೂರಕ ವಾತಾವರಣವನ್ನು ನಿರ್ಮಿಸಬೇಕಾದುದು ಅಗತ್ಯ. ಕೆಲವರು ಶಿಕ್ಷಣವನ್ನು ಮುಂದುವರಿಸಬಹುದು,ಇನ್ನು ಕೆಲವರು ವೃತ್ತಿ ಜೀವನವನ್ನು ಪ್ರವೇಶಿಸಬಹುದು. ಏನೇ ಕೈಗೊಂಡರೂ ಅದು ಬದುಕಿನ ಅವಿಭಾಜ್ಯ ಅಂಗವಾಗಿದೆ. ಪರಾಭವವನ್ನೂ ಧೈರ್ಯದಿಂದಲೇ ಸ್ವೀಕರಿಸಿ, ಯಶಸ್ಸನ್ನು ಹಂತಹಂತವಾಗಿ ಯೋಜಿಸಿ, ಭವಿಷ್ಯದ ಕಡೆ ಮುಂದಡಿಯಿಡುವಾಗ ನೀವು ನಿರೀಕ್ಷಿಸಿದಂತೆ ಯಶಸ್ಸು ನಿಮ್ಮದಾಗದಿದ್ದರೆ ಮತ್ತೆ ನೀವು ಹಿಂದಿರುಗಿ ನೋಡುವಾಗ ಹಲವರು ಯಾತ್ರೆಯಲ್ಲಿ ಹಿಂದೆ ಬಿದ್ದಿರುವುದು ಗೋಚರವಾಗಬಹುದು. ನಿಮ್ಮಷ್ಟು ಸಾಧನೆಯನ್ನು ಅವರು ಮಾಡಿಲ್ಲದಿರಬಹುದು. ನಿರಾಶೆಯ ಆವರಣಕ್ಕೆ ಸಿಲುಕದಿರಿ ಎಂದರು. ಭಿನ್ನ ಭಿನ್ನ ಜನರಿಗೆ ಶಿಕ್ಷಣವೆಮಬುದು ಬೇರೆ ಬೇರೆಯಾಗಿ ಅರ್ಥವಾಗುತ್ತದೆ. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಶಿಕ್ಷಣವೆನ್ನುವುದು ಬದುಕಿನ ನಿರ್ಮಾಣ. ಮನುಷ್ಯ ನಿರ್ಮಿತಿ ಹಾಗೂ ನಡತೆಯ ನಿರ್ಮಾಣವೂ, ಚಿಂತನದ್ರವ್ಯದ ಕ್ರೋಢೀಕರಣವೂ ಹೌದು. ಯಾವ ಕೋನದಿಂದ ನೋಡಿದರೂ ಶಿಕ್ಷಣವೆಂಬುದು ಒಂದು ನಿರಂತರ ಪ್ರಕ್ರಿಯೆಯೇ ಹೊರತು ಅದಕ್ಕೆ ಕೊನೆಯೆಂಬುದಿಲ್ಲ. ಒಂದು ಪದವಿಯನ್ನು ಪಡೆಯುವುದು ನಿಮ್ಮ ಗುರಿಯಲ್ಲವೇ ಅಲ್ಲ. ಒಬ್ಬ ವ್ಯಕ್ತಿ ತನ್ನ ಬದುಕಿನ ಯಾವುದೇ ಹಂತದಲ್ಲಿ ಈಗ ನಾನು ಪೂರ್ಣವಾಗಿ ಶಿಕ್ಷಣ ಪಡೆದುಕೊಂಡಿದ್ದೇನೆ ಎಂದುಕೊಂಡರೆ ಆತ ಮುಗ್ಧನೆಂದು ಹೇಳಬೇಕು. ನ್ಯಾಯಯುತವಾಗಿ ಹಾಗೂ ನೈತಿಕ ಮಾರ್ಗಗಳಲ್ಲಿ ಗಳಿಸಿದ ಸಂಪತ್ತು ಯಾವ ಪಾಪದಿಂದಲೂ ಲೇಪಿತವಾಗಿರುವುದಿಲ್ಲ. ಶ್ರಮದಿಂದ ಅರ್ಜಿಸಿದ ದ್ರವ್ಯ ಪಾಪಕಾರ್ಯಕ್ಕೆ ವಿನಿಯೋಗವಾಗಬಾರದು. ಸಮಾಜದಲ್ಲಿ ವೃತ್ತಿಪರತೆಯ ಶಿಸ್ತು ಸಡಿಲವಾಗುತ್ತಿದೆ. ವೈದ್ಯರಿರಲಿ, ವಕೀಲರಿರಲಿ,ಇಂಜಿನಿಯರ್ ಗಳೇ ಇರಲಿ ಅಥವಾ ಬೇರೆ ಯಾವುದೇ ವೃತ್ತಿಪರರರಿರಲಿ ಈ ಮಾತು ಸಾರಾಸಗಟಾಗಿ ಎಲ್ಲರಿಗೂ ಅನ್ವಯವಾಗುತ್ತದೆ. ಧನದಾಹ ಸರ್ವವ್ಯಾಪಿಯಾಗಿ ಎಲ್ಲರನ್ನೂ ಮುಕ್ಕುತ್ತಿದೆ. ಇಲ್ಲಿ ಯಾವ ನಿಯಮವೂ ಇಲ್ಲ. ಓಟವಷ್ಟೆ ಮುಖ್ಯ. ಬಹುತೇಕ ಎಲ್ಲ ವೃತ್ತಿ ವಲಯಗಳಲ್ಲಿಯೂ ಸದಸ್ಯರ ಚಟುವಟಿಕೆಗಳ ಮೇಲೆ ನಿಯಂತ್ರಣವಿಡುವ ಶೃಂಗ ಮಂಡಳಿಗಳಿವೆ. ಆದರೆ ಈ ಮಂಡಳಿಗಳು ಚುನಾವಣಾ ಕಾಲದಲ್ಲಿ ಮಾತ್ರ ಚಟುವಟಿಕೆಯಿಂದ ಕೂಡಿರುತ್ತವೆ ಸದಸ್ಯರ ವಿರುದ್ಧ ಅಹವಾಲುಗಳನ್ನು ಪರಿಶೀಲಿಸಲು ವ್ಯವಧಾನವೇ ಇರುವುದಿಲ್ಲ ಎಂದರು. ಭ್ರಷ್ಟಾಚಾರ ಈ ಪ್ರಮಾಣದಲ್ಲಿ ಬೆಳೆಯಲು ಭ್ರಷ್ಟಾಚಾರದ ಬಗ್ಗೆ ಸಮಾಜ ಹೊಂದಿರುವ ಧೋರಣೆಯೇ ಕಾರಣ. ಎಲ್ಲಿಯವರೆಗೆ ಸಮಾಜ ನ್ಯಾಯಯುತ ಸಂಪತ್ತು ಮತ್ತು ನ್ಯಾಯಬಾಹಿರ ಸಂಪತ್ತುಗಳ ನಡುವೆ ವ್ಯತ್ಯಾಸ ಗುರುತಿಸುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಜಯ ಸಿಗಲಾರದು. ನೀವು ತಾರತಮ್ಯವುಳ್ಳ ಸಮಾಜದ ಅಸಮಾನತೆಗಳನ್ನು ತೊಡೆದು ಹಾಕಿ, ಹಸಿವು ಕಣ್ಣೀರನ್ನು ಹೋಗಲಾಡಿಸುವ ದಿಶೆಯಲ್ಲಿ ಕಂಕಣಬದ್ಧರಾಗಿ. ಎಷ್ಟೇ ಬಿಡುವಿಲ್ಲವಾಗಿದ್ದರೂ ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ಆಲೋಚಿಸಿ, ನಿಮ್ಮ ಧ್ವನಿ ಎಲ್ಲರಿಗೂ ಕೇಳುವಂತಿರಬೇಕು. ಅದು ಬಲವಂತದ ಧ್ವನಿಯಾಗಿರಬಾರದು. ಸರಿಯಾದ ನ್ಯಾಯಯುತ ಉದ್ದೇಶಕ್ಕೆ ನೀವು ಧ್ವನಿಯೆತ್ತಬೇಕು ಎಂದು ತಿಳಿಸಿದರು.
