ಮೇಯರ್-ಆಯುಕ್ತರ ನಡುವೆ ಮುಸುಕಿನ ಗುದ್ದಾಟ-ಮೂಲಸೌಕರ್ಯ ಇಲ್ಲದೆ ನಾಗರಿಕರ ಪರದಾಟ

ತುಮಕೂರು, ಏ. ೨೧- ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಮಹಾಪೌರರ ನಡುವಿನ ಮುಸುಕಿನ ಗುದ್ದಾಟದಲ್ಲಿ ನಗರದ ಜನತೆ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.

ಸಾರ್ವಜನಿಕರ ಯಾವುದೇ ಸಮಸ್ಯೆಗಳು ಪರಿಹಾರ ಕಾಣದೆ, ಅವರ ಕೆಲಸ ಕಾರ್ಯಗಳಿಗೆ ಸಂಬಂಧಿಸಿದ ಕಡತಗಳು ವಿಲೇವಾರಿಯಾಗದೆ ಹೆಣಗಾಡುವಂತಾಗಿದೆ. ಸ್ಮಾರ್ಟ್‌ಸಿಟಿ ಹೊಸ್ತಿಲಲ್ಲಿರುವ ನಗರದಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುವಂತಿದ್ದು, ಸಕಾಲಕ್ಕೆ ಸರಿಯಾಗಿ ವಿಲೇವಾರಿಯಾಗದೆ ಸಾಂಕ್ರಾಮಿಕ ರೋಗಗಳಿಗೆ ರಹದಾರಿಯಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರಾಗಿದೆ. ನಗರದ ಪ್ರಮುಖ ಬಡಾವಣೆಗಳು ಸೇರಿದಂತೆ ಕೊಳಗೇರಿಗಳು, ದಲಿತ ಕಾಲೋನಿಗಳ ಜನತೆ ಕುಡಿಯುವ ನೀರಿಲ್ಲದೆ ಹನಿ ಹನಿ ನೀರಿಗೂ ಪರದಾಡುವಂತಾಗಿದೆ. ಕುಡಿಯುವ ನೀರು, ಪೈಪ್‌ಲೈನ್, ರಸ್ತೆ, ಚರಂಡಿ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿರುವ ಗುತ್ತಿಗೆದಾರರ ಬಿಲ್‌ಗಳಂತೂ ನೆನೆಗುದಿಗೆ ಬಿದ್ದಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.

ಈ ಹಿಂದೆ ಮೇಯರ್ ಆಯುಕ್ತರಿಗೆ ನಗರದೆಲ್ಲೆಡೆ ಹಾಕಲಾಗಿದ್ದ ಪ್ಲೆಕ್ಸ್ ತೆಗೆಸುವ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ನೀಡಿದ್ದ ನೋಟಿಸ್ ಕುರಿತು ಬೇಸರಗೊಂಡಿರುವ ಆಯುಕ್ತರು ಯಾವುದೇ ಕಡತಗಳನ್ನು ಸಕಾಲಕ್ಕೆ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ

ಮೇಯರ್ ಪುರಪಿತೃಗಳನ್ನು ಕಡೆಗಣಿಸಿ ಅಧಿಕಾರಿಗಳ ಸಭೆ ನಡೆಸುವುದರಿಂದ ಪಾಲಿಕೆ ಸದಸ್ಯರು ಅದರಲ್ಲೂ ತಮ್ಮ ಪಕ್ಷದ ಸದಸ್ಯರೆ ತೀವ್ರ ಅಸಮಾಧಾನಗೊಂಡಿದ್ದು, ಮುಂದಿನ ಸಾಮಾನ್ಯ ಸಭೆಯಲ್ಲಿ ಮೇಯರ್ ಮೇಲೆ ಹರಿಹಾಯಲು ಎಲ್ಲ ಸಿದ್ದತೆ ನಡೆಸಿಕೊಂಡಿದ್ದಾರೆನ್ನಲಾಗಿದೆ.

