ಮೇಲ್ಮನೆಯ ಮೊದಲೇ ದಿನ ಬರ, ನೆರೆ ಕುರಿತು ಸಮಗ್ರ ಚರ್ಚೆ; ನಿಯಮ 59 ಅಡಿಯಲ್ಲಿ ಚರ್ಚೆಗೆ ಅವಕಾಶ ನಿರಾಕರಣೆ

ಬೆಂಗಳೂರು, ಅ‌ 10- ನೆರೆ, ಬರ ಕುರಿತ ಚರ್ಚೆಗೆ ಮೊದಲ ದಿನದ ಮೇಲ್ಮನೆ ಕಲಾಪ ಸಾಕ್ಷಿಯಾಯಿತು. ಸಮಗ್ರ ಚರ್ಚೆ, ವಿಪಕ್ಷಗಳ ಪ್ರಶ್ನೆಗೆ ಸಚಿವರ ಉತ್ತರದ ನಡುವೆಯೇ ಕಲಾಪವನ್ನು ಅರ್ಧ ದಿನದ ಮಟ್ಟಿಗೆ ಮುಂದೂಡಲಾಯಿತು.

ಇಂದು ಬೆಳಿಗ್ಗೆ ಕಲಾಪವನ್ನು ಕೈಗೆತ್ತಿಕೊಂಡ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ಸಂತಾಪ ಸೂಚನೆ ನಿರ್ಣಯ ಮಂಡಿಸಲು ಮುಂದಾದರು. ಇತ್ತೀಚೆಗೆ ಅಗಲಿದ ಗಣ್ಯರಾದ ಪ್ರವೀಣ ಕಮಲಾನಿ, ಎ.ಕೆ.ಸುಬ್ಬಯ್ಯ, ಉಮೇಶ್ ಭಟ್, ಸಿ.ವೀರಭದ್ರಯ್ಯ, ಅರ್ಜುನರಾವ್ ಹಿಶೋಬಿಕರ್, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರಿಗೆ ಸದನದಲ್ಲಿ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಮೇಲ್ಮನೆ ಸಭಾ ನಾಯಕರನ್ನಾಗಿಯೂ ಹಾಗೂ ಹಿರಿಯ ಸದಸ್ಯ ಮಹಾಂತೇಶ್ ಕವಟಗಿ ಮಠ ಇವರನ್ನು ಸರ್ಕಾರಿ ಮುಖ್ಯ ಸಚೇತಕರಾಗಿ ಬಿಜೆಪಿ ಆಯ್ಕೆ ಮಾಡಿರುವ ಬಗ್ಗೆ ಸಭಾಪತಿ ಪ್ರಕಟಿಸಿದರು.

ಕಾಂಗ್ರೆಸ್ ನ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್ ಅವರನ್ನು ಪರಿಷತ್ ವಿಪಕ್ಷ ನಾಯಕ, ಬಸವರಾಜ ಹೊರಟ್ಟಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಉಪನಾಯಕರಾಗಿ ಮರಿತಿಬ್ಬೇಗೌಡ, ಜೆಡಿಎಸ್ ಎಸ್ ಸಚೇತಕರಾಗಿ ಚೌಡರೆಡ್ಡಿ ತೂಪಲ್ಲಿ ನೇಮಕವಾಗಿರುವ ಬಗ್ಗೆ  ಪ್ರತಾಪ್ ಚಂದ್ರಶೆಟ್ಟಿ ಪ್ರಕಟಿಸಿದರು‌

ನೆರೆ ವಿಚಾರ ಚರ್ಚೆಗೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ನಿಲುವಳಿ‌ ಸೂಚನೆ ಮಂಡಿಸಿ, ಪ್ರವಾಹದಿಂದ 1.80 ಲಕ್ಷ ಮನೆಗಳು ಸಂಪೂರ್ಣ ನಾಶವಾಗಿದ್ದು, 22 ಜಿಲ್ಲೆಗಳ 150 ಕ್ಕೂ ಹೆಚ್ಚು ತಾಲೂಕುಗಳು ಹಾನಿಯಾಗಿವೆ. ಲಕ್ಷಾಂತರ ಜನ, ಜಾನುವಾರು ಬೀದಿಗೆ ಬಿದ್ದು‌ ಸಂತ್ರಸ್ತರ ಬದುಕು ದುಸ್ತರವಾಗಿದೆ ಎಂದರು.

ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದವರಿಗೆ ಸೂಕ್ತ ವ್ಯವಸ್ಥೆಯಿಲ್ಲ. ಕೋಟ್ಯಂತರ ರೂಪಾಯಿ ಬೆಳೆ ನಷ್ಟ ಆಗಿದೆ. ಪ್ರವಾಹದಲ್ಲಿ ಸಿಕ್ಕವರ ಸ್ಥಿತಿ ಶೋಚನೀಯವಾಗಿದೆ. 26 ಸಾವಿರ ಕಿಲೋಮೀಟರ್ ನಷ್ಟು ರಸ್ತೆ ನಾಶ, ಶಾಲಾ , ಪಂಚಾಯತ್ ಕೊಠಡಿಗಳು, ಸರ್ಕಾರಿ ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ ಎಂದರು.

ಈ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಒತ್ತಾಯಿಸಿದಾಗ, ಸಚಿವ ಆರ್.ಅಶೋಕ್ ಮಾತನಾಡಿ, 118 ವರ್ಷಗಳ ಬಳಿಕ‌ ರಾಜ್ಯದಲ್ಲಿ ಈ ಬಾರಿ ಇಂತಹ ಪ್ರವಾಹ ಆಗಿದೆ. ಮಹಾರಾಷ್ಟ್ರದ ಸುಮಾರು 6 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಕಾರಣ ಹಾಗೂ ಅತಿಹೆಚ್ಚು ಮಳೆ ಸುರಿದಿರುವುದೇ ಹಾನಿಗೆ ಕಾರಣ ಎಂದರು.

22 ಜಿಲ್ಲೆಯ 103 ತಾಲೂಕು ಹಾನಿಯಾಗಿದ್ದು, ಸರ್ಕಾರ ಪ್ರವಾಹವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ. ಪ್ರವಾಹದಲ್ಲಿ 7 ಲಕ್ಷ ಜನರನ್ನು‌ ನಾಲ್ಕು ಹೆಲಿಕ್ಯಾಪ್ಟರ್ ಗಳ ಮೂಲಕ ಸ್ಥಳಾಂತರ ಮಾಡಲಾಗಿದೆ. ಎನ್ ಡಿಆರ್ ಎಫ್, ಎಸ್ ಡಿ.ಆರ್.ಎಫ್, ಅಗ್ನಿಶಾಮಕ ದಳ ಸೇರಿದಂತೆ ಅನೇಕ ತಂಡಗಳು ಕೆಲಸ ಮಾಡಿ ದೊಡ್ಡ ಪ್ರಮಾಣದಲ್ಲಿ ರಕ್ಷಣೆ ಮಾಡಿದೆ ಎಂದು ಅಶೋಕ್ ಸದನಕ್ಕೆ ವಿವರಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಪರಿಹಾರ ಮೊತ್ತ ಬದಲಾವಣೆ ಮಾಡಲಾಗಿದೆ ಎಂದ ಕಂದಾಯ ಸಚಿವರು,

ನೆರೆಯಿಂದ ಒಟ್ಟು 1,20,406 ಮನೆ ಹಾನಿಯಾಗಿದ್ದು, ಇದನ್ನು  ಎ,ಬಿ,ಸಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ- ಶೇ.100 ಹಾನಿಯಾದ ಮನೆಗಳಿಗೆ 5 ಲಕ್ಷ, ಬಿ 25- ಶೇ. 75ರಷ್ಟು ಹಾನಿಯಾದ ಮನೆಗಳಿಗೂ 5 ಲಕ್ಷ ಘೋಷಣೆ, ಸಿ- 15 ಶೇಕಡಾ ಶೇಕಡಾ 25ರಷ್ಟು  ಹಾನಿಯಾದ ಮನೆಗಳು 50 ಸಾವಿರ ಘೋಷಣೆ ಮಾಡಲಾಗಿದೆ.

