ಮೈತ್ರಿ ಸರ್ಕಾರ ಉಳಿಸಿಕೊಳ್ಳಿ, ಇಲ್ಲದಿದ್ದಲ್ಲಿ ಪತನ ಖಚಿತ: ಮುಖ್ಯಮಂತ್ರಿಗೆ ಆರ್ ಅಶೋಕ್ ಸಲಹೆ

ಬೆಂಗಳೂರು ,ಜೂ 19 -ನುಗ್ಗೆ ಮರಂತಾಗಿರುವ ಮೈತ್ರಿ ಸರ್ಕಾರ ಸಣ್ಣ ಗಾಳಿ ಬೀಸಿದರೂ ಮುರಿದು ಬೀಳುವ ಹಂತಕ್ಕೆ ತಲುಪಿದ್ದು, ಸರ್ಕಾರ ಬೀಳುವ ಮೊದಲೇ ಆಶ್ರಿತರು ರಕ್ಷಿತ ಪ್ರದೇಶಗಳಿಗೆ ತಲುಪುವುದು ಸೂಕ್ತ ಎಂದು ಪರೋಕ್ಷವಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಸುರಕ್ಷಿತವಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ನಾಯಕರ ಮೇಲೆ ಪ್ರತಿ ದಿನ ಆರೋಪಿಸುವುದೇ ಚಟವಾಗಿದೆ. ಮೊದಲೆಲ್ಲಾ 30 ಕೋಟಿ ರೂ. ಆಹ್ವಾನ ನೀಡಿದರು ಎಂದು ಆರೋಪಿಸುತ್ತಿದ್ದರು. ಈಗ ಹತ್ತುಕೋಟಿ ಗೆ ಬಂದಿದ್ದಾರೆ. ಅವರ ಪಕ್ಷದ ರಾಜ್ಯಾಧ್ಯಕ್ಷರೇ ರಾಜೀನಾಮೆ ಕೊಟ್ಟಿದ್ದಾರೆ. ಅದನ್ನೇ ಅಂಗೀಕರಿಸದೆ ವಿಶ್ವನಾಥ್ ಅವರ‌ ಮನವೊಲಿಸಲೂ ಆಗದೇ ಘಟಾನುಘಟಿ ನಾಯಕರು ಪರದಾಡುತ್ತಿದ್ದಾರೆ. ಮೊದಲು ಕುಮಾರಸ್ವಾಮಿ ಅವರು ಪಕ್ಷದವರನ್ನು ಸರಿಯಾಗಿ ನೋಡಿಕೊಳ್ಳಲಿ ಎಂದು ಟೀಕಿಸಿದರು.
ವಿಧಾನಸಭೆ ಅಧಿವೇಶನ ನಡೆಸಿದರೆ ಆಗ ಜಿಂದಾಲ್ ಸ್ಟೀಲ್ 3667 ಎಕರೆ ಜಮೀನು ಪರಭಾರೆ , ಐಎಂಎ ವಂಚನೆ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ಸಿದ್ದವಿದೆ. ಬಿಜೆಪಿ ಮೇಲೆ ಅನಾವಶ್ಯಕ ಆರೋಪ ಮಾಡುವುದನ್ನು ಬಿಟ್ಟು ಕುಮಾರಸ್ವಾಮಿ ಬರ,ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಲಿ ಎಂದು ಅವರು ಸಲಹೆ ನೀಡಿದರು.

ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅಮಾನತು ಪ್ರಕರಣದಿಂದ ಕಾಂಗ್ರೆಸ್ ಪಕ್ಷದಲ್ಲಿಯೇ ಒಳ ಜಗಳ, ಗುಂಪುಗಾರಿಕೆ ಇರುವುದು ಜಗಜ್ಜಾಹೀರಾಗಿದೆ.ಈ ಹಿಂದೆ ಸಿದ್ದರಾಮಯ್ಯ ಮೋದಿಯವರನ್ನು ಏಕವಚನದಲ್ಲಿ ಟೀಕಿಸುತ್ತಿದ್ದರು. ಈಗ ಅವರದ್ದೇ ಪಕ್ಷದವರಿಂದ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಬೈಗುಳ ಮಾಡಿಸಿಕೊಳ್ಳುವ ಪರಿಸ್ಥಿತಿ ತಲುಪಿದ್ದಾರೆ. ಮುಂದಿನ ದಿನಗಳಲ್ಲಿ‌ ಈ ಒಳ ಜಗಳ, ಗುಂಪುಗಾರಿಕೆ ಇನ್ನಷ್ಟು ತಾರಕಕ್ಕೇರಲಿದೆ. ಸಿದ್ದರಾಮಯ್ಯ ಅವರ ಸ್ಥಿತಿ ಈಗಾಗಲೇ ಅತಂತ್ರವಾಗಿದೆ
ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಅವರಿಗೆ ಬೆಲೆ ಕೊಡದಂತಾಗಿದೆ. ನಾಯಕರು ಗುಂಪುಗಾರಿಕೆ ಮಾಡಿಕೊಂಡು ಹೊಡೆದಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಒಡೆದು ಛಿದ್ರವಾಗುತ್ತಿದೆ ,ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲೇ ಕಾಂಗ್ರೆಸ್ ಪಕ್ಷ ಮಣ್ಣು ಮುಕ್ಕಿದ್ದು , ರಾಜ್ಯದಲ್ಲಿಯೂ ಮೈತ್ರಿ ಮಾಡಿಕೊಂಡು ಹಾಳಾಗಿ ಹೋಗಿದೆ ಎಂದು ಟೀಕಿಸಿದರು.

Leave a Comment