ಮೈಸೂರಿನಲ್ಲಿ ಹಾಲು ಕರೆಯುವ ಸ್ಪರ್ಧೆ

66ಮೈಸೂರು.ಫೆ.೬- ಫೆಬ್ರವರಿ 06:ನಗರದ ಗೋಪಾಲರ ಸಂಘದ ವತಿಯಿಂದ ದಿ.ತೂಗುದೀಪ ಶ್ರೀನಿವಾಸ್ ಹಾಗೂ ದಿ.ಅಂಬರೀಶ್ ಸ್ಮರಣಾರ್ಥ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಫೆ.8 ರಿಂದ 10ರವರೆಗೆ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಿ.ನಾಗಭೂಷಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಶುಪಾಲನ ಇಲಾಖೆ ಸಹಯೋಗದೊಂದಿಗೆ ನಗರದ ಜೆ.ಕೆ.ಮೈದಾನದಲ್ಲಿ ಸ್ಪರ್ಧೆ ನಡೆಯಲಿದೆ. ಫೆ.8 ರಂದು ಸಂಜೆ 6 ಗಂಟೆಗೆ ವಿವಿಧ ಜಾನಪದ ಕಲಾತಂಡದೊಂದಿಗೆ ಕೋಟೆ ಆಂಜನೇಯ ದೇವಸ್ಥಾನದಿಂದ ಗೋವುಗಳ ಮೆರವಣಿಗೆ ಹಾಗೂ ಜೆ.ಕೆ.ಮೈದಾನದಲ್ಲಿ ಗೋ ಪೂಜೆ ಮಾಡುವ ಮೂಲಕ ಮಹಾಪೌರೆ ಪುಷ್ಪಲತಾ ಜಗನ್ನಾಥ್ ಅವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಬಿಜೆಪಿ ಮುಖಂಡ ಗೋ.ಮಧುಸೂದನ್, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಪುಷ್ಪ ಅಮರ್ ನಾಥ್ ಇನ್ನಿತರರು ಹಾಜರಿರಲಿದ್ದಾರೆ ಎಂದು ತಿಳಿಸಿದರು.

ಫೆ.10ರಂದು ಸಂಜೆ 5 ಗಂಟೆಗೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮೂಡ ಮಾಜಿ ಅಧ್ಯಕ್ಷ ಡಿ.ಧೃವಕುಮಾರ್, ಚಿತ್ರನಟ ದರ್ಶನ್ ತೂಗುದೀಪ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ, ಸಂಸದರಾದ ಧ್ರುವನಾರಾಯಣ್, ಪ್ರತಾಪ್ ಸಿಂಹ, ಶಾಸಕರಾದ ಹೆಚ್.ವಿಶ್ವನಾಥ್, ನಾಗೇಂದ್ರ, ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತಿತರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಚಿಂತಾಮಣಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ನಂಜನಗೂಡು ಸೇರಿದಂತೆ ರಾಜ್ಯದ ಹಲವು ಕಡೆಯಿಂದ ಸುಮಾರು 25ಕ್ಕೂ ಹೆಚ್ಚು ಹಸುಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

Leave a Comment