ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಕನಸು ಈಡೇರುವುದಿಲ್ಲ

ದಾವಣಗೆರೆ.ಡಿ.7; ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪ್ರತಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯ ಮುಖಂಡರಾದ ಯಡಿಯೂರಪ್ಪ, ರಾಮುಲು, ಈಶ್ವರಪ್ಪ, ಅಶೋಕ ಹಾಗೂ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಇನ್ನಿತರೆಯವರು ನಾವೇನು ಸನ್ಯಾಸಿಗಳಲ್ಲ, ನಮಗೂ ಸರ್ಕಾರ ರಚಿಸುವ ಆಸೆ ಇದೆ. ಮೈತ್ರಿ ಸರ್ಕಾರ ಉಳಿಯುವುದಿಲ್ಲ ನಾವು ಈಗಾಗಲೇ ಆಪರೇಷನ್ ಕಮಲ ನಡೆಸಿದ್ದು, ಇಂದು, ನಾಳೆ, ನಾಡಿದ್ದು, ದಸರಾ, ದೀಪಾವಳಿ ಮುಗಿದ ತಕ್ಷಣ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈಗಾಗಲೇ ಕಾಂಗ್ರೆಸ್, ಜೆ.ಡಿ.ಎಸ್.ನ 30ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ಕೊಡಲು ಸಿದ್ದರಾಗಿದ್ದಾರೆ.

ಬಿ.ಜೆ.ಪಿ. ಅಧಿಕಾರಕ್ಕೆ ಬಂದೇ ಬರುತ್ತದೆ. ನಾವು ಸರ್ಕಾರ ರಚಿಸಿಯೇ ತೀರುತ್ತೇವೆ ಎಂದು ಪುಂಕಾನುಪುಂಕವಾಗಿ ಕಂಡ-ಕಂಡ ಸಭೆ ಸಮಾರಂಭಗಳಲ್ಲಿ ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಾ, ಎಗ್ಗಿಲ್ಲದೇ ಹೇಳಿಕೆಯನ್ನು ನೀಡುತ್ತಾ, ಕಾಂಗ್ರೆಸ್ ಜೆ.ಡಿ.ಎಸ್. ಶಾಸಕರ ಕುದುರೆ ವ್ಯಾಪಾರಕ್ಕೆ ಮುಂದಾಗಿ ರಾಷ್ಟ್ರದಾದ್ಯಂತ ಛೀಮಾರಿ ಹಾಕಿಸಿಕೊಂಡ ಬಿ.ಜೆ.ಪಿ.ಯವರು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಪ್ರಯತ್ನಿಸುತ್ತಿರುವುದು ಶೋಚನೀಯ ಎಂದು ರಾಜ್ಯ ಜೆಡಿಎಸ್ ವಕ್ತಾರ ಜಸ್ಟೀನ್ ಜಯಕುಮಾರ್ ಹೇಳಿದ್ದಾರೆ.

