ಮೈತ್ರಿ ಸರ್ಕಾರದ ಉಳಿವಿಗಾಗಿ ಉರುಳುಸೇವೆ

ದಾವಣಗೆರೆ.ಜು.9; ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಸುಭದ್ರವಾಗಿರಲೆಂದು ಹಾಗೂ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ 5 ವರ್ಷಗಳ ಕಾಲ ಸಂಪೂರ್ಣ ಅಧಿಕಾರ ನಡೆಸಲಿ ಎಂದು ಪ್ರಾರ್ಥಿಸಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಯುವ ಘಟಕದ ವತಿಯಿಂದ ನಗರದೇವತೆ ಶ್ರೀ ದುರ್ಗಾಂಭಿಕಾ ದೇವಸ್ಥಾನದಲ್ಲಿ ಉರುಳು ಸೇವೆ ಹಾಗೂ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದಕ್ಷಿಣ ಅಧ್ಯಕ್ಷರಾದ ಜೆ.ಅಮಾನುಲ್ಲಾಖಾನ್ ಮಾತನಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೈತ್ರಿ ಸರ್ಕಾರ 5 ವರ್ಷಗಳ ಕಾಲ ಆಡಳಿತ ನಡೆಸಬೇಕು ಎನ್ನುವ ಉದ್ದೇಶದಿಂದ ಉರುಳುಸೇವೆ ಮಾಡಲಾಗಿದೆ. ಕುಮಾರಸ್ವಾಮಿ ಉತ್ತಮ ಆಡಳಿತ ನೀಡುವ ಮುಖ್ಯಮಂತ್ರಿ. ಹಣದ ಆಮಿಷಕ್ಕೆ ಕೆಲವು ಶಾಸಕರು ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಮತದಾರರು ತಮ್ಮ ಕೆಲಸ ಕಾರ್ಯಗಳನ್ನು ಬದಿಗೋತ್ತಿ ಅಮೂಲ್ಯವಾದ ಮತಗಳನ್ನು ಹಾಕಿದ್ದು ಶಾಸಕರು 5 ವರ್ಷಗಳ ಕಾಲ ಉತ್ತಮ ಕೆಲಸ ಮಾಡಲಿ ಎನ್ನುವ ಉದ್ದೇಶದಿಂದ. ಆದರೆ ಕೆಲವು ಶಾಸಕರು ಹಣದ ಆಮಿಷಕ್ಕೆ ಒಳಗಾಗಿ ತಮ್ಮನ್ನು ತಾವು ಮಾರಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಿದ್ದಾರೆ.ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ರಾಜೀನಾಮೆ ತಂತ್ರ ಅನುಸರಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಮುಖಂಡ ಎ. ಶ್ರೀನಿವಾಸ್ ಮಾತನಾಡಿ ಸರ್ಕಾರ ಇಲ್ಲಿಯವರೆಗೂ ಯಾವುದೇ ಜನವಿರೋಧಿ ಕೆಲಸ ಮಾಡಿಲ್ಲ. ಆದರೂ ಸಹ ಶಾಸಕರು ಕುತಂತ್ರ ರಾಜಕಾರಣ ಮಾಡುವುದರ ಮೂಲಕ ಕುಮಾರಸ್ವಾಮಿ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಅವರ ಈ ಕುತಂತ್ರಕ್ಕೆ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದ ಬೆಲೆ ತೆರಬೇಕಾಗುತ್ತದೆ.ಉತ್ತಮ ಆಡಳಿತ ನೀಡಲು ಮುಂದಾಗಿರುವ ಕುಮಾರಸ್ವಾಮಿ ಅವರ ಉತ್ತಮ ಯೋಜನೆಗಳನ್ನು ಕಂಡು ಸಹಿಸದ ಬಿಜೆಪಿ ಮತ್ತು ಕುಮಾರಸ್ವಾಮಿ ವಿರೋಧಿಗಳು ಈ ರೀತಿಯ ಕುತಂತ್ರ ರೂಪಿಸಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ಸೂಕ್ತ. ಹಾಗಾಗಿಯೇ ಕುಮಾರಸ್ವಾಮಿ ಅವರೇ ಮುಂದಿನ ದಿನಗಳಲ್ಲೂ ಮುಖ್ಯಮಂತ್ರಿಯಾಗಿ ಅಧಿಕಾರ ಪಡೆದು ಉತ್ತಮ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.ಈ ವೇಳೆ ಖಾದರ್‍ಭಾಷ, ಧನಂಜಯ,ದಾದಾಪೀರ್ ಸಾಬ್, ಅಂಬರೀಶ್, ಮಾರುತಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

Leave a Comment