ಮೇಕೆದಾಟು 2 ರಾಜ್ಯಗಳಿಗೂ ವರದಾನ: ಡಿಕೆಶಿ

ಚಿಕ್ಕನೆಟಕುಂಟೆ ಜಿ. ರಮೇಶ್

ಮೇಕೆದಾಟು, ಡಿ. ೭- ಮೇಕೆದಾಟು ಜಲಾಶಯ ಯೋಜನೆಗೆ ತಮಿಳುನಾಡು ಸರ್ಕಾರ ಅನಗತ್ಯ ವಿರೋಧ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಪ್ರದೇಶದಲ್ಲಿ ಒಂದು ಎಕರೆ ಜಾಗದಲ್ಲಿ ನೀರಾವರಿ ಮಾಡಲು ಸಾಧ್ಯವಿಲ್ಲ. ಇದನ್ನು ಅಲ್ಲಿನ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಹೇಳಿದರು.

  • ಮೇಕೆದಾಟು ಸಮತೋಲಿತ ಜಲಾಶಯ: ಕುಡಿವ ನೀರಿನ ಯೋಜನೆ
  •  ಸರಿ ಸುಮಾರು 6 ಸಾವಿರ ಕೋಟಿ ರೂ. ವೆಚ್ಚದ ಯೋಜನೆ.
  •  ಅಣೆಕಟ್ಟು ನಿರ್ಮಾಣಕ್ಕಾಗಿ 12500 ಎಕರೆ ಭೂಮಿ ಮುಳುಗಡೆ
  •  ಬಹುತೇಕ ಅರಣ್ಯ ಭೂಮಿಯ ಜಾಗ ಬಳಕೆ
  •  ಒಟ್ಟಾರೆ 67 ಟಿ.ಎಂ.ಸಿ. ನೀರಿನ ಸಾಮರ್ಥ್ಯ
  •  ಅಣೆಕಟ್ಟು ನಿರ್ಮಾಣದಿಂದ ಪ್ರವಾಸೋದ್ಯ, ಜಲವಿದ್ಯುತ್ ಉತ್ಪಾದನೆ, ಮೀನುಗಾರಿಕೆಗೂ ಅವಕಾಶ
  •  ತಮಿಳುನಾಡು ಆತಂಕ ಅನಗತ್ಯ
  •  ಕುಡಿಯುವ ನೀರಿಗಷ್ಟೇ ಯೋಜನೆ ಬಳಕೆ

ಮೇಕೆದಾಟುವಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾತನಾಡಿದ ಅವರು, ಜಲಾಶಯ ನಿರ್ಮಾಣದಿಂದ ಎರಡೂ ರಾಜ್ಯಗಳಿಗೆ ಅನುಕೂಲವಾಗಲಿದೆ. ಅದರಲ್ಲೂ ತಮಿಳುನಾಡಿಗೆ ಶೇ. 90 ರಷ್ಟು ಅನುಕೂಲವಾಗಲಿದೆ. ಇದನ್ನು ತಮಿಳುನಾಡು ಸರ್ಕಾರ ಅರ್ಥ ಮಾ‌ಡಿಕೊಳ್ಳಬೇಕು ಎಂದರು.

7j4

ಎರಡು ಗುಡ್ಡಗಳ ನಡುವೆ ನಿರ್ಮಿಸಲು ಉದ್ದೇಶಿಸಿರುವ ಈ ಜಲಾಶಯದಿಂದ ಜಲವಿದ್ಯುತ್ ಯೋಜನೆ ಹಾಗೂ ನೀರಿನ ಸಂಗ್ರಹಕ್ಕಷ್ಟೆ ಬಳಸಲಾಗುತ್ತದೆ ಎಂದರು.

ಈ ಬಹುಪಯೋಗಿ ಜಲಾಶಯದಿಂದ ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಕಾವೇರಿ ವಿಚಾರವಾಗಿ ತಮಿಳುನಾಡು ಸರ್ಕಾರ ಪದೇ ಪದೇ ಅನಗತ್ಯ ರಗಳೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ 66.85 ಟಿ.ಎಂ.ಸಿ.ಸಾಮರ್ಥ್ಯದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಜಲ ವಿದ್ಯುತ್ ಸ್ಥಾವರ ನಿರ್ಮಿಸಲು ಮುಂದಾಗಿದೆ.