ಈ ಮೊದಲು ಸರ್ಕಾರ ಹಾನಿಯಾದ ಮಳೆಗಳಿಗೆ 1 ಲಕ್ಷ ಘೋಷಣೆ ಮಾಡಿತ್ತಾದರೂ ಹೆಚ್ಚುವರಿಯಾಗಿ 4 ಲಕ್ಷ ಘೋಷಣೆ ಈಗ ಮಾಡಲಾಗಿದೆ.  ಸಿ  ವಲಯದ ಮನೆಗಳಿಗೆ 25 ಸಾವಿರ ಘೋಷಣೆ ಮಾಡಲಾಗಿತ್ತು. ಇದನ್ನು ಬದಲಾವಣೆ ಮಾಡಿ ಹೆಚ್ಚುವರಿ 25 ಸಾವಿರ ಹೆಚ್ಚಳ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಿಯಮ 59 ಅಡಿಯಲ್ಲಿ ನೆರೆ ಸಂಬಂಧ ಚರ್ಚೆಗೆ ಕಾಂಗ್ರೆಸ್ ಬಿಗಿಪಟ್ಟು ಹಿಡಿದಾಗ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಇದನ್ನು ನಿಯಮ 68 ರಡಿಯಲ್ಲಿ ಚರ್ಚೆ ಮಾಡೋಣ ಎಂದರು. ಪೂಜಾರಿ ಮಾತಿಗೆ ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಕಿಡಿಕಾರಿದರು. ಆಗ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣವುಂಟಾಗಿ ಆಡಳಿತ- ವಿಪಕ್ಷಗಳಿಂದ ಪರಸ್ಪರ ನಡುವೆ ಮಾತಿನ ಚಕಮಕಿ‌ ನಡೆಯಿತು.

ನಿಯಮ 59 ರಲ್ಲಿ ಚರ್ಚೆ ಮಾಡಲು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಒತ್ತಾಯಿಸಿದರಾದರೂ ಸಭಾಪತಿಗಳು ಇದಕ್ಕೆ ಅವಕಾಶ ನೀಡಲಿಲ್ಲ.

ಸಭಾಪತಿಗಳಿಂದ ನಿಯಮ 68 ಅಡಿ ಚರ್ಚೆ ಗೆ ಅವಕಾಶ ನೀಡಲಾಯಿತು. ಆಗ ಸಚಿವ ಅಶೋಕ್ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿರುವ  ನೆರೆ ವರದಿಯನ್ನು ಕೇಂದ್ರ ತಳ್ಳಿಹಾಕಿಲ್ಲ ಎಂದು ಸ್ಪಷ್ಟನೆ ನೀಡಿದರು.

ನೀರು ನುಗ್ಗಿದ ಮನೆಗಳನ್ನು ಸೇರಿ  ಕೇಂದ್ರಕ್ಕೆ ವರದಿ ಕಳುಹಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ಬಿದ್ದುಹೋದ ಮನೆಗಳಿಗೆ ಮಾತ್ರ ಪರಿಹಾರ ಎಂದು ಹೇಳಿದೆ. ಹೀಗಾಗಿ ಮನೆಗಳ ಪ್ರಮಾಣ ಕಡಿಮೆ ಆಗಿದೆ. ನೀರು ನುಗ್ಗಿ ಅವಸ್ಥೆಯಾದ ಮನೆಗಳಿಗೆ 10 ಸಾವಿರ ಪರಿಹಾರ ನೀಡಲಾಗಿದೆ. ಅಕ್ರಮವಾಗಿ ಮನೆ ಕಟ್ಟುಕೊಂಡು ಮಳೆಯಿಂದ ಬಿದ್ದು ಹೋಗಿದ್ದಲ್ಲಿ ಅವರಿಗೂ ಲಕ್ಷ ಪರಿಹಾರ ಕೊಡಲಾಗುತ್ತದೆ. ದಾಖಲೆ ಇಲ್ಲದ  ನಿರ್ಮಿಸಿದ್ದ ಮನೆ ಬಿದ್ದು ಹೋದವರಿಗೂ ಪರಿಹಾರ ನೀಡಲಾಗುವುದೆಂದು‌ ಸ್ಪಷ್ಟಪಡಿಸಿದರು.

