ಮೇಯರ್ ಚುನಾವಣೆ ಮುಂದೂಡಿಕೆ

ಬೆಂಗಳೂರು, ಸೆ. ೨೩- ಇದೇ ತಿಂಗಳ 27 ರಂದು ನಡೆಯಬೇಕಿದ್ದ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನು ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ. ಒಂದು ವೇಳೆ ಚುನಾವಣೆ ಮುಂದೂಡಿದೆ ಆದ್ದಲ್ಲಿ ಅಕ್ಟೋಬರ್ 4 ರಂದು ನಿಗದಿಯಾಗಲಿದೆ.

15 ಕ್ಷೇತ್ರಗಳಿಗೆ ಉಪ ಚುನಾವಣೆಗೆ ದಿನಾಂಕಗಳು ಘೋಷಣೆಯಾಗಿವೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನು ನಡೆಸಬೇಕೆ ಎಂಬ ಬಗ್ಗೆ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರು ಕಾನೂನು ಇಲಾಖೆ ಮತ್ತು ಚುನಾವಣಾ ಆಯೋಗದ ಸಲಹೆಯನ್ನು ಪಡೆಯಲಿದ್ದಾರೆ.

ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಜೊತೆಗೆ 12 ಸ್ಥಾಯಿ ಸಮಿತಿಗಳ ಚುನಾವಣೆಯನ್ನು ನಡೆಸುವುದು ಹಿಂದಿನಿಂದಲೂ ಬಂದ ವಾಡಿಕೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಮಾತ್ರವೇ ನಡೆಸಿ ಸ್ಥಾಯಿ ಸಮಿತಿ ಚುನಾವಣೆಯನ್ನು ಒಂದೆರಡು ತಿಂಗಳುಗಳ ಕಾಲ ಬಿಟ್ಟು ನಡೆಸಲಾಗುತ್ತಿತ್ತು.

ಸ್ಥಾಯಿ ಸಮಿತಿ ಚುನಾವಣೆಗಳನ್ನು ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಜೊತೆ ಜೊತೆಗೆ ನಡೆಸಬೇಕಾಗಿರುವುದರಿಂದ ಕೆಲ ಕಾನೂನು ತೊಡಕುಗಳು ಎದುರಾಗಿವೆ. ಹಾಗಾಗಿ ಈ ಬಗ್ಗೆಯೂ ಪ್ರಾದೇಶಿಕ ಆಯುಕ್ತರು ಕಾನೂನು ಇಲಾಖೆ ಮತ್ತು ಚುನಾವಣಾ ಆಯೋಗದ ಅಭಿಪ್ರಾಯವನ್ನು ಪಡೆಯಲಿದ್ದಾರೆ.

ಉಪ ಚುನಾವಣೆಗಳು ದಿನಾಂಕ ಪ್ರಕಟವಾಗಿರುವುದು, ಹಾಗೂ ಮೇಯರ್ ಚುನಾವಣೆ ಜೊತೆಗೆ ಸ್ಥಾಯಿ ಸಮಿತಿಗಳ ಚುನಾವಣೆ ನಡೆಸುವ ಬಗ್ಗೆ ಇಂದು ಸಂಜೆಯೊಳಗೆ ಆಯೋಗದ ಅಭಿಪ್ರಾಯವನ್ನು ಪಡೆಯಲಾಗುವುದು. ನಂತರ ಚುನಾವಣೆಗೆ ಹೊಸ ಅಧಿಸೂಚನೆಯನ್ನು ಪ್ರಕಟಿಸಲು ಪ್ರಾದೇಶಿಕ ಆಯುಕ್ತರು ನಿರ್ಧರಿಸಿದ್ದಾರೆ.

ಇದೇ ವೇಳೆ ಬಿಬಿಎಂಪಿ ಪ್ರತಿ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಕೂಡ ಈ ಮೊದಲೇ ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಜೊತೆ ಜೊತೆಗೆ ಸ್ಥಾಯಿ ಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಕೋರಿದ್ದರು.

ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅವರು ಕೂಡ ತಕರಾರು ಎತ್ತಿ ಡಿಸೆಂಬರ್ ವರೆಗೆ ಹಾಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸದಸ್ಯರ ಅಧಿಕಾರದ ಅವಧಿ ಇದೆ. ಹಾಗಾಗಿ ಅವಧಿಗೆ ಮುನ್ನವೇ ತೆಗೆದು ಹಾಕಬಾರದು ಎಂದು ಬಿಬಿಎಂಪಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಈ ಅಂಶಗಳನ್ನು ಕೂಡ ಪರಿಗಣಿಸಿ ಪ್ರಾದೇಶಿಕ ಆಯುಕ್ತರು ಇದೀಗ ಕಾನೂನು ಕೋಶ ಮತ್ತು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ. ಸಂಜೆಯೊಳಗೆ ಆಯೋಗದ ಅಭಿಪ್ರಾಯ ಹೊರ ಬೀಳಲಿದೆ.

Leave a Comment