ಮೈಷುಗರ್ ಸಕ್ಕರೆ ಕಾರ್ಖಾನೆ ಪುನಾರಂಭ

ಮೂರೂವರೆ ವರ್ಷಗಳ ಕಾಲ ಅಧಿಕಾರ ಖಚಿತ : ಸಿ.ಎಂ
ಕೆ.ಆರ್.ಪೇಟೆ. ನ.10:  ನನಗೆ ಜನ್ಮ ನೀಡಿದ ಕೆ.ಆರ್.ಪೇಟೆ ತಾಲೂಕಿನ ಋಣ ನನ್ನ ಮೇಲಿದೆ ಹಾಗಾಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಕ್ಷೇತ್ರದ ಮಾಜಿ ಶಾಸಕ ಕೆ.ಸಿ.ನಾರಾಯಣಗೌಡ ಬೇಡಿಕೆಯಂತೆ ಸರ್ಕಾರದಿಂದ ಅಗತ್ಯ ಅನುಧಾನ ನೀಡಲಾಗುವುದು. ಜೊತೆಗೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಮೈಷುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಪುನಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಮುಂದಿನ ಮೂರೂವರೆ ವರ್ಷಗಳ ಕಾಲ ಅಧಿಕಾರದಲ್ಲಿರುವುದು ಖಚಿತ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ (ಶತಮಾನದ ಶಾಲೆ) ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ,  ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಮಂಡ್ಯ ಮೈಸೂರು ಮತ್ತು ಬೆಂಗಳೂರು, ಕಿದ್ವಾಯಿ ಆಸ್ಪತ್ರೆ ಬೆಂಗಳೂರು, ಸರ್ಕಾರಿ ದಂತ ವೈದ್ಯ ಕಾಲೇಜು ಬೆಂಗಳೂರು, ಜೆ.ಎಸ್.ಎಸ್ ದಂತ ವೈದ್ಯ ಕಾಲೇಜು ಮೈಸೂರು, ಶ್ರೀ ಜಯದೇವ ಹೃದ್ರೋಗಗಳ ಆಸ್ಪತ್ರೆ,  ಮೈಸೂರು ಹಾಗೂ ನ್ಯಾಷನಲ್ ಓರಲ್ ಹೆಲ್ತ್ ಪಾಲಿಸಿ ಘಟಕ ಮಂಡ್ಯ ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಶಾಸಕರನ್ನು ನೋಡಿದ್ದೇನೆ. ಆದರೆ ನಾರಾಯಣಗೌಡರಂತಹ ಸಜ್ಜನ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ  ಪ್ರಾಮಾಣಿಕ ರಾಜಕಾರಣಿಯನ್ನು ನೋಡಿಲ್ಲ. ಇಂತಹ ಒಳ್ಳೆಯ ವ್ಯಕ್ತಿಯನ್ನು ಕೆ.ಆರ್.ಪೇಟೆ ತಾಲೂಕಿನ ಜನತೆ ಸತತ ಎರಡು ಭಾರಿ ಆಯ್ಕೆ ಮಾಡಿ ವಿಧಾನ ಸಭೆಗೆ ಕಳುಹಿಸಿದ್ದಿರಿ. ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವಾದ ಮಾಡಿ ಕಳುಹಿಸಬೇಕು ಈ ಮೂಲಕ ತಾಲೂಕಿನ ಅಭಿವೃದ್ಧಿಗೆ ದುಡಿಯಲು ಅವರಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಈ ಮಣ್ಣಿನಲ್ಲಿ ಜನ್ಮತಾಳಿದ ನಾನು ದೂರದ ಶಿಕಾರಿಪುರದಲ್ಲಿ 7 ಬಾರಿ ಶಾಸಕನಾಗಿ, ಎರಡು ಭಾರಿ ಸಂಸದನಾಗಿ, 4ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಸಹಕಾರಿಯಾಗಿದೆ.  ಮಂಡ್ಯ ಮೈಶುಗರ್ ಕಾರ್ಖಾನೆ, ಪಿಎಸ್.ಎಸ್.