ಮೆಸ್ಸಿ ಮೈಲಿಗಲ್ಲಿನ ೬೦೦ನೇ ಪಂದ್ಯ

ಬಾರ್ಸಿಲೋನಾ, ನ.೫ : ಫುಟ್ಬಾಲ್ ಜಗತ್ತಿನ ಸರ್ವಶ್ರೇಷ್ಟ್ರ ಆಟಗಾರರಲ್ಲಿ ಒಬ್ಬರಾದ ಲಿಯೊನೆಲ್ ಮೆಸ್ಸಿ, ತಾನು ಪ್ರತಿನಿಧಿಸುತ್ತಿರುವ ಬಾರ್ಸಿಲೋನಾ ಕ್ಲಬ್ ಪರ ೬೦೦ನೇ ಪಂದ್ಯವನ್ನಾಡುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಲಾ ಲೀಗಾ ಟೂರ್ನಿಯಲ್ಲಿ ನಿನ್ನೆ ತಡರಾತ್ರಿ ಬಾರ್ಸಿಲೋನಾದ ತವರು ಮೈದಾನ ಕ್ಯಾಂಪ್ ನೌನಲ್ಲಿ ನಡೆದ ಸೆವಿಲ್ಲಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮೆಸ್ಸಿ ಈ ಅಪೂರ್ವ ಸಾಧನೆಗೈದರು. ೩೦ ವರ್ಷದ ಅರ್ಜೆಂಟೀನಾದ ದೈತ್ಯ ಆಟಗಾರ ಮೆಸ್ಸಿ, ಬಾರ್ಸಿಲೋನಾ ಪರ ೬೦೦ನೇ ಪಂದ್ಯವನ್ನಾಡಿದ ಮೂರನೇ ಆಟಗಾರ ಎನಿಸಿದ್ದಾರೆ. ಮೆಸ್ಸಿಗಿಂತ ಅಧಿಕ ಪಂದ್ಯಗಳಲ್ಲಿ ಕಾಣಿಸಿಕೊಂಡವರೆಂದರೆ ತಂಡದ ನಾಯಕನಾದ ಕ್ಸಾವಿ ಹೆರ್ನಾಂಡಿಸ್ ಹಾಗೂ ಸಹ ಆಟಗಾರ ಆಂದ್ರೆ ಇನಿಯಸ್ತಾ. ಕ್ಸಾವಿ ಇದುವರೆಗೆ ೭೬೭ ಪಂದ್ಯಗಳಲ್ಲಿ ಬಾರ್ಸಿಲೋನಾ ಪರ ಆಡಿರುವ ದಾಖಲೆ ಹೊಂದಿದ್ದು, ಇನಿಯೆಸ್ತಾ ೬೪೨ ಪಂದ್ಯಗಳ್ಲಲಿ ಬಾರ್ಸಿಲೋನಾ ಜೆರ್ಸಿ ಧರಿಸಿದ್ದಾರೆ. ಸೆವಿಲ್ಲಾ ವಿರುದ್ಧದ ಪಂದ್ಯವನ್ನು ೨-೧ ಅಂತರದಲ್ಲಿ ಗೆದ್ದಿರುವ ಬಾರ್ಸಿಲೋನಾ, ಆ ಮೂಲಕ ಲಾ ಲೀಗಾದಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರಿಸಿದೆ. ಬಾರ್ಸಿಲೋನಾ ಪರ ಮೆಸ್ಸಿ ಆಡಿರುವ ೬೦೦ ಪಂದ್ಯಗಳಲ್ಲಿ ೪೨೬ ಪಂದ್ಯಗಳಲ್ಲಿ ಕ್ಲಬ್ ಜಯದ ನಗೆ ಬೀರಿದೆ. ೧೦೫ ಪಂದ್ಯ ಫಲಿತಾಂಶ ಕಾಣದೆ ಡ್ರಾದಲ್ಲಿ ಅಂತ್ಯಗೊಂಡಿದ್ದು, ಕೇವಲ ೬೯ ಪಂದ್ಯಗಳಲ್ಲಿ ಮಾತ್ರ ಮೆಸ್ಸಿ ಸೋಲಿನ ನಿರಾಸೆ ಅನುಭವಿಸಿದ್ದಾರೆ. ಈ ನಡುವೆ ವೈಯಕ್ತಿಕವಾಗಿ ಹತ್ತು ಹಲವು ದಾಖಲೆಗಳು ಮೆಸ್ಸಿ ಹೆಸರಿನಲ್ಲಿ ಮಾತ್ರ ದಾಖಲಾಗಿವೆ. ೬೦೦ ಪಂದ್ಯಗಳಲ್ಲಿ ೪೪ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಒಟ್ಟು ೫೨೩ ಗೋಲು ಗಳಿಸಿರುವ ಫುಟ್ಬಾಲ್ ಲಾರ್ಡ್ ಮೆಸ್ಸಿ, ೧೯೭ ಗೋಲುಗಳಿಗೆ ಅಸಿಸ್ಟ್ ಮಾಡಿದ್ದಾರೆ. ಇದೇ ವೇಳೆ ೮ ಲಾ ಲೀಗಾ ಚಾಂಪಿಯನ್‌ಶಿಪ್ ಹಾಗೂ ೪ ಚಾಂಪಿಯನ್ಸ್ ಲೀಗ್ ಪಟ್ಟ ಸೇರಿದಂತೆ ತಂಡಕ್ಕಾಗಿ ೩೦ಕ್ಕೂ ಅಧಿಕ ಟ್ರೋಫಿಗಳನ್ನು ಮೆಸ್ಸಿ ಮ್ಯಾಜಿಕ್‌ನಿಂದ ಗೆದ್ದುಕೊಟ್ಟಿದ್ದಾರೆ. ಮೆಸ್ಸಿ, ೫ ಬಾರಿ ವಿಶ್ವಶ್ರೇಷ್ಟ ಫುಟ್ಬಾಲಿಗ ಬ್ಯಾಲನ್ ಡಿ’ಓರ್ ಪ್ರಶಸ್ತಿ ಹಾಗೂ ೪ ಬಾರಿ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ೪ ಬಾರಿ ವಿಶ್ವಶ್ರೇಷ್ಟ ಫುಟ್ಬಾಲಿಗ ಪ್ರಶಸ್ತಿ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. ೨೦೦೪ರಲ್ಲಿ ಫ್ರಾಂಕ್ ರಿಜಿಕಾರ್ಡ್ ಕೋಚ್ ಆಗಿದ್ದ ವೇಳೆ, ಎಸ್ಪಾನಿಯಲ್ ವಿರುದ್ಧದ ಪಂದ್ಯದ ದ್ವಿತಿಯಾರ್ಧದಲ್ಲಿ ಮೆಸ್ಸಿ ಬದಲಿ ಆಟಗಾರನಾಗೊ ಮೊತ್ತ ಮೊದಲ ಬಾರಿಗೆ ಬಾರ್ಸಿಲೋನಾ ಪರ ಮೈದಾನಕ್ಕಿಳಿದಿದ್ದರು. ಆ ಬಳಿಕ ೧೧೦ ಪಂದ್ಯಗಳಲ್ಲಿ ರಿಜಿಕಾರ್ಡ್ ತರಬೇತಿಯಲ್ಲಿ ಮೆಸ್ಸಿ ಮ್ಯಾಜಿಕ್ ತೋರಿದ್ದರು. ಕಳೆದ ಎಪ್ರಿಲ್‌ನಲ್ಲಿ ಬದ್ಧ ವೈರಿ ರಿಯಲ್ ಮ್ಯಾಡ್ರಿಡ್ ವಿರುದ್ಧದ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಮಿಂಚಿನ ಗೋಲು ಗಳಿಸಿದ್ದ ಮೆಸ್ಸಿ ೫೦೦ ಗೋಲ್ ಕ್ಲಬ್ ಸೇರಿದ್ದರು.

Leave a Comment