ಸ್ಥಳ ಪರಿಶೀಲನೆ

ಇತ್ತೀಚೆಗಷ್ಟೆ ಕೇಂದ್ರ ಜಲ ಆಯೋಗ ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ-ಡಿಪಿಆರ್ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಚುರುಕಾಗಿದ್ದು, ಇಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಂದಾಯ, ನೀರಾವರಿ, ಅರಣ್ಯ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಮೇಕೆದಾಟಿಗೆ ಭೇಟಿ ನೀಡಿ ಉದ್ದೇಶಿತ ಜಲಾಶಯ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿತು.

ಸುಮಾರು 467.5 ಮೀಟರ್ ಉದ್ದದ ಅಣೆಕಟ್ಟು ನಿರ್ಮಾಣದಿಂದ 6 ಸಾವಿರ ಕೋಟಿ ರೂ. ಉದ್ದೇಶದ ಈ ಯೋಜನೆಯಿಂದ 12500 ಎಕರೆ ಪ್ರದೇಶ ಮುಳುಗಡೆಯಾಗಲಿದ್ದು, ಇದರಲ್ಲಿ 750 ಎಕರೆಯಷ್ಟು ಕಂದಾಯ ಭೂಮಿ, 1500 ಎಕರೆಯಷ್ಟು ರೈತರ ಭೂಮಿ, ಇನ್ನುಳಿದ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ.

ಈ ಯೋಜನೆಯಿಂದ ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಜತೆಗೆ ಕಬಿನಿ, ಕೆಆರ್ಎಸ್ ಜಲಾಶಯಗಳ ಮೇಲಿನ ಒತ್ತಡವೂ ಕಡಿಮೆಯಾಗುವುದಲ್ಲದೆ, ಮಳೆಗಾಲದಲ್ಲಿ ಅನಗತ್ಯವಾಗಿ ಹರಿದು ಹೋಗುವ ನೀರನ್ನು ತಡೆಯಲು ಸಹಕಾರಿಯಾಗಲಿದೆ.

ಉದ್ದೇಶಿತ ಜಲಾಶಯದಲ್ಲಿ 66.85 ಟಿ.ಎಂ.ಸಿ. ನೀರಿನ ಸಾಮರ್ಥ್ಯ ಹೊಂದಲಿದ್ದು, ಇದರಲ್ಲಿ 56.3 ಟಿ.ಎಂ.ಸಿ. ಲೈವ್ ಸ್ಟೋರೇಜ್ ಹಾಗೂ 64 ಟಿ.ಎಂ.ಸಿ.ಯಷ್ಟು ಜಲಾಶಯದಲ್ಲಿ ನೀರಿನ ಸಂಗ್ರಹ ಇರಲಿದೆ.

ಜಲಾಶಯದಲ್ಲಿ 17 ಗೇಟ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಜಲಾಶಯ ನಿರ್ಮಾಣದಿಂದಾಗಿ ಕುಡಿಯುವ ನೀರು, 400 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದಿಸಬಹುದಾಗಿದೆ.

ಜಲಾಶಯ ನಿರ್ಮಾಣದಿಂದ ಪ್ರವಾಸೋದ್ಯಮ ಅಭಿವೃದ್ಧಿ, ಮೀನುಗಾರಿಕೆ ಹಾಗೂ ಈ ಸುತ್ತಮುತ್ತಲ ಭಾಗದಲ್ಲಿನ ಆರ್ಥಿಕ ಪರಿಸ್ಥಿತಿ ಚೇತರಿಕೆಗೂ ಸಹಕಾರಿಯಾಗಲಿದೆ.

ಸ್ಥಳ ಪರಿಶೀಲನೆ

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದು ಮೇಕೆದಾಟಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.  ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಸಂಸದ ಡಿ.ಕೆ. ಸುರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

Leave a Comment