ಮೈಸೂರು ವಿಭಜನೆ ಪ್ರಸ್ತಾಪಕ್ಕೆ ವ್ಯಾಪಕ ವಿರೋಧ

ಮೈಸೂರು :ಬಳ್ಳಾರಿ, ತುಮಕೂರು ಜಿಲ್ಲೆಗಳ ವಿಭಜನೆಗೆ ಪ್ರಸ್ತಾಪ ಕೇಳಿಬಂದ ಬೆನ್ನಲ್ಲೇ ಇದೀಗ ಮೈಸೂರು ಜಿಲ್ಲೆ ವಿಭಜಿಸುವಂತೆ ಮಾಜಿ ಸಚಿವ ಎಚ್.ವಿಶ್ವನಾಖ್ ಇಂದು ಸಿಎಂ ಯಡಿಯೂರಪ್ಪ ಅವರ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಈ ಪ್ರಸ್ತಾಪಕ್ಕೆ ಮೈಸೂರು ಭಾಗದ ಕಾಂಗ್ರೆಸ್, ಜೆಡಿಎಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆಯ ಟೀ.ನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್.ವಿಶ್ವನಾಥ್ ಅವರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಮೈಸೂರು ಜಿಲ್ಲೆಯಲ್ಲಿ ಆರು ತಾಲೂಕುಗಳಿವೆ. ಹೀಗಿರುವಾಗ 30 ಕಿಲೋಮೀಟರ್ಗೊಂದು ಜಿಲ್ಲೆ ಮಾಡುವುದಕ್ಕೆ ಆಗುತ್ತದೆಯಾ, ಮೂರು ತಾಲೂಕುಗಳಿಗೊಂದು ಜಿಲ್ಲೆ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದರು. ಇದು ವೈಜ್ಞಾನಿಕವಾಗಿಯೂ ಸರಿಯಲ್ಲ. ವೈಯಕ್ತಿಕವಾಗಿಯೂ ನನಗೆ ಇಷ್ಟ ಇಲ್ಲ. ಮೈಸೂರು ಜಿಲ್ಲೆಯ ವಿಭಜನೆಗೆ ಅಗತ್ಯವೇ ಇಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು.

ಇನ್ನು ಇದೇ ವೇಳೆ, ಜೆ.ಡಿ.ಎಸ್ ಶಾಸಕ ಸಾ.ರಾ.ಮಹೇಶ್ ಕೂಡ ಕಿಡಿಕಾರಿದ್ದಾರೆ. ಹೆಚ್. ವಿಶ್ವನಾಥ್ ಅವರು ರಾಜಕೀಯ ಗಿಮಿಕ್ಗಾಗಿ ಈ ರೀತಿ ಮಾಡಿದ್ದಾರೆ. 14 ತಿಂಗಳು ಸುಮ್ಮನಿದ್ದು, ಚುನಾವಣೆ ಹತ್ತಿರ ಬಂದಾಗ ಹೊಸ ಜಿಲ್ಲೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ. ಹುಣಸೂರನ್ನು ಕೇಂದ್ರವನ್ನಾಗಿಟ್ಟುಕೊಂಡು ಹೊಸ ಜಿಲ್ಲೆ ಮಾಡುವ ಪ್ರಸ್ತಾವ ಮುಂದಿಟ್ಟರೆ ಚುನಾವಣೆ ಗೆಲ್ಲಬಹುದು ಎಂಬುದು ಅವರ ಫ್ಲ್ಯಾನ್ ಆಗಿದೆ ಎಂದು ಕುಟುಕಿದರು.

ಇದೇ ಸಂದರ್ಭ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರೂ ಎಚ್.ವಿಶ್ವನಾಥ್ ಅವರ ಪ್ರಸ್ತಾಪಕ್ಕೆ ಕಿಡಿಕಾರಿದ್ದಾರೆ. ವಿಶ್ವನಾಥ್ ಅವರು ಆ ಭಾಗದ ಜನಾಭಿಪ್ರಾಯ ಪಡೆದು ಒಂದು ನಿರ್ಧಾರಕ್ಕೆ ಬರಲಿ ಎಂದು ಸಲಹೆ ನೀಡಿದರು….

Leave a Comment