ಮೇವಿಗೆ ಮರ ಏರುವ ಮೇಕೆಗಳು

ಮೊರಾಕ್ಕೊ ದೇಶದ ಮೇಕೆಗಳು, ನಮ್ಮ ಮೇಕೆಗಳ ರೀತಿ ಹುಲ್ಲು ಮೇಯುವ ಮಾಮೂಲಿ ಮೇಕೆಗಳಲ್ಲ. ಎತ್ತರದ ಮರಗಳನ್ನೇರಿ ಮೇಯುತ್ತವೆ.

ಈ ಮೇಕೆಗಳು ತಮ್ಮ ಮೇವಿನ ಶೇ. 70 ರಷ್ಟು ಅವಧಿಯನ್ನು ಮರಗಳ ಮೇಲೇ ಕಳೆಯುತ್ತವೆ.

ಮೊರಾಕ್ಕೊ ದೇಶದ ದಕ್ಷಿಣ ಭಾಗದಲ್ಲಿರುವ ಮೇಕೆಗಳು ನೆಲದ ಮೇಲಿರುವುದಕ್ಕಿಂತ ಹೆಚ್ಚಿನ ಹೊತ್ತು ಮರಗಳ ಮೇಲೆಯೇ ಇರುತ್ತವೆ.

ಇವುಗಳ ಮೇವಿಗೆ ಪ್ರಮುಖ ಆಸರೆಯಾಗಿರುವ ಇಲ್ಲಿರುವ ಆರ್ಗನ್ ಮರಗಳೂ ಮೇಕೆಗಳಿಗೆ ಹೇಳಿಮಾಡಿಸಿದಂತಿದ್ದು, ಅತಿ ಎತ್ತರವಿಲ್ಲದ, ಪೊದೆಪೊದೆಯಾಗಿರುವುದು ಮೇಕೆಗಳು ಮರ ಏರಿ ಅಲ್ಲೇ ನಿಂತು ಮೇಯಲು ಅನುಕೂಲವಾಗಿದೆ.

ಮಳೆ ಅತೀ ಕಡಿಮೆಯಾಗುವ ಈ ಭಾಗದಲ್ಲಿ ಹಸಿರು ಪೈರುಪಚ್ಚೆ ಹೆಚ್ಚಿಲ್ಲದಿರುವುದು ಮೇಕೆಗಳು ಆಹಾರಕ್ಕೆ ಮರಗಳನ್ನು ಆಶ್ರಯಿಸಲು ಕಾರಣವಾಗಿದೆ.

ಮೊರಾಕ್ಕೊದ ದಕ್ಷಿಣ ಭಾಗದಲ್ಲಿ ಬೆಳೆಯುವ ಆರ್ಗನ್ ಹೆಸರಿನ ಮರಗಳೇ ಅಲ್ಲಿಯ ಮೇಕೆಗಳಿಗೆ ಪ್ರಮುಖ ಮೇವಿನ ಮೂಲ. ಮರದ ತುಂಬಾ ಏರಿ ನಿಲ್ಲುವ ಮೇಕೆಗಳು, ಮರದ ಹಣ್ಣು, ಕಾಯಿ ಮತ್ತು ಎಲೆಗಳನ್ನು ಮೇಯುತ್ತವೆ.

ಆರ್ಗನ್ ಮರಗಳು ಹೂ ಬಿಡುವ ಮರಗಳಾದರೂ, ಬೇರೆ ಹೂ ಬಿಡುವ ಮರಗಳಿಗಿಂತ ಭಿನ್ನ. ಅಷ್ಟೆಅಲ್ಲ, ಇವು ದಕ್ಷಿಣ ಮೊರಾಕ್ಕೊದ ಎಲ್ಲಾ ಭಾಗದಲ್ಲೂ ಬೆಳೆಯುವುದಿಲ್ಲ. ಬರೀ 3,100 ಚದರ ಮೈಲುಗಳ ವಿಸ್ತೀರ್ಣದಲ್ಲಿ ಬೆಳೆಯುವ ಈ ಮರಗಳು ಅತಿ ಎತ್ತರದ ಮರಗಳಾಗಿ ಬೆಳೆಯುವುದಿಲ್ಲ. ಬದಲಿಗೆ ಹೆಚ್ಚು ವಿಸ್ತಾರವಾಗಿ ಕೊಂಬೆ – ರೆಂಬೆಗಳು ಚಾಚಿಕೊಳ್ಳುತ್ತವೆ.

