ಮೇಲ್ಸೇತುವೆಯಲ್ಲಿ ನೇಣು ಬಿಗಿದು ಟ್ರಕ್ ಚಾಲಕ ಆತ್ಮಹತ್ಯೆ

ತುಮಕೂರು, ಮೇ ೨೨- ನಗರದ ಬಟವಾಡಿಯ ಮೇಲ್ಸೇತುವೆಯ ಕಬ್ಬಿಣದ ರಾಡಿಗೆ ಟ್ರಕ್ ಚಾಲಕನೋರ್ವ ಬೆಲ್ಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ಸಮೀಪದ ಮೂಡೇನಹಳ್ಳಿ ಗ್ರಾಮದ ನಿವಾಸಿ ಹಾಗೂ ಟ್ರಕ್ ಚಾಲಕ ಮಧುಸೂದನ್ (30) ಎಂಬಾತನೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ.
ಈತ ರಾತ್ರಿ ಬೆಂಗಳೂರಿನಿಂದ ಸಿರಾಕ್ಕೆ ಟ್ರಕ್‌ನಿಂದ ಲೋಡ್ ತುಂಬಿಕೊಂಡು ಹೋಗಿದ್ದು, ಸಿರಾದಲ್ಲಿ ಅನ್‌ಲೋಡ್ ಮಾಡಿ ಮತ್ತೆ ಬೆಂಗಳೂರಿನತ್ತ ವಾಪಸ್ಸಾಗುತ್ತಿದ್ದಾಗ ಮಾರ್ಗಮಧ್ಯೆ ತುಮಕೂರು ಬಳಿಗೆ ಟ್ರಕ್ ಬಂದ ನಂತರ ನನಗೆ ತುಮಕೂರಿನಲ್ಲಿ ಸಂಬಂಧಿಕರು ಇದ್ದಾರೆ, ಅವರ ಮನೆಗೆ ಹೋಗಿ ಬರುತ್ತೇನೆ. ನೀವು ಟ್ರಕ್ ತೆಗೆದುಕೊಂಡು ಹೋಗಿ ಎಂದು ತನ್ನ ಸಹ ಚಾಲಕನಿಗೆ ತಿಳಿಸಿ ಟ್ರಕ್‌ನಿಂದ ಕೆಳಗೆ ಇಳಿದ್ದಾರೆ.
ನಂತರ ಸಹ ಚಾಲಕ ಟ್ರಕ್‌ನ್ನು ಬೆಂಗಳೂರಿನತ್ತ ಕೊಂಡೊಯ್ದಿದ್ದಾನೆ.
ಇಂದು ಮುಂಜಾನೆ ನಗರದ ಬಟವಾಡಿ ಸಮೀಪ ವಾಯು ವಿಹಾರ ಮಾಡುತ್ತಿದ್ದ ಸಾರ್ವಜನಿಕರು ಮೇಲ್ಸೇತುವೆಯ ಮೇಲ್ಭಾಗದ ಕಬ್ಬಿಣ ರಾಡಿನಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡು ಗಾಬರಿಯಾಗಿ ತಕ್ಷಣ ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕ್ಯಾತ್ಸಂದ್ರ ಸಬ್‌ಇನ್ಸ್‌ಪೆಕ್ಟರ್ ರಾಮಪ್ರಸಾದ್ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ, ಇದು ಮೇಲ್ನೋಟಕ್ಕೆ ಆತ್ಮಹತ್ಯೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಂದ ನಂತರ ನಿಖರ ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಮೃತ ಮಧುಸೂಧನ್ ಮನೆಯವರು ಸಹ ನಗರಕ್ಕೆ ಆಗಮಿಸಿದ್ದು, ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕ್ಯಾತ್ಸಂದ್ರ ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

 
ಬಟವಾಡಿಯ ಮೇಲ್ಸೇತುವೆ ಬಳಿ ವ್ಯಕ್ತಿ ನೇಣು ಹಾಕಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಎಸ್. ಶಿವಣ್ಣ ಅವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.

Leave a Comment