ಮೇಯರ್ ಪಟ್ಟಕ್ಕೆ ಅಲ್ಪ ಸಂಖ್ಯಾತರ ಲಾಬಿ

ಬೆಂಗಳೂರು, ಜೂ. ೧೨- ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟದ ಮುಂದಿನ ಆಡಳಿತದಲ್ಲಿ ಮೇಯರ್ ಸ್ಥಾನ ತಮಗೇ ನೀಡಬೇಕೆಂದು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಬಿಬಿಎಂಪಿ ಸದಸ್ಯರು, ಕಾಂಗ್ರೆಸ್ ಮತ್ತು ಜೆಡಿಎಸ್ ವರಿಷ್ಠರಲ್ಲಿ ಒತ್ತಡ ಹೇರಲು ತೀರ್ಮಾನಿಸಿದ್ದಾರೆ.
ಮೇಯರ್ ಗಂಗಾಂಬಿಕೆ ಅವರ ಅಧಿಕಾರಾವಧಿ ಸೆಪ್ಟೆಂಬರ್ ಅಂತ್ಯಕ್ಕೆ ಮುಗಿಯಲಿದೆ. ಹಾಗಾಗಿ ಮುಂದಿನ ಮೇಯರ್ ಸ್ಥಾನವನ್ನು ಅಲ್ಪಸಂಖ್ಯಾತರಿಗೆ ನೀಡಬೇಕೆಂದು ವರಿಷ್ಠರಿಗೆ ಈಗಾಗಲೇ ಮನವಿ ಮಾಡಿದ್ದಾರೆ.
ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಸಭೆ ಸೇರಿರುವ ಅಲ್ಪಸಂಖ್ಯಾತ ಬಿಬಿಎಂಪಿ ಸದಸ್ಯರು ಹೇಗಾದರೂ ಮಾಡಿ ಮುಂದಿನ ಮೇಯರ್ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ೧೬ ಸದಸ್ಯರುಗಳಿದ್ದಾರೆ. ಕಳೆದ ೧೫ ವರ್ಷಗಳಿಂದ ಮೇಯರ್‌ಗಿರಿ ಅಲ್ಪಸಂಖ್ಯಾತರಿಗೆ ದಕ್ಕಿಲ್ಲ. ಪ್ರತಿಬಾರಿಯೂ ಇತರ ಸಮುದಾಯಗಳಿಗೆ ಮೇಯರ್ ಸ್ಥಾನ ಲಭಿಸುತ್ತಿದೆ. ಈ ಬಾರಿ ಮೇಯರ್ ಸ್ಥಾನವನ್ನು ನೀಡಲೇಬೇಕೆಂದು ಅಲ್ಪಸಂಖ್ಯಾತ ಸಮುದಾಯದ ಸದಸ್ಯರಾದ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಶಿಕ್ಷಣ ಸ್ಥಾಯಿ ಅಧ್ಯಕ್ಷ ಇಮ್ರಾನ್ ಪಾಷ, ಆಡಳಿತ ಪಕ್ಷದ ಮಾಜಿ ನಾಯಕ ರಿಜ್ವಾನ್ ಅಹಮದ್ ಸೇರಿದಂತೆ, ಮತ್ತಿತರ ನಾಯಕರು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
ಈಗಿನಿಂದಲೇ ಎರಡೂ ಪಕ್ಷಗಳ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಅನುಸರಿಸಬೇಕು. ಇಲ್ಲವಾದರೆ ಈ ಬಾರಿಯೂ ಅಲ್ಪಸಂಖ್ಯಾತ ಸದಸ್ಯರಿಗೆ ಮೇಯರ್ ಸ್ಥಾನ ಸಿಗುವುದಿಲ್ಲ. ಅಲ್ಲದೆ, ಮುಂದಿನ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಅಲ್ಪಸಂಖ್ಯಾತರಿಗೆ ಮೇಯರ್ ಸ್ಥಾನ ನೀಡಬೇಕೆಂದು ಒತ್ತಡ ಹೇರಬೇಕೆಂದು ಸದಸ್ಯರು ತೀರ್ಮಾನಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ, ಪಕ್ಷದ ಹೈಕಮಾಂಡ್ ವರಿಷ್ಠರನ್ನು ಭೇಟಿಮಾಡಿ ಮೇಯರ್ ಸ್ಥಾನವನ್ನು ನೀಡಬೇಕೆಂದು ಪಟ್ಟುಹಿಡಿಯಲಿದ್ದಾರೆ.

Leave a Comment