ಮೈಸೂರಿನತ್ತ ಹೆಜ್ಜೆಹಾಕಿದ ಗಜಪಡೆ

ವರದಿ : ಕೆ.ಪ್ರತಾಪ್

ನಾಗರಹೊಳೆ/ಹುಣಸೂರು,ಸೆ.2- ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಜರುಗುವ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಮೊದಲ ತಂಡ ಅಲಂಕೃತಗೊಂಡ ಗಜಗಳಿಗೆ ನಾಗರಹೊಳೆ ದ್ವಾರದ ಬಳಿ ಪುಷ್ಪಾರ್ಚನೆ ಮಾಡುವ ಮೂಲಕ  ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೆಗೌಡ ವೀರನಹೊಸಹಳ್ಳಿ ಗೇಟ್ ಬಳಿ ಇಂದು ಸಂಪ್ರಾದಾಯಿಕವಾಗಿ ಚಾಲನೆ ನೀಡಿದರು.

ಕಳೆದ ನಾಲ್ಕೈದು ವರ್ಷಗಳಿಂದ ನಾಗಪುರ ಹಾಡಿ ಸಮೀಪವಿರುವ ಆಶ್ರಮ ಶಾಲೆ ಬಳಿ ನಡೆಯುತ್ತಿದ್ದ ಗಜಪಡೆ ಕಾರ್ಯಕ್ರಮ ಈ ಬಾರಿ ಹೆಚ್.ವಿಶ್ವನಾಥ್ ಸೂಚನೆ ಮೇರೆಗೆ ಹಿಂದಿನ ಸಂಪ್ರದಾಯದಂತೆ ನಾಗರಹೊಳೆ ದ್ವಾರದ ಮುಂದೆ ಕ್ಯಾಪ್ಟನ್ ಅರ್ಜುನನಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ದೀಪ ಬೆಳಗಿಸಿ ಅರ್ಜುನನ ಟೀಂ ನಗರದತ್ತ ಹೆಜ್ಜೆಹಾಕಲು ಅನುವು ಮಾಡಿಕೊಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ನಾಡ ದೇವತೆ ಚಾಮುಂಡೇಶ್ವರಿ ಈ ಬಾರಿಯ ದಸರಾ ಮಹೋತ್ಸವವನ್ನು ಯಾವ ಕಳಂಕವು ಬಾರದಂತೆ ನ‌ಡೆಸಲು ಬೇಡಿಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮ :

ಸ್ಥಳಿಯ ವೀರನಹೊಸಹಳ್ಳಿ ಆಶ್ರಮ ಶಾಲೆಯ ಆದಿವಾಸಿ ಮಕ್ಕಳು ಹಾಗೂ ಗುರುಪುರ ಕೇಂದ್ರಿಯ ವಿದ್ಯಾಲಯದ ಟಿಬೇಟ್ ಶಾಲಾ ಮಕ್ಕಳಿಂದ ವಿವಿಧ ಸಂಪ್ರಾದಾಯಿಕ ನೃತ್ಯ, ಕಲಾ ತಂಡಗಳು, ವಾದ್ಯ ಮೇಳಗಳು, ಪೂರ್ಣ ಕುಂಭದೊಂದಿಗೆ ಗಜಪಡೆಗಳು ಹೆಜ್ಜೆ ಹಾಕುವ ಮೂಲಕ ಗಣ್ಯರ ಹಾಗೂ ಸಾರ್ವಜನಿಕರ ಮನಸೂರೆಗೊಂಡಿತು.

ಮೈಸೂರಿಗೆ ಹೊರಟ ಆನೆಗಳು :

ಇಂದು ಹೊರಟ ಮೊದಲ ತಂಡದಲ್ಲಿ ಅಂಬಾರಿ ಹೊರುವ 58 ವರ್ಷದ ಅರ್ಜುನ ಸೇರಿದಂತೆ ತನ್ನ ಸಂಗಡಿಗರಾದ 62 ವರ್ಷದ ವರಲಕ್ಷ್ಮಿ, 47 ವರ್ಷದ ಚೈತ್ರ, 36 ವರ್ಷದ ಗೋಪಿ, 5 ವರ್ಷದ ವಿಕ್ರಮ ಹಾಗೂ ಇದೇ ಪ್ರಥಮ ಬಾರಿಗೆ 37 ವರ್ಷದ ಧನಂಜಯ ಮೈಸೂರು ಕಡೆ ಹೆಜ್ಜೆ ಹಾಕಿದವು.

