ಮೈಸೂರಿಗೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಭೇಟಿ

ಮೈಸೂರು, ಜುಲೈ 12: ಭಾರತೀಯ ಭಾಷಾ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಭಾರತದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಇಂದು ಮೈಸೂರಿಗೆ ಆಗಮಿಸಲಿದ್ದಾರೆ. ಇಂದು ಸಂಜೆ 4ಕ್ಕೆ ದೆಹಲಿಯ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿ ಸಂಜೆ 6.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣರವರು ಉಪರಾಷ್ಟ್ರಪತಿಗಳನ್ನು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಜರ್ ಬಾದ್ ನಲ್ಲಿರುವ ಸರ್ಕಾರಿ ಅತಿಥಿಗೃಹಕ್ಕೆ ಆಗಮಿಸಲಿರುವ ವೆಂಕಯ್ಯನಾಯ್ಡು ಅವರು ಇಂದು ರಾತ್ರಿ ಇಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಮಾನಸ ಗಂಗೋತ್ರಿ ಆವರಣದಲ್ಲಿ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ ಡಾ.ಕೆ.ಎಸ್ ರಾಧಾಕೃಷ್ಣನ್ ಸಭಾಂಗಣ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ಹುಣಸೂರು ರಸ್ತೆಯಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಏರ್ಪಡಿಸಿರುವ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.

ಮೈಸೂರಿನಲ್ಲಿ ನಡೆಯಲಿರುವ ಎರಡು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಉಪರಾಷ್ಟ್ರಪತಿಗಳ ಜೊತೆಗೆ ರಾಜ್ಯಪಾಲ ವಜುಭಾಯಿ ವಾಲಾ ಭಾಗವಹಿಸಲಿದ್ದಾರೆ. ರಾಷ್ಟ್ರಪತಿಗಳ ಆಗಮನದ ಹಿನ್ನೆಲೆ, ಮೈಸೂರು ನಗರ ಮತ್ತು ಜಿಲ್ಲಾ ಘಟಕಗಳಿಂದ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಪರಾಷ್ಟ್ರಪತಿಗಳು ಸಾಗುವ ಮಾರ್ಗದಲ್ಲಿ ಅವರನ್ನು ಕರೆತರಲು ಪೊಲೀಸರು ತಾಲೀಮು ನಡೆಸಿ ಬಂದೋಬಸ್ತ್ ಗೆ ಸಕಲ ತಯಾರಿ ನಡೆಸಿದ್ದಾರೆ ಎಂದು ಪೊಲೀಸ್ ಘಟಕದ ಮೂಲಗಳು ತಿಳಿಸಿದೆ.

Leave a Comment