ಮೈತ್ರಿ ಪಕ್ಷಗಳ ನಾಯಕರ ಹೋರಾಟದ ಫಲವೇ ಉಪಚುನಾವಣೆ ಗೆಲುವು: ಉಗ್ರಪ್ಪ

ಮಧುಗಿರಿ, ನ. ೮- ಸಮ್ಮಿಶ್ರ ಸರ್ಕಾರದ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಹೋರಾಡಿದ ಫಲದಿಂದ ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ನಾನು ಗೆಲ್ಲಲು ಸಾಧ್ಯವಾಯಿತು ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.

ರಾತ್ರಿ ಪಾವಗಡಕ್ಕೆ ಭೇಟಿ ನೀಡಿ ಶನಿ ಮಹಾತ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ವಾಪಸ್ ತೆರಳುವ ಮಾರ್ಗಮಧ್ಯೆ ಮಧುಗಿರಿಯ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, 3 ಲೋಕಸಭೆ ಹಾಗೂ 2 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಎರಡು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಮ್ಮಿಶ್ರ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ರಾಜ್ಯ ಮತ್ತು ದೇಶದ ಜನತೆ ಕೇಂದ್ರ ಸರ್ಕಾರ ಆಡಳಿತ ವೈಖರಿಯಿಂದ ಈಗಾಗಲೇ ಬೇಸತ್ತಿದ್ದಾರೆ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜನತೆ ನಿರ್ಧರಿಸಿದ್ದರಿಂದ ಬಹಳ ಅಂತರದಿಂದ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.

ಈ ಉಪಚುನಾವಣೆಯ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಗೆ ಹಿಡಿದು ಕೈಗನ್ನಡಿ. ಅದೇ ರೀತಿ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿದಂತೆ ಬಹಳಷ್ಟು ನಾಯಕರ ಪರಿಶ್ರಮ ಈ ಚುನಾವಣೆ ಫಲಿತಾಂಶದಲ್ಲಿದೆ. ಈ ಉಪಚು‌ನಾವಣೆ ಫಲಿತಾಂಶ ಬಿಜೆಪಿಗೆ ತಕ್ಕಪಾಠ ಕಲಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಜಿ. ಶ್ರಿನಿವಾಸಮೂರ್ತಿ, ಚಂದ್ರಶೇಖರ್ ಬಾಬು, ವೆಂಕಟೇಶ್, ಕೃಷ್ಣಪ್ಪ, ಆರ್.ಎಲ್.ಎಸ್. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment