ಮೈಸೂರು ಮೇಯರ್ ಸ್ಥಾನ ಜೆಡಿಎಸ್‍ಗೆ !

ಬೆಂಗಳೂರು, ತುಮಕೂರು ಪಾಲಿಕೆ ಕಾಂಗ್ರೆಸ್‍ಗೆ ಬಿಟ್ಟು
ಮೈಸೂರು ಉಳಿಸಿಕೊಳ್ಳಲು ಜೆಡಿಎಸ್ ತಂತ್ರಗಾರಿಕೆ
ಮೈಸೂರು, ಸೆ. 7. ಅತಂತ್ರ ಸ್ಥಿತಿಯನ್ನೇ ದಾಳವಾಗಿರಿಸಿಕೊಂಡಿರುವ ಜಾತ್ಯಾತೀತ ಜನತಾದಳ ಹೇಗಾದರೂ ಮಾಡಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮತ್ತೆ ಮೇಯರ್ ಸ್ಥಾನ ಗಿಟ್ಟಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಚುನಾವಣಾ ಫಲಿತಾಂಶ ಹೊರ ಬೀಳುತ್ತಿ ದ್ದಂತೆಯೇ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ನೊಂದಿಗೆ ಕೈಜೋಡಿಸುವುದು ಅನಿವಾರ್ಯ ಎಂಬುದು ಖಚಿತವಾಗುತ್ತಿ ದ್ದಂತೆಯೇ ಮೇಯರ್ ಸ್ಥಾನ ಕೈ ತಪ್ಪದಂತೆ ಎಚ್ಚರ ವಹಿಸಿ ರಣತಂತ್ರ ರೂಪಿಸುತ್ತಿದೆ. ಅತಂತ್ರವಾಗಿರುವ ತುಮಕೂರು ಮಹಾನಗರ ಪಾಲಿಕೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಮುಂದಾಗಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಪ್ರಯತ್ನಿಸುತ್ತಿದೆ. ಅಲ್ಲಿ ಕಾಂಗ್ರೆಸ್‍ಗೆ ಮೇಯರ್ ಸ್ಥಾನ ಬಿಟ್ಟುಕೊಡುವುದು, ಕಳೆದ ನಾಲ್ಕು ಅವಧಿಯಲ್ಲೂ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿರುವುದರಿಂದ ಕಡೇ ಅವಧಿಯ ಲ್ಲಾದರೂ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿಯ ಬೇಕೆಂದು ನಿರ್ಧರಿಸಿದ್ದ ಜೆಡಿಎಸ್, ಮೈಸೂರು ಪಾಲಿಕೆಗಾಗಿ ಬಿಬಿಎಂಪಿಯನ್ನೂ ಕಾಂಗ್ರೆಸ್‍ಗೆ ಬಿಟ್ಟುಕೊಡಲುಮಾನಸಿಕವಾಗಿ ಸಿದ್ಧವಾಗಿದೆ.
ಸೆಪ್ಟೆಂಬರ್ 28ರಂದು ಬಿಬಿಎಂಪಿ ಕಡೇ ಅವಧಿಗೆ ಮೇಯರ್-ಉಪಮೇಯರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ಮೇಯರ್ ಸ್ಥಾನ ಕೊಟ್ಟು, ಮೈಸೂರಿನಲ್ಲಿ ಐದೂ ಅವಧಿಗೂ ಮೇಯರ್ಗಾದಿ ಉಳಿಸಿಕೊಳ್ಳಬೇಕೆಂಬುದು ಜೆಡಿಎಸ್ ವರಿಷ್ಠರ ಮಾಸ್ಟರ್ ಪ್ಲಾನ್ ಆಗಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್ ಚರ್ಚೆ ನಡೆಸಿದ್ದು, ತುಮಕೂರು ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗಳನ್ನು ಬಿಟ್ಟುಕೊಟ್ಟು ಮೈಸೂರಲ್ಲಿ ಮೇಯರ್ ಅಧಿಪಥ್ಯ ಮುಂದುವರೆಸುವ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರೊಂದಿಗೆ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಉಭಯ ಪಕ್ಷಗಳ ಮೂಲಗಳು ತಿಳಿಸಿವೆ. ಗೆದ್ದಿರುವ 18 ಜೆಡಿಎಸ್ ಸದಸ್ಯರು, ಬಿಎಸ್‍ಪಿ, ಎಂಎಲ್‍ಸಿಗಳಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಶಾಸಕ ಜಿ.ಟಿ. ದೇವೇಗೌಡ ಸೇರಿ ಒಟ್ಟು 22 ಮಂದಿ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಮತದಾನ ಹೊಂದಿದ್ದಾರೆ.
ಅಸಾಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ತಮ್ಮ ಆಪ್ತ ಕೆ. ಹರೀಶ್‍ಗೌಡರನ್ನು ಸಚಿವ ಹೆಚ್.ಡಿ. ರೇವಣ್ಣ ಮನವೊಲಿಸಿ, ಅವರ ವಶದಲ್ಲಿರುವ ಇಬ್ಬರು ಪಕ್ಷೇತರರನ್ನು ಸೆಳೆದರೆ ಇನ್ನು ಮೂರು ಮತಗಳು ಸೇರಿ ಜೆಡಿಎಸ್ ಬಲ 25 ಆಗಲಿದೆ. 19 ಸ್ಥಾನ ಗೆದ್ದಿರುವ ಕಾಂಗ್ರೆಸ್‍ನಲ್ಲಿ ಶಾಸಕ ತನ್ವೀರ್ ಸೇಠ್, ಎಂಎಲ್‍ಸಿ ಆರ್. ಧರ್ಮಸೇನಾ ಸೇರಿ ಒಟ್ಟು 21 ಸಂಖ್ಯೆ ಬಲವಾಗುತ್ತದೆ. ಕಾಂಗ್ರೆಸ್‍ಗೆ ರೆಬೆಲ್ ಆಗಿ ನಿಂತು ಗೆಲುವು ಸಾಧಿಸಿರುವ ಕೆ.ವಿ. ಶ್ರೀಧರ್ ಒಂದು ವೇಳೆ ಬೆಂಬಲ ನೀಡಿದರೆ 22 ಆಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮೈಸೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನವನ್ನು ಜೆಡಿಎಸ್ ಪಡೆಯುವ ಎಲ್ಲಾ ಪ್ರಯತ್ನಕ್ಕೂ ಕೈ ಹಾಕುವ ಸಾಧ್ಯತೆ ನಿಚ್ಚಳವಾಗಿದೆ. ಚುನಾವಣೆ ದಿನಾಂಕ ನಿಗದಿಯಾದ ನಂತರ ಮೇಯರ್-ಉಪಮೇಯರ್ ಸ್ಥಾನದ ಬಗ್ಗೆ ಚರ್ಚೆ, ಸಭೆ, ಚಟುವಟಿಕೆಗಳು ಆರಂಭವಾಗಲಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಖಚಿತವಾಗಿರುವುದರಿಂದ ಬಿಜೆಪಿ ತಟಸ್ಥ ನೀತಿ ಅನುಸರಿಸಿದ್ದು, ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದೆ.

Leave a Comment