ಸ್ವತಃ ಜೆಡಿಎಸ್ ಸದಸ್ಯರುಗಳೆ ಮೇಯರ್ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳ ಸುರಿಮಳೆಗೈಯಲು ತುದಿಗಾಲಲಿ ನಿಂತಿದ್ದಾರೆ. ಮತ್ತೊಂದೆಡೆ ಇತರೆ ಪಕ್ಷದ ಸದಸ್ಯರುಗಳು ಸಹ ಇವರಿಗೆ ಸಹಕಾರ ನೀಡಿ ಪುಕ್ಕಟ್ಟೆ ಮನರಂಜನೆ ನೋಡಲು ಕಾತರರಾಗಿದ್ದಾರೆನ್ನಲಾಗಿದೆ.

ನಗರದ ಹೊರವಲಯದಲ್ಲಿರುವ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ 3 ಕೋಟಿ ರೂ.ಗಳಿಗೂ ಅಧಿಕ ಹಗರಣ ನಡೆದಿದೆ ಎಂದು ಮೇಯರ್‌ರವರು ಉಪಮೇಯರ್ ಆಗಿದ್ದ ಸಂದರ್ಭದಲ್ಲಿ ಆರೋಪ ಮಾಡಿದ್ದರು. ಆದರೆ ಈಗ ಅವರೇ ಮೇಯರ್ ಆಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಹಗರಣ ಬಯಲಿಗೆಳೆಯಲು ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಸಹ ಪುರಪಿತೃಗಳು ಹಾಗೂ ನಾಗರಿಕ ವಲಯದಿಂದ ಕೇಳಿ ಬರತೊಡಗಿದೆ.

ಹಿಂದಿನ ನಗರಸಭೆಯ ಮಾಜಿ ಅಧ್ಯಕ್ಷರೊಬ್ಬರ ಕಟ್ಟಡ ತೆರವು ಮಾಡಿಸಲು ಖುದ್ದು ಮೇಯರ್ ಅವರೆ ಹೋಗಿ ನಿಂತು ಕೋರ್ಟ್ ಆದೇಶ ನೋಡಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಬಂದಿರುವುದು ಪುರಪಿತೃಗಳಿಗೆ ಮೇಯರ್ ಪ್ರಶ್ನಿಸಲು ಉತ್ತಮ ಅವಕಾಶ ಸಿಕ್ಕಂತಾಗಿದೆ.

ಪಾಲಿಕೆ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದರಿಂದ ಯಾವುದೇ ಅಧಿಕಾರಿಗಳು ಪಾಲಿಕೆ ಸದಸ್ಯರುಗಳ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ನಗರದ ಸ್ವಚ್ಚತೆ, ಕುಡಿಯುವ ನೀರಿನ ಸಮಸ್ಯೆ, ಸಾರ್ವಜನಿಕರ ದೂರುಗಳ ಬಗ್ಗೆಯೂ ಸಹ ಅಧಿಕಾರಿಗಳು ಸರಿಯಾಗಿ ಗಮನಹರಿಸದೆ ಇರುವುದರಿಂದ ಸಾರ್ವಜನಿಕರ ನೂರಾರು ಅರ್ಜಿಗಳು ಆಯಾ ವಿಭಾಗದಲ್ಲೆ ನೆನೆಗುದಿಗೆ ಬಿದ್ದು ಕೊಳೆಯುತ್ತಿವೆ.

ನಗರದಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದರೂ ಸಹ ಪಾಲಿಕೆ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನಗರದ ನಾಗರಿಕರು ಕುಡಿಯುವ ನೀರು ಸಿಗದೆ ಬೇಸತ್ತು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟಕ್ಕೆ ಇಳಿಯುವ ಸಾಧ್ಯತೆಗಳಿವೆ.

ನಗರದ ನಾಗರಿಕರು ಹೋರಾಟಕ್ಕೆ ಇಳಿಯುವ ಮುನ್ನ ಪುರಪಿತೃಗಳು ಹಾಗೂ ಪಾಲಿಕೆ ಅಧಿಕಾರಿಗಳು ನಾಗರಿಕರಿಗೆ ಕುಡಿಯುವ ನೀರು, ರಸ್ತೆ  ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವತ್ತ ಗಮನ ಹರಿಸುವರೇ ಕಾದು ನೋಡೋಣ..!

Leave a Comment