ಮೈಸೂರಿಗೆ ಪ್ರತಾಪ್ ಸಿಂಹ ಕೊಡುಗೆ ಏನು ? ಸಿದ್ದು

ಮೈಸೂರು, ಮಾ. ೧೫-  ನಾನು ಮಹದೇವಪ್ಪ  ಬೆಂಗಳೂರು ಮೈಸೂರು ರಸ್ತೆ ಅಭಿವೃದ್ಧಿಪಡಿಸುವಾಗ ಪ್ರತಾಪ್ ಸಿಂಹ ಎಲ್ಲಿದ್ರು, ಅವರ ಕೊಡುಗೆ ಮೈಸೂರಿಗೆ ಏನು ? ನಾವು ಮಾಡಿದ ಕೆಲಸವನ್ನು ತಾನು ಮಾಡಿದ್ದು ಎಂದು ಹೇಳಿ ತಿರುಗುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಪ್ರತಾಪ್ ಸಿಂಹ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ಪ್ರತಾಪ್ ಸಿಂಹ ಮಾತ್ರವಲ್ಲ,  ಬಿಜೆಪಿ ಯಾವ ಸಂಸದರೂ ಯಾವ ಕೆಲಸವನ್ನು ಮಾಡಿಲ್ಲ. ನಮ್ಮ ಧೃವನಾರಾಯಣ್ ಜೊತೆಗೆ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯವರು ಚರ್ಚೆಗೆ ಬರುತ್ತಾರಾ? ಶೋಭಾ ಕರಂದ್ಲಾಜೆ ಬರುತ್ತಾಳಾ, ನಳಿನ್ ಕುಮಾರ್ ಕಟೀಲ್,  ಅನಂತ್ ಕುಮಾರ್ ಹೆಗಡೆ ಚರ್ಚೆಗೆ ಬರುತ್ತಾರಾ? ಏನೂ‌ ಮಾಡದೆ ಸುಮ್ಮನೆ‌ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತುಮಕೂರಿನ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ವೇಣುಗೋಪಾಲ್ ಜೊತೆಯಲ್ಲಿ ಮಾತನಾಡುತ್ತೇನೆ. ನಾನು ಇಲ್ಲಿಯವರ ಜೊತೆ ಮಾತನಾಡುವುದಿಲ್ಲ, ಅದರ ಅಗತ್ಯವಿಲ್ಲ. ಸ್ಥಳೀಯರು ಮಾತನಾಡಿಕೊಳ್ಳಲಿ. ನಾನು 28 ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗುತ್ತೇನೆ‌. ಇದರಲ್ಲಿ ಮಂಡ್ಯ ಹಾಸನ ಎಂಬುದನ್ನು ಪ್ರತ್ಯೇಕಿಸಬೇಡಿ. ನಾವು ಕಾಂಗ್ರೆಸ್‌ನ 20 ಸ್ಥಾನಗಳನ್ನು ಗೆಲ್ಲುತ್ತೇವೆ. ನಮ್ಮಲಿ ಯಾವುದೇ ಬಿರುಕಿಲ್ಲ. ಎ. ಮಂಜು ಪಕ್ಷ ಬಿಡುವುದಿಲ್ಲ. ನಾನು ಅವರ ಜೊತೆ ಮಾತನಾಡಿದ್ದೇನೆ. ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನಮ್ಮ ಜೊತೆಯಲ್ಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12-13  ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ನಾವು ಯಾವುದನ್ನಾದರೂ ಪ್ರಚಾರಕ್ಕೆ ಬಳಸಿಕೊಂಡಿದ್ದೆವಾ? ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಗೊತ್ತಿಲ್ಲವಾ? ಅದಕ್ಕಿಂತಲು ದೊಡ್ಡದಾ ಈ ಸರ್ಜಿಕಲ್ ಸ್ಟೈಕ್ ? ದೇಶದ ರಕ್ಷಣೆ ವಿಚಾರವನ್ನು ಕಾಂಗ್ರೆಸ್ ಯಾವತ್ತೂ ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬಿಜೆಪಿಯವರು ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ ರೈತರ ವಿಚಾರಲ್ಲಿ ಮತ ಕೇಳಿದ್ದಾರಾ? ಭಾವನಾತ್ಮಕ ವಿಚಾರ ಇಟ್ಟುಕೊಂಡು ಅವರು ರಾಜಕಾರಣ ಮಾಡುವುದು. ಗೋಹತ್ಯೆ, ರಾಮಮಂದಿರ ಇತ್ಯಾದಿಗಳ ಬಗ್ಗೆ ಚರ್ಚೆ ಮಾಡ್ತಾರೆ. ಬಡವರ ಬಗ್ಗೆ, ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಲಿ. ಈ ಬಾರಿ ಅವರು ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಹೀಗಾಗಿ ಈ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡ್ತಾ ಇದ್ದಾರೆ. ಸರ್ಜಿಕಲ್ ಸ್ಟ್ರೈಕ್ ನಿಂದ ತಮಗೆ ಲಾಭವಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಸುಮಲತಾ ನಮ್ಮ ಪಕ್ಷದಲ್ಲೇ ಇದ್ದಾರೆ… ನಮ್ಮ ಪಾರ್ಟಿಯಿಂದ ನಿಲ್ಲುತ್ತಿಲ್ಲ

ಸುಮಲತಾ ಸ್ಪರ್ಧೆ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಪಾರ್ಟಿಯಿಂದ ಅವರು ನಿಲ್ಲೊಲ್ಲ. ಹಾಗಾಗಿ ಅವರ ಬಗ್ಗೆ ನಾನು ಮಾತನಾಡೊಲ್ಲ. ಸುಮಲತಾ ಈಗಲೂ ನಮ್ಮ ಪಾರ್ಟಿಯಲ್ಲಿ ಇದ್ದಾರೆ. ಆದರೆ ನಮ್ಮ ಪಾರ್ಟಿಯಿಂದ ಅವರು ನಿಲ್ಲುತ್ತಿಲ್ಲ. ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌‌ಗೆ ಬಿಟ್ಟು ಕೊಟ್ಟಿದ್ದೇವೆ. ಉಳಿದದ್ದು ಅವರಿಗೆ ಬಿಟ್ಟದ್ದು ಎಮದರು. ನಿನ್ನೆ ನಿಖಿಲ್ ಅಭ್ಯರ್ಥಿ ಅಂತ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ  ಕ್ಷೇತ್ರವನ್ನು ಅವರಿಗೆ ಬಿಟ್ಟಾಗಿದೆ. ಜೆಡಿಎಸ್‌ ಯಾರನ್ನು ಬೇಕಾದರೂ ಕ್ಯಾಂಡಿಡೇಟ್ ಅಂತ ಹೇಳಲಿ ಎಂದರು.

ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಚಾಮರಾಜನಗರದಿಂದ ಸ್ಪರ್ಧೆ ಮಾಡೋ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾರು ಎಲ್ಲಿ ಬೇಕಾದರೂ ನಿಂತುಕೊಳ್ಳಲಿ. ಯಾರು ಬೇಕಾದರೂ ಅಭ್ಯರ್ಥಿಯಾಗಲು ಸ್ವತಂತ್ರರು. ಚುನಾವಣೆಗೆ ನಿಲ್ಲೋದು ಅವರವರ ವೈಯುಕ್ತಿಕ ವಿಚಾರ ಆ ಬಗ್ಗೆ ನಾನು ಏನನ್ನು ಹೇಳೋದಿಲ್ಲ ಎಂದು ವಿ.ಶ್ರೀನಿವಾಸ್ ಪ್ರಸಾದ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.

Leave a Comment