ಮೆಟ್ರೋ ಕಟ್ಟು ನಿಟ್ಟು ವಿದ್ಯಾರ್ಥಿಗಳಿಗೆ ಬಿಕ್ಕಟ್ಟು

ಬೆಂಗಳೂರು, ಆ. ೧೬- ಬೆಂಗಳೂರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಬೇಕಾದರೆ ನಮ್ಮ ಬಳಿ ಏನಾದರೂ ಹರಿತವಾದ ಆಯುಧ ಮತ್ತು ಬೆಂಕಿ ಹೊತ್ತಿಕೊಳ್ಳುವಂತಹ ವಸ್ತುಗಳಿವೆಯೇ ಎಂಬುದನ್ನು ನೋಡಿಕೊಂಡು ಮೆಟ್ರೋಗೆ ಹೋಗಬೇಕು. ಅಂತಹ ವಸ್ತುಗಳಿದ್ದಲ್ಲಿ ಪ್ರಯಾಣ ಪ್ರವೇಶ ನಿಷಿದ್ಧ.
ಅದಕ್ಕೊಂದು ಉದಾಹರಣೆ ಎಂಬಂತೆ ಜೆನೆಟ್ ಜಾನ್ (18) ಎಂಬ ಹೋಟೆಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿನಿ ದಿನನಿತ್ಯ ಜಾಲಹಳ್ಳಿ ನಿಲ್ದಾಣದಿಂದ ಇಂದಿರಾನಗರಕ್ಕೆ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಈಕೆ ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಅಗತ್ಯವಾದ ಸಲಕರಣೆ ಪೆಟ್ಟಿಗೆಯನ್ನು ಕಾಲೇಜಿಗೆ ಕೊಂಡೊಯ್ಯಬೇಕಾಗುತ್ತದೆ.
ಅದರಂತೆ ಆಕೆ ಸಲಕರಣೆ ಪೆಟ್ಟಿಗೆಯೊಂದಿಗೆ ಇಂದಿರಾನಗರ ಮೆಟ್ರೋ ನಿಲ್ದಾಣ ಪ್ರವೇಶಿಸಲು ಮುಂದಾದಾಗ ಆಕೆಯನ್ನು ತಡೆದ ಸಿಬ್ಬಂದಿ ಸಲಕರಣೆ ಪೆಟ್ಟಿಗೆಯನ್ನು ನಿಲ್ದಾಣ ಒಳಕ್ಕೆ ಬಿಡಲು ಸಾಧ್ಯವಿಲ್ಲ. ನೀವು ಬಸ್ಸಿನಲ್ಲಿ ಹೋಗಬಹುದು ಎಂದು ಹೇಳಿದ್ದಾರೆ. ಆಗ ನಾನು ವಿದ್ಯಾರ್ಥಿನಿ ಈ ಸಲಕರಣೆ ಪೆಟ್ಟಿಗೆ ನಮ್ಮ ವ್ಯಾಸಂಗಕ್ಕೆ ಅತ್ಯಗತ್ಯ. ಇದನ್ನು ಕೊಂಡೊಯ್ಯಲೇಬೇಕು. ಮೆಟ್ರೋ ಪ್ರಯಾಣ ನಮಗೆ ಉತ್ತಮವಾಗಿದ್ದು, ಅದಕ್ಕೆ ಅವಕಾಶ ನೀಡಬೇಕೆಂದು ವಿದ್ಯಾರ್ಥಿನಿ ಜೆನೆಟ್ ಪರಿಪರಿಯಾಗಿ ಬೇಡಿಕೊಂಡರು. ಸಿಬ್ಬಂದಿ ಆಕೆಯ ಮನವಿಗೆ ಸೊಪ್ಪು ಹಾಕಲಿಲ್ಲ ಎಂದು ಆಕೆ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ.
ಬೆಂಗಳೂರು ಮೆಟ್ರೋ ರೈಲು ನಿಗಮ, ಚಾಕು ಸೇರಿದಂತೆ ಹರಿತವಾದ ಆಯುಧಗಳು ಮತ್ತು ಸ್ಫೋಟಕ ವಸ್ತುಗಳನ್ನು ನಿಷೇಧಿಸಿದೆ. ಇದು ಕೆಲ ವಿದ್ಯಾರ್ಥಿಗಳಿಗೆ ಮಾರಕವಾದಂತಿದೆ. ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಫ್ಯಾಷನ್ ಡಿಜೈನ್ ವಿದ್ಯಾರ್ಥಿಗಳು ಕೆಲ ಹರಿತವಾದ ಸಲಕರಣೆಗಳನ್ನು ಕಾಲೇಜಿಗೆ ಕೊಂಡೊಯ್ಯಲೇಬೇಕು. ಇಂತಹ ವಿದ್ಯಾರ್ಥಿಗಳಿಗೆ ಮೆಟ್ರೋ ತೀವ್ರ ಸಮಸ್ಯೆಯಾಗಿದೆ. ಜೊತೆಗೆ ಆಟೋಟಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ತಮ್ಮ ಕ್ರೀಡಾ ಕಿಟ್‌ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಕಾರ್ಮಿಕರು ತಮ್ಮ ಕೆಲಸದ ಉಪಕರಣಗಳನ್ನು ಮೆಟ್ರೋದಲ್ಲಿ ತೆಗೆದುಕೊಂಡು ಪ್ರಯಾಣಿಸುವುದು ಅಸಾಧ್ಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಟ್ರೋ ಹಿರಿಯ ಅಧಿಕಾರಿಯೊಬ್ಬರು, ಮೆಟ್ರೋದಲ್ಲಿ ನಿಷೇಧಿಸಿರುವ ವಸ್ತುಗಳನ್ನು ಬಿಡಲು ಸಾಧ್ಯವೇ ಇಲ್ಲ. ಏಕೆಂದರೆ ಆಕಸ್ಮಿಕವಾಗಿ ಏನಾದರೂ ಅನಾಹುತಗಳು ಸಂಭವಿಸಿದಲ್ಲಿ ಮೆಟ್ರೋ ಸಿಬ್ಬಂದಿಗಳೇ ಜವಾಬ್ದಾರರಾಗಬೇಕಾಗುತ್ತದೆ. ನಮ್ಮ ಕರ್ತವ್ಯವನ್ನು ಪಾಲಿಸುತ್ತೇವೆ ಎಂದರು.

Leave a Comment