ಕೆ ಸಕ್ಕರೆ ಕಾರ್ಖಾನೆಗಳ ಪುನಶ್ವೇತನಗೊಳಿಸಲು ಖಾಸಗಿಯವರಿಗೆ ವಹಿಸಲು ಕೂಡಲೆ ಅಗತ್ಯ ಕ್ರಮ ವಹಿಸುತ್ತೇನೆ. ಹೇಮಾವತಿ ನಾಲಾ ಆಧುನೀಕರಣ, ಕಾಂಕ್ರಿಟ್ ರಸ್ತೆ, ಬಹುಗ್ರಾಮ ಕುಡಿಯುವ ಯೋಜನೆ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯ್ಯಾರ್ಥಿ ನಿಲಯಗಳಿಗೆ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ,  ಮಂದಗೆರೆ-ಹೇಮಗಿರಿ ನಾಲೆಗಳ ಆಧುನೀಕರಣ,  ಪ್ರಾದೇಶಿಕ ಆರ್.ಟಿ.ಓ ಕಛೇರಿ, ಮೈಸೂರು- ಚನ್ನರಾಯಪಟ್ಟಣದ ರಸ್ತೆಯ ಹೆಮ್ಮನಹಳ್ಳಿಯಿಂದ ಪುರ ಗೇಟ್ ವರೆಗೆ ಜೋಡಿ ರಸ್ತೆ ನಿರ್ಮಾಣ, ಶ್ರವಣಬೆಳಗೊಳ ರಸ್ತೆಯಿಂದ ಹೊಸಹೊಳಲು ಸಿಂಗಮ್ಮನಗುಡಿಯ ವರೆಗೆ ಜೋಡಿರಸ್ತೆ ನಿರ್ಮಾಣ, ಗ್ರಂಥಾಲಯವನ್ನು ಒಳಗೊಂಡಂತೆ ಹೈಟೆಕ್ ಪಾರ್ಕ್ ನಿರ್ಮಾಣ, ದೇವಿರಮ್ಮಣ್ಣಿ ಕೆರೆಯ ಸುತ್ತಾ ಜಾಗಿಂಗ್ ಟ್ರ್ಯಾಕ್ ಮತ್ತು ಬೋಟಿಂಗ್ ವ್ಯವಸ್ಯೆ ಸೇರಿದಂತೆ ತಾಲೂಕನ್ನು ರಾಜ್ಯದಲ್ಲಿಯೆ ಮಾದರಿಯಾಗಿ ನಾರಾಯಣಗೌಡರು ಕೇಳಿದಂತೆ ಸಮಗ್ರ ಅಭಿವೃದ್ದಿ ಮಾಡಿಕೊಡುತ್ತೇನೆ ಎಂದ ಅವರು ನಾರಾಯಣಗೌಡರಿಗೆ ಕೊಟ್ಟ ಮಾತಿನಂತೆ ಇಂದು ಆರೋಗ್ಯ ಮೇಳದಲ್ಲಿ ಭಾಗವಹಿಸಿದ್ದೇನೆ ಎಂದರು ಮುಖ್ಯ ಮಂತ್ರಿಗಳು ಹೇಳಿದರು.
ಉಪ ಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಅಶ್ವಥ್‍ನಾರಾಯಣಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ  ನಾರಾಯಣಗೌಡರು ಜಿಲ್ಲಾಡಳಿತವನ್ನು ಮುಂಚೂಣಿಗೆ ತಂದು ಆರೋಗ್ಯ ಮೇಳವನ್ನು ನಡೆಸುತ್ತಿರುವುದು ಶ್ಲಾಘನೀಯವಾದುದು. ದುಡಿದು ತಿನ್ನುವ ನಮ್ಮ ಜನಕ್ಕೆ ಆರೋಗ್ಯ ಭಾಗ್ಯವನ್ನು ಕೊಡಬೇಕಾದದ್ದು ನಮ್ಮ ಸರಕಾರದ ಆದ್ಯ ಕರ್ತವ್ಯ. ಜನರು ಖಾಯಿಲೆಗೆ ತುತ್ತಾದಾಗ ಲಕ್ಷಾಂತರ ಹಣವನ್ನು ಪಾವತಿಸಲು ಜನ ಕಷ್ಟಪಡಬೇಕು. ಅದನ್ನು ಮನಗಂಡು ನಮ್ಮ ಸರಕಾರ ಗುಣಮಟ್ಟದ ಉಚಿತ ಚಿಕಿತ್ಸೆಯನ್ನು ಕೊಡಲು ಸನ್ನದ್ದವಾಗಿದೆ. ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡರು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಿದ್ದಾರೆ. ಅವರು ಕೇಳಿರುವ ಎಲ್ಲಾ ಕೆಲಸಗಳನ್ನು ಮಂಜೂರು ಮಾಡಿಕೊಡುತ್ತೇವೆ. ಸಧ್ಯದಲ್ಲಿಯೆ ಕೆ.ಅರ್.ಪೇಟೆ ಪಟ್ಟಣದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ, ವೈದ್ಯಕೀಯ ವಿಜ್ಞಾನಕ್ಕೆ ಪೂರಕವಾಗಿರುವ ಎಲ್ಲಾ ಕೋರ್ಸುಗಳನ್ನು ಒಳಗೊಂಡ ಹೈಟೆಕ್ ಕಾಲೇಜನ್ನು ಕೂಡಾ ಮಂಜೂರು ಮಾಡಿ ಕೆ.ಆರ್.ಪೇಟೆ ಜನರ ಆಶೋತ್ತರಗಳನ್ನು ಈಡೇರಿಸುತ್ತೇವೆಂದು ತಿಳಿಸಿದರು.