26 ರಿಂದ 30 ಅಡಿಗಳ ಎತ್ತರಕ್ಕೆ ಬೆಳೆಯುವ ಈ ಮರಗಳು ಮುಳ್ಳಿನಿಂದ ಕೂಡಿವೆ. ಇದರ ಕೊಂಬೆ-ರೆಂಬೆಗಳು ಪೊದೆ ಪೊದೆಯಾಗಿ ಹಬ್ಬಿಕೊಳ್ಳುವುದರಿಂದ ಮೇಕೆಗಳು ಈ ಮರಗಳ ಮೇಲೆ ಸಲೀಸಾಗಿ ನಿಲ್ಲಲು ಸಹಕಾರಿಯಾಗಿದೆ. ಇದರ ಎಲೆಗಳು, ಹೂಗಳು ಚಿಕ್ಕವು. ಎಲೆಗಳು 2 ರಿಂದ 4 ಸೆಂಟಿ ಮೀಟರ್ ಉದ್ದವಿದ್ದು, ಮೊಟ್ಟೆಯಾಕಾರ (ಒವೆಲ್ ಷೇಪ್) ನಲ್ಲಿದ್ದರೆ, ಹೂಗಳು ಚಿಕ್ಕದಾಗಿದ್ದು, ಇದರ ರೆಕ್ಕೆಗಳು ತಿಳಿಹಳದಿ ಮತ್ತು ಹಸಿರಿನಿಂದ ಕೂಡಿವೆ.

ರುಚಿ ಹತ್ತಿಸಿಕೊಂಡಿವೆ

ಈ ಮರದ ಹಣ್ಣುಗಳ ರುಚಿಯನ್ನು ಹತ್ತಿಸಿಕೊಂಡಿರುವ ಅಲ್ಲಿಯ ಮೇಕೆಗಳು ಮರ ಏರಿದ ಮೇಲೆ ಇಳಿಯಲು ಮನಸ್ಸೇ ಮಾಡದಷ್ಟು ವೇಳೆ ಹಣ್ಣು, ಕಾಯಿ, ಎಲೆಗಳನ್ನು ತಿನ್ನುತ್ತ ಕಾಲ ಕಳೆಯುತ್ತವೆ.

ಮೇಕೆಗಳ ಮೇವಿಗಾಗಿ ಮರಗಳನ್ನು ಆಶ್ರಯಿಸಲು ಇನ್ನೊಂದು ಕಾರಣ. ಇಲ್ಲಿ ಮಳೆ ಕಡಿಮೆ. ಹಸಿರು ಬೆಳೆಯುವುದೂ ಕಡಿಮೆ. ಹೀಗಾಗಿ ಇಲ್ಲಿಯ ಮೇಕೆಗಳು ಅನಿವಾರ್ಯವಾಗಿ ಮರಗಳನ್ನು ಅವಲಂಬಿಸಿವೆ.

ಬೀಜಗಳೂ ದುಬಾರಿ

ಈ ಮರದ ಬೀಜಗಳು ಭಾರಿ ದುಬಾರಿ. ಈ ಬೀಜಗಳಿಂದ ತೆಗೆಯುವ ಎಣ್ಣೆ ಅಂತಾರಾಷ್ಟ್ರೀಯವಾಗಿ ಅತೀ ದುಬಾರಿ ಬೆಲೆಯ ಎಣ್ಣೆಯಾಗಿದ್ದು, ಇದನ್ನು ಅಡುಗೆ ಮತ್ತು ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಹಣ್ಣುಗಳನ್ನು ತಿನ್ನುವ ಮೇಕೆಗಳು, ತಿಂದ ಮೇವನ್ನು ಮರು ಮೆಲುಕು ಹಾಕುವಾಗ ಬೀಜಗಳನ್ನು ಉಗಿಯುತ್ತವೆ.

ಎಲೆ, ಹಣ್ಣುಗಳನ್ನು ಮೇಯ್ದು ಹೋಗುವ ಮೇಕೆಗಳು ಬೇರೊಂದು ಕಡೆ ಮೆಲುಕು ಹಾಕುವಾಗ ಅಲ್ಲಿ ಬೀಜಗಳನ್ನು ಉಗಿಯುವುದರಿಂದ, ಮರದಿಂದ ಬಹುದೂರದ ಭಾಗಗಳಲ್ಲಿ ಬೀಜಗಳು ಬಿದ್ದು, ಅವು ಮೊಳಕೆ ಹೊಡೆದು ಮರಗಳಾಗುತ್ತವೆ. ಮೇಕೆಗಳಿಂದ ಬೀಜಗಳು ಚದುರುವಿಕೆ ಕಾರ್ಯ ನಡೆಯುತ್ತದೆ.

Leave a Comment