ಮೈನವಿರೇಳಿಸುವ ‘ರಾಮಸ್ವಾಮಿ’ ಎಂಬ ದೇಶಪ್ರೇಮಿಯ ಕಥೆ ;ಮೈಸೂರಿನ ರಾಮಸ್ವಾಮಿ ವೃತ್ತಕ್ಕಿದೆ ಬಲಿದಾನದ ನಂಟು !

ಮೈಸೂರು, ಆ. 15. ಅಂದು ಭಾರತಕ್ಕೆ ಸ್ವಾತಂತ್ರೃ ಸಿಕ್ಕಿ ಕೆಲವೇ ದಿನಗಳು ಕಳೆದಿತ್ತು. ಆದರೆ ಅಂದಿನ ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರ್ ಇನ್ನೂ ಅರಸೊತ್ತಿಗೆ ಬಿಟ್ಟಿರಲಿಲ್ಲ. ಗಣತಂತ್ರ ವ್ಯವಸ್ಥೆಗಾಗಿ ರಾಜ್ಯಾದ್ಯಂತ ಒಂದು ದೊಡ್ಡ ಆಂದೋಲನವೇ ನಡೆದಿತ್ತು. ಈ ಆಂದೋಲನ 3ನೇ ಸೆಪ್ಟೆಂಬರ್ 1947ರಿಂದ 24ನೇ ಅಕ್ಟೋಬರ್ 1947ರವರೆಗೆ ನಡೆಯಿತು.
ಗಣತಂತ್ರಕ್ಕೆ ಒತ್ತಾಯಿಸಿ 13ನೇ ಸೆಪ್ಟೆಂಬರ್ 1947
`ಅರಮನೆಗೆ ಮುತ್ತಿಗೆ’, `ಮೈಸೂರು ಚಲೋ’, `ಜವಾಬ್ದಾರಿ ಸರ್ಕಾರ’ಕ್ಕೆ ಒತ್ತಾಯ ಎಂಬ ವಿವಿಧ ಹೆಸರಿನಲ್ಲಿ ಮೈಸೂರಿನಲ್ಲಿ ದೊಡ್ಡ ಆಂದೋಲನವೇ ನಡೆದಿತ್ತು. ಈ ಆಂದೋಲನದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನರ ದಂಡು ಬರುತ್ತಿತ್ತು. ಇಂತಹ ದಿನಗಳಲ್ಲಿ ನಗರದ ವಿವಿಧ ಕಾಲೇಜು ಹಾಗೂ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಮಹಾರಾಜ ಕಾಲೇಜು ಕಡೆಯಿಂದ ವಿದ್ಯಾರ್ಥಿಗಳ ಒಂದು ಗುಂಪು, ಹಾರ್ಡ್ವಿಕ್ ಶಾಲೆ ಕಡೆಯಿಂದ ಮತ್ತೊಂದು ವಿದ್ಯಾರ್ಥಿಗಳ ಗುಂಪು, ಬನುಮಯ್ಯ ಕಾಲೇಜು ಕಡೆಯಿಂದ ವಿದ್ಯಾರ್ಥಿಗಳ ಒಂದು ಗುಂಪು ಮೆರವಣಿಗೆ ಮೂಲಕ ಸಾಗಿ ಜವಾಬ್ದಾರಿ ಸರ್ಕಾರ ಆಡಳಿತಕ್ಕೆ ಬರುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ನಿಗದಿಯಾಗಿದ್ದ ಐದು ದೀಪಗಳ ವೃತ್ತದಲ್ಲಿ ಜಮಾವಣೆಗೊಂಡರು.
ಇಂತಹ ಪರಿಸ್ಥಿತಿಯಲ್ಲಿ ನಗರದ ಹಾರ್ಡ್ವಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರದ ನಿವಾಸಿ ತಮ್ಮಯ್ಯ ಅವರ ಪುತ್ರ ರಾಮಸ್ವಾಮಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಗರ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ನಗರದ ಐದು ದೀಪಗಳ ವೃತ್ತದಲ್ಲಿ(ಈಗಿನ ರಾಮಸ್ವಾಮಿ ವೃತ್ತ) ಪ್ರತಿಭಟನೆ ನಡೆಸುತ್ತಿದ್ದರು.
ಅಂದಿನ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ನಾಗರಾಜರಾವ್ ವಿದ್ಯಾರ್ಥಿ ಹೋರಾಟ ಹತ್ತಿಕ್ಕುವ ಸಲುವಾಗಿ ಐದು ದೀಪಗಳ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಧ್ವನಿ ಜೋರಾಗಿದ್ದ ಕಾರಣ ಹಾಗೂ ವಿದ್ಯಾರ್ಥಿ ಮುಖಂಡನಾಗಿ ಗುರುತಿಸಿಕೊಂಡಿದ್ದ ರಾಮಸ್ವಾಮಿ ರಾಜ ಪ್ರಭುತ್ವ ಕೊನೆಗಾಣಿಸಿ ಗಣತಂತ್ರ ವ್ಯವಸ್ಥೆ ನೀಡುವಂತೆ ಹತ್ತಿರದಲ್ಲಿದ್ದ ಕಂಬವೇರಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದ.
ಹೋರಾಟ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೇ ಜಿಲ್ಲಾಧಿಕಾರಿ ನಾಗರಾಜರಾವ್ ಗೋಲಿಬಾರ್ ಗೆ ಆದೇಶ ನೀಡಿದ್ದರು. ಈ ಆದೇಶವನ್ನೂ ಉಲ್ಲಂಘಿಸಿ ರಾಮಸ್ವಾಮಿ ಧಿಕ್ಕಾರದ ಘೋಷಣೆ ಕೂಗುತ್ತಿದ್ದುದ್ದನ್ನು ಸಹಿಸದ ಜಿಲ್ಲಾಧಿಕಾರಿ ವಿದ್ಯಾರ್ಥಿ ಮುಖಂಡ ರಾಮಸ್ವಾಮಿ ಹಿಡಿದಿದ್ದ ಭಾರತದ ಬಾವುಟವನ್ನು ಕೆಳಗೆ ಹಾಕುವಂತೆ ಸೂಚನೆ ನೀಡಿದರು.
ವಿದ್ಯಾರ್ಥಿ ಮುಖಂಡ ರಾಮಸ್ವಾಮಿಗೆ ಜಿಲ್ಲಾಧಿಕಾರಿ ಆದೇಶ ಸ್ವಾಭಿಮಾನವನ್ನು ಕೆಣಕಿತ್ತು. ಕೂಡಲೇ ಜಿಲ್ಲಾಧಿಕಾರಿ ಹಿಡಿದಿದ್ದ ರಿವಾಲ್ವರ್ ಅನ್ನು ಕೆಳಗೆ ಹಾಕುವಂತೆ ರಾಮಸ್ವಾಮಿ ಪ್ರತಿಕ್ರಿಯೆ ನೀಡಿದ. ಇದನ್ನು ಸಹಿಸದ ಜಿಲ್ಲಾಧಿಕಾರಿ ನಾಗರಾಜ ರಾವ್, ರಾಮಸ್ವಾಮಿ ಮೇಲೆ ಗುಂಡು ಹಾರಿಸಿದ್ದರು. ಗುಂಡು ದೇಹ ತಗುಲುತ್ತಿದ್ದಂತೆ ರಾಮಸ್ವಾಮಿ ಸ್ಥಳದಲ್ಲೇ ಮೃತಪಟ್ಟ. ಈ ಹೋರಾಟದಲ್ಲಿ ರಾಮಸ್ವಾಮಿ ಮಾತ್ರವಲ್ಲದೇ ಕಡಕೊಳದಿಂದ ಚಾಪೆ ಮಾರಲು ಬಂದಿದ್ದ ತೋರನಾಯ್ಕ ಹಾಗೂ ರಂಗ ಎಂಬುವರಿಗೂ ಗುಂಡು ತಗುಲಿ ಮೃತಪಟ್ಟರು ಎಂಬುದಾಗಿ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಸಾರಾಂಗ ಪ್ರಕಟಿಸಿರುವ ಮೈಸೂರು ದರ್ಶನ ಪುಸ್ತಕದ ಪುಟ ಸಂಖ್ಯೆ 183-92ರಲ್ಲಿ ದಾಖಲಾಗಿದೆ.
ಇದೇ ದಿನ ರಾಜ್ಯದ ವಿವಿಧೆಡೆ ಅರಸೊತ್ತಿಗೆ ಬಿಟ್ಟು ಕೊಡುವಂತೆ ಗಣತಂತ್ರಕ್ಕಾಗಿ ನಡೆದ ಹೋರಾಟದಲ್ಲಿ 37ಮಂದಿ ಮೃತರಾಗುತ್ತಾರೆ. ಈ ಘಟನೆ ನಡೆದ ಕೆಲವು ದಿನಗಳಲ್ಲೇ ಜಯಚಾಮರಾಜ ಒಡೆಯರ್ ತಮ್ಮ ಅರಸೊತ್ತಿಗೆಯನ್ನು ಗಣತಂತ್ರ ವ್ಯವಸ್ಥೆಗೆ ಬಿಟ್ಟುಕೊಡುತ್ತಾರೆ. ನಂತರ 24 ಸೆಪ್ಟೆಂಬರ್ 1947ರ ವಿಜಯದಶಮಿಯಂದು ಜವಾಬ್ದಾರಿ ಸರ್ಕಾರ ರಚನೆಯಾಗುತ್ತದೆ. ಅಂದಿಗೆ ಆ ಹೋರಾಟ ಮುಕ್ತಾಯಗೊಳ್ಳುತ್ತದೆ.
ಅಧಿಕಾರ ವಿಕೇಂದ್ರೀಕರಣಕ್ಕಾಗಿ ನಡೆದ ಹೋರಾಟ ಮೈಸೂರು ಇತಿಹಾಸದಲ್ಲಿ ಒಂದು ಮರೆಯಲಾಗದ ಘಟನೆಯಾಗಿದೆ. ಹೋರಾಟ ಮಾಡಿದ ನೆನಪನ್ನು ಉಳಿಸುವ ಸಲುವಾಗಿ ಈ ವೃತ್ತದಲ್ಲಿ ಸ್ಮಾರಕ ನಿರ್ಮಿಸುವಂತೆ ಆಗ್ರಹಿಸಿ ಕನ್ನಡ ಚಳವಳಿಗಾರ ನಾಗಲಿಂಗಸ್ವಾಮಿ ನೇತೃತ್ವದಲ್ಲಿ ಇದೇ ಸ್ಥಳದಲ್ಲಿ ಮತ್ತೊಮ್ಮೆ ಪ್ರತಿಭಟನಾ ಕಾರ್ಯಕ್ರಮ ನಡೆದಿತ್ತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮೃತ `ರಾಮಸ್ವಾಮಿ’ ಕುಟುಂಬದ ಸದಸ್ಯರನ್ನು ಮೈಸೂರಿಗೆ ಕರೆತಂದು ಇದೇ ಸ್ಥಳದಲ್ಲಿ ಸನ್ಮಾನಿಸಿ ಗೌರವಿಸಿತ್ತು. ಹೋರಾಟದ ನೆನಪಿಗಾಗಿ ಮತ್ತೊಂದು ಹೋರಾಟ ನಡೆಯಬಾರದೆಂಬ ಉದ್ದೇಶದಿಂದ ಎಚ್ಚೆತ್ತ ಮೈಸೂರು ನಗರಪಾಲಿಕೆ ಆಡಳಿತ ಈ ವೃತ್ತಕ್ಕೆ `ರಾಮಸ್ವಾಮಿ ವೃತ್ತ’ ಎಂದು ನಾಮಕರಣ ಮಾಡಿದೆ. ಈ ರಾಮಸ್ವಾಮಿ ವೃತ್ತವು ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ವೃತ್ತಗಳಲ್ಲಿ ಒಂದಾಗಿದ್ದು, ಜನಮಾನಸದಲ್ಲಿ ಬೆರೆತುಹೋಗಿದೆ

Leave a Comment