ಉಪಮುಖ್ಯಮಂತ್ರಿ  ಡಾ.ಸಿ.ಎನ್.ಅಶ್ವತ್‍ನಾರಾಯಣ್,  ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಸಂಸದೆ ಸುಮಲತಾಅಂಬರೀಶ್,  ಅನರ್ಹ ಶಾಸಕ ನಾರಾಯಣಗೌಡ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ರಾಜ್ಯ  ಬಿಜೆಪಿ ಮುಖಂಡ ಡಾ. ಸಿದ್ದರಾಮಯ್ಯ,  ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ನಾಗಣ್ಣಗೌಡ,  ತಾಲ್ಲೂಕು ಬಿಜೆಪಿ ಅಧ್ಯಕ್ಷ  ಬೂಕಹಳ್ಳಿ ಮಂಜು, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿಪುಟ್ಟರಾಜು,   ಮನ್‍ಮುಲ್ ನಿರ್ದೇಶಕ ಕೆ.ಜಿ.ತಮ್ಮಣ್ಣ, ಸ್ವಾಮಿ,  ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್, ಸಿಇಓ ಕೆ.ಯಾಲಕ್ಕೀಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ, ಮಂಡ್ಯಮಿಮ್ಸ್ ನಿರ್ದೇಶಕ ಡಾ.ಪ್ರಕಾಶ್, ಉಪವಿಭಾಗಾಧಿಕಾರಿ ಶೈಲಜಾ,   ತಹಸೀಲ್ದಾರ್   ಎಂ.ಶಿವ ಮೂರ್ತಿ,  ಮುಖಂಡರಾದ  ಕೆ.ಎಂ.ಎಫ್  ಮಾಜಿ ನಿರ್ದೇಶಕ ಎಸ್.ಸಿ.ಅಶೋಕ್, ಸಿಂಧುಘಟ್ಟ ಅಶೋಕ್, ದಬ್ಬೇಘಟ್ಟ ಭರತ್ ಮಾಸ್ತಿ, ಬಿ.ಎನ್.ಪುಟ್ಟರಾಜು, ಬಿ.ವರದರಾಜೇಗೌಡ, ಕೆ.ಎನ್.ಕುಮಾರಸ್ವಾಮಿ, ಕೆ.ವಿ.ಅರುಣ್‍ಕುಮಾರ್, ಚಂದ್ರಮೋಹನ್, ಆರ್.ಜಗದೀಶ್, ಶೀಳನೆರೆ ಭರತ್, ಪ್ರಮೀಳಾವರದರಾಜೇಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬೃಹತ್ ಆರೋಗ್ಯ ಮೇಳಕ್ಕೆ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ವೈದ್ಯಕೀಯ ತಪಾಸಣೆಗೆ ಒಳಪಟ್ಟರು. ತಪಾಸಣೆಗೆ ಒಳಗಾದ ಎಲ್ಲಾ ರೋಗಿಗಳಿಗೂ ಉಚಿತ ಔಷಧ ವಿತರಣೆ ಮಾಡಲಾಯಿತು.
ಅಲ್ಲದೇ ಈ ಆರೋಗ್ಯ ಮೇಳದಲ್ಲಿ ರೋಗಪತ್ತೆಯಾದ ಎಲ್ಲಾ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ನಡೆಸಲು  ಅಗತ್ಯ ಅನುಧಾನ ನೀಡಲಾಗಿದೆ ಎಂದು ಆರೋಗ್ಯ ಸಚಿವರು ಹಾಗೂ ಡಿಸಿಎಂ ಡಾ.ಅಶ್ವತ್ ನಾರಾಯಣ್ ಅವರು ಪ್ರಕಟಿಸಿದರು.
ಇದೇ ಸಂದರ್ಭದಲ್ಲಿ ನಾರಾಯಣಗೌಡ ಅಭಿಮಾನಿಗಳ ಬಳಗದ ವತಿಯಿಂದ ಮುಖ್ಯ ಯಡಿಯೂರಪ್ಪ ಅವರಿಗೆ ಬೆಳ್ಳಿ ಖಡ್ಗ ನೀಡಿ  ಹಾಗೂ ಮೈಸೂರು ಪೇಟ ತೊಡಿಸಿ  ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜನಮನ ಸೂರೆಗೊಂಡಿತು.

Leave a Comment