ಪ್ರಮುಖ ಆನೆಗಳ ಗೈರು :

ಸಾಮಾನ್ಯವಾಗಿ ಮೊದಲ ಹಂತದಲ್ಲಿ ಸ್ಥಾನ ಪಡೆಯುತ್ತಿದ ಬಲರಾಮ, ಅಭಿಮನ್ಯು, ದ್ರೋಣ ಆನೆಗಳು ರಾಮನಗರಕ್ಕೆ ಕಾಡನೆ ಸೆರೆ ಹಿಡಿಯಲು ತೆರಳಿದ ಹಿನ್ನೆಲೆ ಎರಡನೇ ಅಂತದಲ್ಲಿ ಮೈಸೂರಿಗೆ ತೆರಳಲು ಸಿದ್ಧತೆ ನಡೆಸಿವೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಬಿ.ಶಂಕರ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಸಿ.ಸಿ.ಎಫ್ ಸಿದ್ರಾಮಪ್ಪ ಚಳಕಾಪುರ, ಡಿ.ಸಿ.ಎಫ್ ರವಿಶಂಕರ್, ತಹಸಿಲ್ದಾರ್ ಮೋಹನ್, ವೀರನಹೊಸಹಳ್ಳಿ ಆರ್.ಎಫ್.ಒ ಅನನ್ಯ ಕುಮಾರ್, ಗ್ರಾ.ಪಂ ಸದಸ್ಯ ಸುಭಾಷ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು, ಸೇರಿದಂತೆ ಆನೇಕರು ಹಾಜರಿದ್ದರು.

ಆನೆಗಳಿಗೆ 34 ಲಕ್ಷ ಮೊತ್ತದ ವಿಮೆ

ದಸರಾ ಮಹೋತ್ಸವದಲ್ಲಿ ಭಾಗವಹಿಸುವ 12 ಆನೆಗಳಿಗೆ 34 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ನ್ಯೂ ಇಂಡಿಯಾ ಅಶೂರೆನ್ಸ್‌ ಕಂಪನಿಯ ವಿಭಾಗೀಯ ವ್ಯವಸ್ಥಾಪಕರಿಗೆ ಪತ್ರ ಬರೆದು ವಿಮೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. 34 ಲಕ್ಷ ವಿಮೆಗಾಗಿ 40,120 ಪ್ರೀಮಿಯಂ ಪಾವತಿಸಲಾಗುತ್ತದೆ. 12 ಮಾವುತ ಹಾಗೂ ಕಾವಾಡಿಗಳಿಗೆ ತಲಾ 1 ಲಕ್ಷ ವಿಮೆ ಮಾಡಲಾಗುತ್ತದೆ.

ಆನೆಗಳು ದಸರಾ ಮೆರವಣಿಗೆ ಹಾಗೂ ತಾಲೀಮು ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿ– ಪಾಸ್ತಿಗೆ ನಷ್ಟ ಉಂಟು ಮಾಡಿದರೆ ಎನ್ನುವ ಕಾರಣಕ್ಕೆ 25 ಲಕ್ಷ ಮೊತ್ತದ ವಿಮೆ ಮಾಡಿಸಲಾಗುತ್ತದೆ. ಈ ವಿಮೆ ಅವಧಿಯು ಸೆ. 2ರಿಂದ ಅ. 31ರ ಅವಧಿಯ ನಡುವೆ ಚಾಲ್ತಿಯಲ್ಲಿ ಇರುತ್ತದೆ.

ಅರ್ಜುನನಿಗೆ ವಿಶೇಷ ಶೆಡ್‌:

ವಿಶೇಷ ಅಂದ್ರೆ, ಕೇವಲ ಮಾವುತ ಕಾವಾಡಿಗಳಿಗಷ್ಟೆಯಲ್ಲದೆ ಅಂಬಾರಿ ಹೊರುವ ಅರ್ಜುನನಿಗೆ ವಿಶೇಷವಾದ ಶೆಡ್‌ ನಿರ್ಮಾಣವಾಗಿದೆ. ಕಾವಾಡಿಗಳು ಮಾವುತರ ಜೊತೆಗೆ, ಅರ್ಜುನನಿಗೆ ವಿಶೇಷ ಆತಿಥ್ಯ ನೀಡಲಾಗುತ್ತದೆ. ಅರ್ಜುನ ಆನೆಯು ಸಾವಿರಾರು ಜನರ ನಡುವೆ ಅಂಬಾರಿ ಹೊತ್ತು ಸಾಗಬೇಕಿರುವುದರಿಂದ ಕಾಡಿನಲ್ಲಿದ್ದ ಆನೆಗೆ ಈ ವಿಶೇಷ ಗುಣವನ್ನು ಮೈಗೂಡಿಸುವ ವಿಶೇಷ ತರಬೇತಿ ನೀಡಬೇಕಿದೆ. ಅಂತೆಯೆ ಅರ್ಜುನನಿಗೆ ಪ್ರತ್ಯೇಕ ಸ್ಥಳದಲ್ಲಿ ವಿಶೇಷ ಆತಿಥ್ಯ ನೀಡಲಾಗುವುದು.