ದಿನಾ ಒಂದಿಲ್ಲೊಂದು ರೀತಿಯಲ್ಲಿ ಮೈತ್ರಿ ಸರ್ಕಾರವನ್ನು ಬೀಳಿಸುವ ವಿಫಲಯತ್ನ ನಡೆಸುತ್ತಾ ಇರುವ ಹಾಗೂ ನೂತನ ಸರ್ಕಾರದ ಮುಖ್ಯಮಂತ್ರಿಯಾಗುವ ಕನಸಿನಲ್ಲಿರುವ ಯಡಿಯೂರಪ್ಪನವರ ತಿರುಕನ ಕನಸು  ಈಡೇರುವುದಿಲ್ಲ ಬಿ.ಜೆ.ಪಿ.ಯವರಿಗೆ ಏನಾದರೂ ನೈತಿಕತೆ ಇದ್ದರೆ ಮೊದಲು ಜನರು ಕೊಟ್ಟಂತಹ ಆದೇಶಕ್ಕೆ ತಲೆಬಾಗಿ ವಿರೋಧ ಪಕ್ಷದಲ್ಲಿದ್ದುಕೊಂಡು ಕಾರ್ಯನಿರ್ವಹಿಸಬೇಕು ಹಾಗೂ ಮೋದಿಯವರ ಕಿವಿ ಹಿಂಡಿಯಾದರೂ ಈ ದೇಶದ ರೈತರ ಸಾಲ ಮನ್ನಾ, ಹಾಗೂ ವರ್ಷಕ್ಕೆ 2 ಕೋಟಿ ಉದ್ಯೋಗ, ಭಾರತದ ಪ್ರಜೆಗಳ ಖಾತೆಗೆ ರೂ. 15 ಲಕ್ಷ ಹಾಕಿಸುವುದರ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡು ನಾವು ವಚನ ಭ್ರಷ್ಟರಲ್ಲ ಎಂಬುದನ್ನು ತೋರಿಸಿಕೊಡಬೇಕಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುವುದನ್ನು ಬಿಟ್ಟು ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಲಿನ ಭೀತಿಯಿಂದ ಬಿ.ಜೆ.ಪಿ.ಯವರು ರಾಷ್ಟ್ರದ ಅನೇಕ ಕಡೆಗಳಲ್ಲಿ ಕೋಮುವಾದದ ದಳ್ಳುರಿಯನ್ನು ಹಚ್ಚುತ್ತಿದ್ದಾರಲ್ಲದೇ ರಾಮ ಮಂದಿರ ನಿರ್ಮಾಣ ಮಾಡುವ ರಾಮ ಜಪವನ್ನು ಮಾಡುತ್ತಿದ್ದಾರೆ.

ಬಿ.ಜೆ.ಪಿ. ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕುವರೆ ವರ್ಷ ಕಳೆದರೂ ರಾಮ ಮಂದಿರದ ಬಗ್ಗೆ ಜಕಾರ ಎತ್ತದ ಬಿ.ಜೆ.ಪಿ.ಯವರಿಗೆ ಈಗ ಎಲ್ಲಿಂದ ರಾಮ ನೆನಪಿಗೆ ಬಂದನು. ಈ ರೀತಿಯಾಗಿ ಭಾರತವನ್ನು ಧರ್ಮದ ಆಧಾರದ ಮೇಲೆ ಇಬ್ಬಾಗ ಮಾಡುವ ಷಡ್ಯಂತ್ರವನ್ನು ಬಿಟ್ಟು ನಾಡಿನ ಜಲ್ವಂತ ಸಮಸ್ಯೆಗಳ ಬಗ್ಗೆ ಮೊದಲು ಗಮನ ಹರಿಸಿ ಜನಪರ ಕಾಳಜಿಯನ್ನು ಪ್ರದರ್ಶಿಸಬೇಕು.

ಸಂವಿಧಾನಾತ್ಮಕವಾಗಿ ರಚಿಸಲ್ಪಟ್ಟಿರುವ ಮೈತ್ರಿ ಸರ್ಕಾರಕ್ಕೆ ವಿಘ್ನ ತರುವ, ಅಸ್ಥಿರಗೊಳಿಸುವ  ಕೆಲಸವನ್ನು ಮಾಡದೇ ತಮ್ಮ ಜವಾಬ್ದಾರಿಯನ್ನು ಹಾಗೂ ವಿರೋಧ ಪಕ್ಷದಂತಹ ಮಹತ್ವವಾದ ಸ್ಥಾನದ ಗೌರವವನ್ನು ಅರಿತು ನಡೆದುಕೊಂಡು ಜನರು ಜನಪ್ರತಿನಿಧಿಗಳಿಗೆ ನೀಡುವ ಗೌರವ ಹಾಗೂ ರಾಜಕೀಯ ಮುತ್ಸದ್ಧಿತನವನ್ನು ಪ್ರದರ್ಶಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment