ಮೈಸೂರಿನಲ್ಲಿ ಹಣ ದುಪ್ಪಟ್ಟು ದಂಧೆ

ಪೊಲೀಸರ ಮೇಲೆಯೇ ಫೈರಿಂಗ್ : ಓರ್ವ ಸಾವು
ಮೈಸೂರು. ಮೇ.16- ಮುಂಬೈನಿಂದ ಬಂದ ತಂಡವೊಂದು ಹಣ ದುಪ್ಪಟ್ಟು ಮಾಡುವ ದಂಧೆಯಲ್ಲಿ ಮೈಸೂರಿನಲ್ಲಿ ಸಕ್ರಿಯವಾಗಿರುವ ಕುರಿತು ಖಚಿತ ಮಾಹಿತಿ ಪಡೆದು ಸ್ಥಳದ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಫೈರಿಂಗ್ ನಡೆಸಲು ಹೋಗಿದ್ದು, ಪೊಲೀಸರು ಜೀವರಕ್ಷಣೆಗಾಗಿ ಗುಂಡು ಹಾರಿಸಿದ ವೇಳೆ ವ್ಯಕ್ತಿಯೋರ್ವ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ನಡೆದಿದೆ.
ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಣ ದುಪ್ಪಟ್ಟು ಮಾಡುವ ದಂಧೆಯೊಂದು ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ವಿಜಯ ನಗರ ಠಾಣಾ ಇನ್ಸಪೆಕ್ಟರ್ ಕುಮಾರ್ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದರು. ಸ್ಥಳಕ್ಕೆ ಕುಮಾರ್ ಅವರು ತೆರಳುತ್ತಿದ್ದಂತೆ ಮೂರು ಮಂದಿ ಅಲ್ಲಿಂದ ಪರಾರಿಯಾಗಿದ್ದು, ಓರ್ವ ಸಿಕ್ಕಿಹಾಕಿಕೊಂಡಿದ್ದ. ಸಿಕ್ಕಿ ಕೊಂಡ ವ್ಯಕ್ತಿ ಸಿನಿಮೀಯ ರೀತಿಯಲ್ಲಿ ಇನ್ಸಪೆಕ್ಟರ್ ಬಳಿ ಇರುವ ಗನ್ ಕಸಿಯಲು ಯತ್ನಿಸಿ ಅವರ ಮೇಲೆಯೇ ಫೈರಿಂಗ್ ಮಾಡಲು ಮುಂದಾಗಿದ್ದ. ಆದರೆ ಅಚಾನಕ್ ಆಗಿ ಪೊಲೀಸರು ಹೊಡೆದ ಗುಂಡು ಅವನಿಗೆ ಸಿಡಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಕೆ.ಆರ್.ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಅವರೆಲ್ಲ ಯಾರು, ಸತ್ತವನು ಎಲ್ಲಿಯವನು ಎಂಬುದರ ಕುರಿತು ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಇನ್ಸಪೆಕ್ಟರ್ ಕುಮಾರ್ ಅವರಿಗೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ. ದಫೇದಾರ್ ಸೋಮ ಆರಾಧ್ಯ ಎಂಬವರಿಗೆ ತಲೆಗೆ ಏಟಾಗಿದ್ದು, ಮೈ ಪರಚಿದ್ದಾರೆ ಎನ್ನಲಾಗಿದೆ.

Leave a Comment