ಮೇದಾರ ಅಭಿವೃದ್ಧಿಗೆ ನಿಗಮ – ಸಿಎಂ ಭರವಸೆ

ಬೆಂಗಳೂರು, ಫೆ. ೧೪- ಮೇದಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸಲು ಅಗತ್ಯಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ.
ಮೇದಾರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಸಹಾಯಹಸ್ತ ಚಾಚಬೇಕು ಎಂದು ಚಿತ್ರದುರ್ಗದ ಮೇದಾರ ಗುರುಪೀಠದ ಮೇದಾರ ಹಿಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮೇದಾರ ಸಮಾಜದ ಮುಖಂಡರುಗಳ ನಿಯೋಗ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಮೇದಾರ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಬಗ್ಗೆ ಎಲ್ಲರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಶಿವಶರಣ ಮೇದಾರ ಕೇತೇಶ್ವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು ಎಂಬ ಬೇಡಿಕೆ ಬಗ್ಗೆಯೂ ಸಕರಾತ್ಮಕವಾಗಿ ಪರಿಶೀಲನೆ ನಡೆಸುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದರು.
ಚಿತ್ರದುರ್ಗದಲ್ಲಿರುವ ಮೇದಾರ ಗುರುಪೀಠದ ಅಭಿವೃದ್ಧಿ ಟ್ರಸ್ಟ್‌ಗೆ ತಕ್ಷಣಕ್ಕೆ 5 ಕೋಟಿ ರೂ.ಗಳ ನೆರವನ್ನೂ ಮುಖ್ಯಮಂತ್ರಿಗಳು ಪ್ರಕಟಿಸಿದರು.
ಪ್ರವಾಹ ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಹಾಗಾಗಿ, ಹೆಚ್ಚಿನ ನೆರವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಕೇಂದ್ರದಿಂದ ನೆರವು ಬರಬೇಕಿದೆ. ನೆರವು ಬಂದ ನಂತರ ಹೆಚ್ಚಿನ ಹಣ ನೀಡುವುದಾಗಿ ಹೇಳಿದ ಅವರು, ರಾಜ್ಯಸರ್ಕಾರದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಇದರ ನಡುವೆಯೇ ಬಜೆಟ್ ಮಂಡಿಸಬೇಕಿದೆ. ಹಾಗಾಗಿ, ಬಜೆಟ್ ನಂತರ ಮೇದಾರ ಸಮುದಾಯದ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಅವರು ಹೇಳಿದರು.
ಮೇದಾರ ಸಮುದಾಯದ ರಾಜ್ಯಾಧ್ಯಕ್ಷ ಸಿ.ಪಿ. ಪಾಟೀಲ್ ಸೇರಿದಂತೆ ಮೇದಾರ ಸಮಾಜದ ಎಲ್ಲ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ನಿಯೋಗದಲ್ಲಿದ್ದರು.

Leave a Comment