ಮೈಸೂರಿನವರಿಗೆ ಸಿಗದ ಸಚಿವ ಸ್ಥಾನ :

ದಸರಾದಿಂದ ದೂರ ಉಳಿಯಬಹುದಾ ಬಿಜೆಪಿ ಶಾಸಕರು..?
ಮೈಸೂರು. ಆ.23: ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರ ಹವಾ ಮುಗಿಯಿತು. ಈಗೇನಿದ್ದರೂ ಬಿಜೆಪಿ ನಾಯಕರದ್ದೇ ಹವಾ ಇದ್ದು, ದಸರಾ ಮಹೋತ್ಸವದಲ್ಲೂ ಬಿಜೆಪಿ ನಾಯಕರು ಮಿಂಚಲಿದ್ದಾರಾ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಯಾಕೆಂದರೆ ಮೈಸೂರು ಪ್ರಾಂತ್ಯದ ಯಾರೊಬ್ಬರಿಗೂ ಸಚಿವ ಸ್ಥಾನ ನೀಡದಿರುವುದು ಬಿಜೆಪಿ ಶಾಸಕರು ದಸರಾ ಆಚರಣೆಯಿಂದ ದೂರವಿರಲು ಕಾರಣವಾಗಬಹುದಾ ಎಂಬ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಈ ಬಾರಿಯ ದಸರಾದಲ್ಲಿ ಬಿಜೆಪಿ ನಾಯಕರು ಸ್ವಲ್ಪ ಚಟುವಟಿಕೆಯಿಂದ ನಡೆಯುವುದಾದರೂ ಜಿಲ್ಲೆಗೆ ಉಸ್ತುವಾರಿ ಸ್ಥಾನ ನೀಡದಿರುವುದು ಸ್ವಲ್ಪ ಮಂದಿಗೆ ಬೇಸರವಾಗಿದೆ. ಇದರಿಂದ ಕೊಂಚ ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಮೂರು ಪಕ್ಷಗಳು ಆಡಳಿತ ನಡೆಸಿವೆ. ಪ್ರತಿ ಸರ್ಕಾರ ರಚನೆಯಾದಾಗಲೂ ಜಿಲ್ಲೆಗಳಲ್ಲಿ ಆಯಾ ಪಕ್ಷದ ಕಾರ್ಯಕರ್ತರು ಅಥವಾ ಪ್ರಥಮ ಹಂತದಿಂದ ತಳಮಟ್ಟದ ನಾಯಕರವರೆಗೂ ಜೋರಾಗಿಯೇ ಸದ್ದು ಇರುತ್ತದೆ. ಅಂತೆಯೇ ಇದೀಗ ಬಿಜೆಪಿ ಸರದಿಯಿದ್ದು, ಈ ಹಿಂದೆ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಿಲ್ಲೆಯಲ್ಲಿ ಅವರ ಬೆಂಬಲಿಗರು ಅಥವಾ ಇತರೆ ನಾಯಕರ ಬೆಂಬಲಿಗರಿಗೆ ದಸರಾ ಆಚರಣೆ ವೇಳೆ ಹೆಚ್ಚೆಚ್ಚು ಪ್ರಾಧಾನ್ಯತೆ ನೀಡಲಾಗುತ್ತಿತ್ತು,
ನಂತರ ಕಳೆದ ವರ್ಷ ಮೈತ್ರಿ ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಇಬ್ಬರು ಜೆಡಿಎಸ್ ಸಚಿವರಿದ್ದರು. ಹಾಗಾಗಿ ಕಳೆದ ಬಾರಿ ಜೆಡಿಎಸ್ ಕಾರ್ಯಕರ್ತರು, ಸಚಿವರುಗಳಾಗಿದ್ದ ಜಿ.ಟಿ ದೇವೇಗೌಡ ಹಾಗೂ ಸಾ. ರಾ. ಮಹೇಶ್ ಬೆಂಬಲಿಗರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಅದರಂತೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ವಿ ಸೋಮಣ್ಣ ಬೆಂಬಲಿಗರು ಸೇರಿದಂತೆ ಬಿಜೆಪಿಯ ಇತರೆ ನಾಯಕರು ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದರ ನಡುವೆ ಶಾಸಕ ರಾಮದಾಸ್ ಗೆ ಸಚಿವ ಸ್ಥಾನ ಸಿಗದೆ ಇರುವುದು, ರಾಮದಾಸ್ ಬೆಂಬಲಿಗರು ದಸರಾದಿಂದ ಕೊಂಚ ದೂರ ಉಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

Leave a Comment