ಕಲಾ ವಿಭಾಗದ ಧನಲಕ್ಷ್ಮಿ ಆರ್.(ಬಿ.ಎ) 9ಪದಕ ಮತ್ತು 8 ನಗದು ಬಹುಮಾನ, ಸುಪ್ರೀತಿ ಆರ್, ವನಜ ಕೆ.ಜಿ ಎಂಎ.8ಪದಕ ನಾಲ್ಕು ನಗದು ಬಹುಮಾನ, ಮಹತಿ ಮೋಹನ್ ವಾಣಿಜ್ಯ ವಿಭಾಗ(ಬಿಕಾಂ) ಎರಡು ಪದಕ,ಒಂದು ನಗದು ಬಹುಮಾನ, ಪೂಜಾ ಕೆ.ಜೈನ್(ಬಿಕಾಂ) ಎರಡು ಪದಕ,ಎರಡು ನಗದು ಬಹುಮಾನ, ಮಹದೇವಪ್ರಸಾದ್ ಎಂಬಿಎ ನಾಲ್ಕು ಪದಕ, ಶಶಾಂಕ್ ಜಿ.ಪಿ, ಬಿಪಿಎಡ್ 5ಪದಕ, ಒಂದು ನಗದು ಬಹುಮಾನ, ದಿವ್ಯಶ್ರೀ ಎಸ್ ಎಂಎಡ್ 5ಪದಕ,1ನಗದು ಬಹುಮಾನ, ಮೊಂಜುರ್ಲಾಂಗ್ ಎಲ್ ಸುಚಿಂಗ್, ಎಲ್ ಎಲ್ ಎಂ ಎರಡು ಪದಕ,ಎರಡು ನಗದು ಬಹುಮಾನ, ಮಾನಸಾ ಡಿ.ಪಿ ಬಿಎಸ್ಸಿ, ಏಳು ಪದಕ, 9 ನಗದು ಬಹುಮಾನ, ಶಾಂಭವಿ ಸಿಎನ್ ಎಂಎಸ್ಸಿ 13ಪದಕ, ನಾಲ್ಕು ನಗದು ಬಹುಮಾನಗಳನ್ನು ಪಡೆದುಕೊಂಡರು. 17122 ಮಹಿಳೆಯರು, 10380 ಪುರುಷರು, ವಿವಿಧ ವಿಷಯಗಳಲ್ಲಿ 575 ಅಭ್ಯರ್ಥಿಗಳಿಗೆ ಪಿಹೆಚ್.ಡಿ.ಪದವಿಯನ್ನು ಪ್ರದಾನ ಮಾಡಲಾಯಿತು. ಕೆ.ಆರ್.ವಿಭಾಗದಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ಬೆಂಗಳೂರಿನಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎನ್.ಪ್ರಕಾಶ್ ಗೌಡ ಅವರಿಗೂ ಇದೇ ವೇಳೆ ಪಿಹೆಚ್.ಡಿ ಪದವಿ ಪ್ರದಾನಿಸಲಾಯಿತು. ಯಾವುದೇ ಗೌ.ಡಾ ವನ್ನು ವಿವಿಯಿಂದ ಈ ಬಾರಿ ನೀಡಲಾಗಿಲ್ಲ.
ಕಾರ್ಯಕ್ರಮದಲ್ಲಿ ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು,ಕುಲಸಚಿವೆ ಡಿ.ಭಾರತಿ, ಪರೀಕ್ಷಾಂಗ ಕುಲಸಚಿವ ಪ್ರೊ. ಜೆ.ಸೋಮಶೇಖರ್ ಉಪಸ್ಥಿತರಿದ್ದರು.

Leave a Comment