ಮೇಲ್ಮನೆಯಲ್ಲೂ ಪಟ್ಟು

ಬೆಂಗಳೂರು, ಜೂ. ೧೯- ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಬಂಧಿಸಲು ಸೂಚನೆ ನೀಡಿರುವ ಅರಣ್ಯ ಸಚಿವ ಬಿ. ರಮಾನಾಥ್ ರೈ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುವ ಬಿಜೆಪಿ ಸದಸ್ಯರ ಆಗ್ರಹ ವಿಧಾನ ಪರಿಷತ್‌ನಲ್ಲಿಂದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲಕ್ಕೂ ಕಾರಣವಾಯಿತು.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ತಾರಾ ಅನುರಾಧ, ಮಂಗಳೂರಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸಲು ಸೂಚನೆ ನೀಡಿರುವ ಸಚಿವ ರಮಾನಾಥ್ ರೈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ದನಿಗೂಡಿಸಿ ಅವರನ್ನು ಬಂಧಿಸಲು ಅವರೇನು ಕೊಲೆ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಆಹಾರ ಮತ್ತು ನಾಗರೀಕ ಸಚಿವ .ಯು.ಟಿ. ಖಾದರ್ ಹಾಗೂ ಆಡಳಿತ ಪಕ್ಷದ ಮುಖ್ಯ ಸಚೇತಕ ಐವಾನ್ ಡಿಸೋಜ, ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಯೇ, ಇಲ್ಲವೇ ಎನ್ನುವ ಬಗ್ಗೆ ಅವರು ಮಾಡಿರುವ ಭಾಷಣದ ಆಡಿಯೋ ನೋಡಿ ಎಂದು ತಿರುಗೇಟು ನೀಡಿದರು.

ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ, ಗಲಾಟೆ ನಡೆಯಿತು.  ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಧ್ಯೆ ಪ್ರವೇಶಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಕಾಪಾಡುವುದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಮಾನಾಥ್ ರೈ ಅವರ ಕರ್ತವ್ಯ. ಪ್ರಚೋದನಾಕಾರಿ ಭಾಷಣದ ಹಿನ್ನೆಲೆಯಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದು ರಮಾನಾಥ್ ರೈ ಕ್ರಮವನ್ನು ಸಮರ್ಥಿಸಿಕೊಂಡರು.

ಸಚಿವರು ಹೇಳಿದಾಕ್ಷಣ ಪೊಲೀಸರು ಬಂಧಿಸುವುದಿಲ್ಲ. ಪೊಲೀಸರೂ ಕೂಡ ಕಾನೂನು ಬಿಟ್ಟು ಏನನ್ನೂ ಮಾ‌ಡುವುದಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ತಪ್ಪಿಸತ್ಥರಾಗಿದ್ದರೆ, ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಪ್ರಚೋದನಾಕಾರಿ ಭಾಷಣ ಮಾಡಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಹಿನ್ನೆಲೆಯಲ್ಲಿ ಈ ರೀತಿ ಉತ್ತರ ನೀಡಿದ್ದಾರೆ ಎಂದರು.

Leave a Comment