ಅಶೋಕ್ ಸ್ಪಷ್ಟನೆಗೆ ತೃಪ್ತರಾಗದ  ಎಸ್.ಆರ್.ಪಾಟೀಲ್ , ಒಂದೇ ಮನೆಯಲ್ಲಿ ಮೂರು ನಾಲ್ಕು ಕುಟುಂಬ ಇದ್ದವರಿಗೂ ಪರಿಹಾರ ಕೊಡುವಂತೆ ಆಗ್ರಹಿಸಿದರು. ಇದಕ್ಕೆ ಅಶೋಕ್ ವಿರೋಧ ವ್ಯಕ್ತಪಡಿಸಿ, ನೀವು 60 ವರ್ಷ ಸರ್ಕಾರ ನಡೆಸಿದ್ದೀರಿ. ಎಲ್ಲರಿಗೂ ಹೇಗೆ ಪರಿಹಾರ ಕೊಡಲು ಸಾಧ್ಯ ಎಂಬುದನ್ನು ತಿಳಿಯದಿದ್ದರೆ ಹೇಗೆ ? ಎಂದರು.

ಅಶೋಕ್ ಮಾತಿಗೆ ಕಾಂಗ್ರೆಸ್ ನ ಜಯಮಾಲ ಅಡ್ಡಿಪಡಿಸಿ, 60 ವರ್ಷ ನಾವು ಆಡಳಿತ ಮಾಡಿದ್ದೇವೆ. ನೀವೇನೂ ಮಾಡಿಲ್ಲ ಎಂದು ಹೇಳಬೇಡಿ. ಇದು ಜನರ ಕಷ್ಟದ ವಿಚಾರ. ಇದರಲ್ಲಿ ರಾಜಕೀಯ ಬೇಡವೆಂದು ಮನವಿ‌‌ ಮಾಡಿದರು.

ಆಗ ಜಯಮಾಲಾಗೆ ತಿರುಗೇಟು ಕೊಟ್ಟ ಅಶೋಕ್, ಯಾರನ್ನೋ ಟೀಕಿಸುವ ಉದ್ದೇಶ ತಮ್ಮದಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ನೀವು ಸಹ ಸಚಿವರಾಗಿ ಕೆಲಸ ಮಾಡಿದವರು. ಒಂದೇ ಕುಟುಂಬದಲ್ಲಿ ನಾಲ್ಕೈದು ಜನರಿಗೆ ಪರಿಹಾರ ಕೊಡಲು ಸಾಧ್ಯವೇ ? ತಮಗೂ ಈ ಬಗ್ಗೆ ಅನುಭವ ಇದೆ ಅಲ್ಲವೇ ? ಎಂದು ಪ್ರಶ್ನಿಸಿದರು.

ಆಗ ಅಶೋಕ್ ಮಾತಿಗೆ ವಿರೋಧವ್ಯಕ್ತಪಡಿಸಿದ ಪಾಟೀಲ್, ಇಂದಿಗೂ ಪ್ರಜಾಪ್ರಭುತ್ವ ಇಷ್ಟರ ಮಟ್ಟಿಗೆ ಉಳಿದಿದೆ ಎನ್ನುವುದಾದರೆ ಅದಕ್ಕೆ 60 ವರ್ಷದ ಕಾಂಗ್ರೆಸ್  ಸರ್ಕಾರವೇ ಕಾರಣ ಎಂದರು.

ಈ ಸಂದರ್ಭದಲ್ಲಿ ಆಡಳಿತಾರೂಢ ಹಾಗೂ ವಿಪಕ್ಷ ಸದಸ್ಯರ ನಡುವೆ ಸದನದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ಮತ್ತೆ ಮುಂದುವರೆದಾಗ, 60 ವರ್ಷ ಅಭಿವೃದ್ಧಿ ಮಾಡಿಲ್ಲ ಎಂದ ಬಿಜೆಪಿ ಸದಸ್ಯರು ಕಾಂಗ್ರೆಸ್ ನವರನ್ನು ಬಲವಾಗಿ ಟೀಕಿಸಿದರು. ಬಿಜೆಪಿ ಸದಸ್ಯರ ಮಾತಿಗೆ ಕಾಂಗ್ರೆಸ್ ಶಾಸಕರ ವಿರೋಧ ವ್ಯಕ್ತಪಡಿಸಿದಾಗ ಸಭಾಪತಿ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಪಡಿಸಿದರು‌.

ಎಸ್.ಆರ್.ಪಾಟೀಲ್  ಮತ್ತೆ ಮಾತು ಮುಂದುವರೆಸಿ, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ನಿಯಮದಂತೆ ಪರಿಹಾರ ಕೊಟ್ಟರೆ ಏನು ಪ್ರಯೋಜನವಾಗದು. ನಿಯಮಗಳನ್ನೂ ಮೀರಿದ ನಷ್ಟವಾದ್ದರಿಂದ ನಿಯಮ ಸಡಿಲ ಮಾಡಿ ಪರಿಹಾರ ಘೋಷಣೆ ಮಾಡಿ ಎಂದು ಸದನದಲ್ಲಿ ಸರ್ಕಾರ ಕ್ಕೆ ಒತ್ತಾಯಿಸಿದರು.

ಒಂದೇ ಮನೆಯಲ್ಲಿ ನಾಲ್ಕೈದು ಕುಟುಂಬ ಇದೆ. ಅವರ ಕಷ್ಟ ನಿಮಗೆ ಗೊತ್ತಿಲ್ಲ. ನೀವು ಬೆಂಗಳೂರಿನ  ಜನ. ನಿಮಗೆ ಈ ಬಗ್ಗೆ ಏನು ಗೊತ್ತಿಲ್ಲ ಎಂದು ಅಶೋಕ್ ಅವರನ್ನು ತಿವಿಯುವ ಕೆಲಸ ಪಾಟೀಲ್‌ ಮಾಡಿದರು.

ಪಾಟೀಲ್ ಮಾತಿಗೆ ತಕ್ಕ ಉತ್ತರ ನೀಡಿದ ಅಶೋಕ್, ಮೊದಲು ಬೆಂಗಳೂರು ಚಿಕ್ಕದಾಗಿತ್ತು. ಮೊದಲು ಜಾಲಹಳ್ಳಿಯಲ್ಲಿ ವಾಸವಿದ್ದ  ‌ತಾವು ಈಗ ಪದ್ಮನಾಭನಗರದಲ್ಲಿ‌ ಇರುವುದಾಗಿ ಹೇಳಿದರು.

ಜಾಲಹಳ್ಳಿ ಮೊದಲು ಹಳ್ಳಿಯೇ ಆಗಿತ್ತು.  ಈಗ ಬೆಳೆದು ಬೆಳೆದು ನಗರ ಆಗಿದೆ ಅಷ್ಟೆ.‌ ರೈತರ ಕೆಲಸ ಮಾಡಿದ ಅನುಭವವಿರುವ ತಾವು ಬಾಲ್ಯದಲ್ಲಿ  ಬೆಳಗ್ಗೆ 6 ಗಂಟೆಗೆ ಎದ್ದು ಜೋಳ ಕಿತ್ತು ನಂತರ ಶಾಲೆಗೆ ಹೋಗಬೇಕಿತ್ತು. ರೈತರ ಕಷ್ಟ ತಮಗೂ ಗೊತ್ತಿದೆ ಎಂದರು.

ಮೂಲ ಬೆಂಗಳೂರಿಗರು ಬೆಂಗಳೂರಿನಲ್ಲಿ ಶೇಕಡಾ25ರಷ್ಟು ಮಾತ್ರವೇ ಇದ್ದಾರೆ. ಉಳಿದವರು ಬೇರೆ ಜಿಲ್ಲೆ, ಬೇರೆ ರಾಜ್ಯಗಳಿಂದ ಬಂದು ನೆಲೆಸಿದ್ದಾರೆ ಎಂದು‌ ಅಶೋಕ್ ಎಸ್.ಆರ್.ಪಾಟೀಲ್ ಕಾಲೆಳೆದರು.

ಈ ಸಂದರ್ಭದಲ್ಲಿ ಚರ್ಚೆ ಅರ್ಧಕ್ಕೆ ‌ಮೊಟಕುಗೊಳಿಸಿದ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಭೋಜನ ವಿರಾಮದ ಬಳಿಕ ಚರ್ಚಿಸೋಣ ಎಂದು ಕಲಾಪವನ್ನು ಮಧ್ಯಾಹ್ನ 3.30 ಕ್ಕೆ ಮುಂದೂಡಿದರು.

Leave a Comment