ಮೇಕೆದಾಟು ಯೋಜನೆ ಪ್ರತಿಧ್ವನಿ : ಮಾಜಿ ಸಿಎಂಗಳ ಜತೆ ಹೆಚ್‌ಡಿಕೆ ಚರ್ಚೆ, ತ.ನಾಡು ಅಸೆಂಬ್ಲಿಯಲ್ಲಿ ನಿರ್ಣಯ

ಬೆಂಗಳೂರು/ಚೆನ್ನೈ, ಡಿ. ೬- ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಇಂದು ವಿಶೇಷ ಸಭೆ ಕರೆದು ಚರ್ಚೆ ನಡೆಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಆಪರೇಷನ್ ಕಮಲದ ಸದ್ದು

ರಾಜ್ಯದ ನೀರಾವರಿ ಯೋಜನೆ ಸಂಬಂಧ ಚರ್ಚೆ ನಡೆಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಡೆಸಿದ ಸಭೆಯಲ್ಲಿ ಆಪರೇಷನ್ ಕಮಲದ ಸದ್ದು ಜೋರಾಗಿಯೇ ಕೇಳಿಬಂದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಜಲಸಂಪನ್ಮೂಲ ಸಚಿವರಾದ ಈಶ್ವರಪ್ಪ ಹಾಗೂ ಹೆಚ್.ಕೆ. ಪಾಟೀಲ್ ಮಾತನಾಡುತ್ತಿದ್ದುದನ್ನು ಗಮನಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಏನ್ರೀ ಈಶ್ವರಪ್ಪ, ಹೆಚ್.ಕೆ. ಪಾಟೀಲ್ ಅವರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದ್ದೀರಿಯೇ ಎಂದು ಈಶ್ವರಪ್ಪ ಅವರನ್ನು ಕಾಲೆಳೆದರು.
ತಕ್ಷಣವೇ ಪ್ರತಿಕ್ರಿಯಿಸಿದ ಈಶ್ವರಪ್ಪ, ಆಪರೇಷನ್ ಕಮಲದಲ್ಲಿ 1 ಪರ್ಸೆಂಟ್ ಆದರೂ ಯಶಸ್ವಿಯಾಗುತ್ತೆ ಎಂಬ ನಂಬಿಕೆ ನಿಮಗೆ ಇದೆಯೇನಪ್ಪಾ ಎಂದು ಮರು ಪ್ರಶ್ನಿಸಿದರು. ಆಗ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ ಹೆಚ್.ಕೆ. ಪಾಟೀಲ್ ಅವರನ್ನು ನೀವು ಕರೆದುಕೊಂಡು ಹೋಗಬಹುದು. ಆದರೆ ಎಂ.ಬಿ. ಪಾಟೀಲ್ ಅವರನ್ನು ಕರೆದುಕೊಂಡು ಹೋಗಲು ಸಾಧ್ಯವೇ? ಎಂದು ಮರುಪ್ರಶ್ನಿಸಿದರು.

ಮೇಕೆದಾಟು ಯೋಜನೆ, ಮಹದಾಯಿ ನದಿ ನೀರು ಯೋಜನೆ ಸೇರಿದಂತೆ, ವಿವಿಧ ನೀರಾವರಿ ಸಂಬಂಧಿಸಿದ ಯೋಜನೆಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದಲ್ಲಿಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರುಗಳ ಸಭೆ ನಡೆಸಿರುವಾಗಲೇ ಮತ್ತೊಂದೆಡೆ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಯ ಬಗ್ಗೆ ಚರ್ಚೆ ನಡೆಸಲು ಸಂಜೆ 4 ಗಂಟೆಗೆ ವಿಶೇಷ ಅಧಿವೇಶನ ಕರೆದಿದ್ದು, ಈ ಅಧಿವೇಶನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಸರ್ವಸಮ್ಮತ ನಿರ್ಧಾರ ಕೈಗೊಂಡು ಮೇಕೆದಾಟು ಯೋಜನೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿದೆ.

ತಮಿಳುನಾಡು ಸರ್ಕಾರದ ಕಿತಾಪತಿಯನ್ನು ಅರಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಇಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರುಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಮೇಕೆದಾಟು ಯೋಜನೆಯನ್ನು ಶೀಘ್ರ ಕೈಗೆತ್ತಿಕೊಳ್ಳಲು ಮುಂದಾಗಿದೆ.

ಅಲ್ಲದೆ, ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವುದರಿಂದ ತಮಿಳುನಾಡು ಸರ್ಕಾರಕ್ಕೆ ಯಾವುದೇ ಅಡ್ಡಿ ಆಂತಕಗಳು ಇಲ್ಲ. ಪ್ರತಿವರ್ಷ ನಿಯಮಿತವಾಗಿ ತಮಿಳುನಾಡಿಗೆ ಕೊಡಬೇಕಾಗಿರುವ ನೀರನ್ನು ನೀಡಲಾಗುವುದು ಎನ್ನುವ ಭರವಸೆಯನ್ನು ಮೂಡಿಸಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಈ ಸಂಬಂಧ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಮಾಜಿ ನೀರಾವರಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಬಸವರಾಜ ಬೊಮ್ಮಾಯಿ ಸೇರಿದಂತೆ, ಅನೇಕರು ಪಾಲ್ಗೊಂಡಿದ್ದರು.

ಈ ವೇಳೆ ಎಲ್ಲರೂ ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕ ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎನ್ನುವುದನ್ನು ಪುನರುಚ್ಚರಿಸಿದ್ದಾರೆ. ಮೇಕೆದಾಟು ವಿಷಯಕ್ಕೆ ಸಂಬಂಧಪಟ್ಟಂತೆ, ತಮಿಳುನಾಡು ಸರ್ಕಾರ ಅನಗತ್ಯವಾಗಿ ಆತಂಕಪಟ್ಟು ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದು, ಇದು ಸರಿಯಲ್ಲ. ಯೋಜನೆಯ ಸಾಧಕ – ಬಾಧಕಗಳನ್ನು ಕೇಂದ್ರ ಜಲ ಆಯೋಗ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೂ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಬಿಎಸ್‌ವೈ ಗೈರು

ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆದಿದ್ದ ಮಾಜಿ ಮುಖ್ಯಮಂತ್ರಿಗಳ ಸಭೆಗೆ ಬಿ.ಎಸ್. ಯಡಿಯೂರಪ್ಪ ಗೈರು ಹಾಜರಾಗಿದ್ದುದು ಎದ್ದುಕಾಣುತ್ತಿತ್ತು. ಅದೇ ರೀತಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ದೇವೇಗೌಡ, ಸದಾನಂದ ಗೌಡ, ಎಸ್.ಎಂ. ಕೃಷ್ಣ ಅವರು ಗೈರು ಹಾಜರಾಗಿದ್ದರು.

 

Leave a Comment