ವಾಸ್ತವ್ಯಕ್ಕೆ ಸಿದ್ಧವಾದ ಟೆಂಟ್‌ಗಳು:

”ಗಜಪಡೆ ಜತೆಯಲ್ಲಿ ಬರುವ ಮಾವುತ ಮತ್ತು ಕಾವಾಡಿಗಳ ಕುಟುಂಬದ ವಾಸ್ತವ್ಯಕ್ಕೆ 18 ಟೆಂಟ್‌ ಸಿದ್ಧವಾಗಿದೆ. ಸದ್ಯ ಇರುವ ಶಾಶ್ವತ ಶೆಡ್‌ಗಳಲ್ಲಿ 5 ರಿಂದ ಆರು ಆನೆಗಳನ್ನು ಇರಿಸಬಹುದಾಗಿದೆ. ಈ ಜಾಗದಲ್ಲಿ ಸದ್ಯ ಅರಮನೆ ಆನೆಗಳನ್ನು ಕಟ್ಟಿಹಾಕಲಾಗುತ್ತಿದೆ. ದಸರಾ ಆನೆಗಳು ಬಂದ ನಂತರ ಈ ಆನೆಗಳನ್ನು ಕೋಡಿ ಸೋಮೇಶ್ವರ ಸ್ವಾಮಿ ದೇವಸ್ಥಾನದ ಬಳಿಗೆ ಸ್ಥಳಾಂತರ ಮಾಡಲಾಗುತ್ತದೆ. ಇದಲ್ಲದೆ ಇನ್ನುಳಿದ ಆನೆಗಳ ವಾಸ್ತವ್ಯಕ್ಕೆ ಹೆಚ್ಚುವರಿಯಾಗಿ ಆರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ,” ಎಂದು ಅರಮನೆ ಮಂಡಳಿ ಉಪನಿರ್ದೇಶಕರ ಟಿ.ಎಸ್‌. ಸುಬ್ರಹ್ಮಣ್ಯ ತಿಳಿಸಿದರು.

ಕಾವಾಡಿಗಳ ಕುಟುಂಬಕ್ಕೆ ಉಡುಗೊರೆ:

ದಸರೆಗೆ ಆಗಮಿಸುತ್ತಿರುವ ಕಾಡಿನ ಮಕ್ಕಳಿಗೆ ಟೆಂಟ್‌ ಶಾಲೆಗೆ ಬೇಕಾದ ವಿಶೇಷ ಟೆಂಟ್‌ ನಿರ್ಮಿಸಲಾಗಿದೆ. ಇದಲ್ಲದೆ ಆಗಮಿಸಿದ ಮಾವುತರು, ಕಾವಾಡಿಗಳ ಪ್ರತಿ ಕುಟುಂಬದವರಿಗೆ ಗ್ಯಾಸ್‌ ಸ್ಟೌವ್‌, ಮಹಿಳೆಯರಿಗೆ ಸೀರೆ, ಪುರುಷರಿಗೆ ಪಂಚೆ, ಶರ್ಟ್‌, ಟವಲ್‌, ಬ್ಲಾಂಕೆಟ್‌, ಚಾಪೆ, ಜಮಖಾನ, ಬಕೆಟ್‌ ಸೇರಿದಂತೆ ಒಟ್ಟು 13ಕ್ಕೂ ಹೆಚ್ಚು ಅವಶ್ಯಕ ವಸ್ತುಗಳಿರುವ ಕಿಟ್‌ ವಿತರಿಸಲಾಗುವುದು.

ಸ್ವಾಗತ ಸೆ. 5ಕ್ಕೆ ಮುಂದೂಡಿಕೆ

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯಕ್ರಮವು ನಾಳೆ (ಸೆ.3) ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಗಜಪಡೆ ಸ್ವಾಗತ ಕಾರ್ಯಕ್ರಮವನ್ನು ಸೆ.5 ಕ್ಕೆ ಮುಂದೂಡಲಾಗಿದೆ ಎಂದು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಸುಬ್ರಹ್ಮಣ್ಯ ಸೆ.5 ರಂದು ಸಂಜೆ 4.30 ರವೇಳೆಗೆ ಗಜಪಡೆಯನ್ನು ಸ್ವಾಗತಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ರೇಷ್ಮೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ನರಸಿಂಹರಾಜ ಕ್ಷೇತ್ರ ಶಾಸಕ ತನ್ವೀರ್ ಸೇಠ್, ದೊಡ್ಡ ಹೆಜ್ಜೂರು ಗ್ರಾ.ಪಂ ಅಧ್ಯಕ್ಷೆ ಮಾಧವಿ ಬಾಲರಾಜ್ ಹಾಗೂ ಸದಸ್ಯರುಗಳು, ಐಜಿಸಿ ಶರತ್ ಚಂದ್ರ , ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಹುಣಸೂರು ವಿಭಾಗಾಧಿಕಾರಿ ನಿತೀಶ್ ಕುಮಾರ್, ತಾಲ್ಲೂಕು ತಹಸೀಲ್ದಾರ್ ಮೋಹನ್, ಡಿ.ಸಿ.ಎಫ್ ಸಿದ್ದರಾಮಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Leave a Comment