ಮೈಸೂರು ಯದು ವಂಶಕ್ಕೆ ಸಂತಾನ ಭಾಗ್ಯ : ಅರಮನೆಯಲ್ಲಿ ಸಂಭ್ರಮ

ಬೆಂಗಳೂರು, ಡಿ.೭: ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. ರಾಣಿ ತ್ರಿಷಿಕಾ ಕುಮಾರಿಗೆ ಗಂಡು ಮಗುವಿನ ಜನನವಾಗಿದ್ದು, ರಾಜಮಾತೆ ಪ್ರಮೋದಾದೇವಿ ಮತ್ತು ರಾಜ ಯದುವೀರ್ ಮುಖದಲ್ಲಿ ಮಂದಹಾಸ ಮೂಡಿದೆ.

ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಾಣಿ ತ್ರಿಷಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವಿನ ಹಿನ್ನೆಲೆಯಲ್ಲಿ ತ್ರಿಷಿಕಾರನ್ನು ಖಾಸಗಿ ಆಸ್ಪತ್ರೆಯಲ್ಲಿ ಕರೆತರಲಾಗಿತ್ತು. ಬುಧವಾರ ರಾತ್ರಿ ೯.೫೦ಕ್ಕೆ ತ್ರಿಷಿಕಾ ಗಂಡು ಮಗುವಿಗೆ ಜನ್ಮ ನೀಡಿದರು. ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು.

ತ್ರಿಷಿಕಾ ಜೊತೆಯಲ್ಲೇ ಇರುವ ಯದುವೀರ್, ರಾಜಮಾತೆ ಪ್ರಮೋದಾದೇವಿ ಮತ್ತು ತ್ರಿಷಿಕಾ ತಾಯಿ ಯೋಗಕ್ಷೆಮ ನೋಡಿಕೊಳ್ಳುತ್ತಿದ್ದಾರೆ. ೧೯೫೩ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ ನಂತರ ಮೈಸೂರು ರಾಜಮನೆತನದಲ್ಲಿ ಗಂಡು ಸಂತಾನ ಪ್ರಾಪ್ತಿಯಾಗಿರಲಿಲ್ಲ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಯದುವೀರ್ ರನ್ನು ರಾಜಮನೆತನದ ಉತ್ತರಾಧಿಕಾರಿಯನ್ನಾಗಿ ಪ್ರಮೋದಾದೇವಿ ಒಡೆಯರ್ ದತ್ತು ಪಡೆದಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜನಿಸಿದ್ದ ಸಂದರ್ಭದಲ್ಲಿ ಇಡೀ ಮೈಸೂರು ನಗರಕ್ಕೆ ಎತ್ತಿನ ಗಾಡಿಗಳಲ್ಲಿ ಸಿಹಿ ತಿಂಡಿಯನ್ನು ಕೊಂಡೊಯ್ದು ಜನರಿಗೆ ಹಂಚಲಾಗಿತ್ತು.

ಇಂದಿರಾನಗರದಲ್ಲಿರುವ ಕ್ಲೌಡ್ ಮೈಮ್ ಮೆಟರ್ನಿಟಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅದೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತ್ರಿಷಿಕಾ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಶ್ರೀಕಂಠದತ್ತರ ಬಳಿಕ ಸಂತಾನಭಾಗ್ಯದ ಕೊರತೆ ಎದುರಿಸುತ್ತಿದ್ದ ಯದುವಂಶದಲ್ಲಿ ಸಂಭ್ರಮದ ವಾತಾವರಣ ಮೂಡಿದ್ದು, ಮೈಸೂರಿನ ಅರಮನೆಯಲ್ಲೂ ಸಡಗರ ಮನೆ ಮಾಡಿದೆ.

ರಾಜಮಾತೆ ಪ್ರಮೋದಾದೇವಿ ಒಡೆಯರ್ ಮೊಮ್ಮಗನನ್ನು ಎತ್ತಿ ಮುದ್ದಾಡಿದರಲ್ಲದೆ, ಗಂಡು ಮಗು ಜನಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.  ಶುಭಾಷಯ ಕೋರಿರುವ ನಗರದ ಗಣ್ಯರಿಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಧನ್ಯವಾದ ಸಲ್ಲಿಸಿದ್ದು, ಅರಮನೆಯ ಸಂಪ್ರದಾಯದಂತೆ ಮುಂದಿನ ಕಾರ್ಯಕ್ರಮಗಳು ಜರುಗಲಿವೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು

Leave a Comment