ಮೆಕ್ಸಿಕೊದಿಂದ ಗಡಿಪಾರಾದ ಭಾರತೀಯರು ದೆಹಲಿ ವಿಮಾನ ನಿಲ್ದಾಣಕ್ಕೆ

ಚಂಡೀಗಢ.ಅ.21. ಪಂಜಾಬ್‌ನಲ್ಲಿ ಮಾದಕ ವಸ್ತುಗಳು ಸುಲಭವಾಗಿ ಸಿಗುತ್ತವೆ. ಆದರೆ ಉದ್ಯೋಗ ಸಿಗುವುದಿಲ್ಲ. ನಾನು ಭಾರತೀಯ ಸೇನೆಗೆ ಸೇರಬೇಕೆಂದಿದ್ದೆ ಆದರೆ ಆಯ್ಕೆಯಾಗಲಿಲ್ಲ. ನನ್ನ ವಯಸ್ಸು ಏರುತ್ತಿದ್ದಂತೆ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲೇ ಬೇಕಾಯಿತು. ಇಲ್ಲಿ ಉದ್ಯೋಗ ಸಿಗದೇ ಇರುವಾಗ ವಿದೇಶಕ್ಕೆ ಹೋಗುವುದು ಒಂದೇ ದಾರಿ. ಗಡಿಪಾರು ಆದ ನಾವು 311 ಮಂದಿಯೂ ಸತ್ತಂತವರಾಗಿದ್ದೇವೆ. ನಾವೆಲ್ಲರೂ ಅಮೆರಿಕ ಕನಸು ಕಂಡವರು. ಅಲ್ಲಿ ಉದ್ಯೋಗ ಪಡೆಯುವುದಕ್ಕಾಗಿ ನಮ್ಮಲ್ಲಿದ್ದ ಜಮೀನು ಮಾರಿದ್ದೇವೆ, ಸಾಲ ಮಾಡಿಕೊಂಡಿದ್ದೇವೆ. ದಿನದಿಂದ ದಿನಕ್ಕೆ ಸಾಲದ ಹೊರೆ ಏರುತ್ತಲೇ ಇದೆ. ಮೆಕ್ಸಿಕೊದಿಂದ ಗಡಿಪಾರಾದ ಭಾರತೀಯ ಯುವಕ ಸಂದೀಪ್ ಸಿಂಗ್ ಅಲಿಯಾಸ್ ದೀಪ್ ತನ್ನ ಅನುಭವನ್ನು ವಿವರಿಸಿದ್ದು ಹೀಗೆ.

ಉದ್ಯೋಗ ಅರಸಿ ಪಂಜಾಬ್‌ನ ಸಂಗ್‌ರೂರ್ ಜಿಲ್ಲೆಯ ಮೂನಕ್ ನಗರ ನಿವಾಸಿ ಸಂದೀಪ್, ಜೂನ್ 13ರಂದು ನವದೆಹಲಿಯಿಂದ ಅಮೆರಿಕ ಪ್ರಯಾಣ ಬೆಳೆಸಿದ್ದರು. ಆದರೆ ಮೆಕ್ಸಿಕನ್ ವಲಸೆ ಅಧಿಕಾರಿಗಳು 311 ಭಾರತೀಯರೊಂದಿಗೆ ದೀಪ್‌ನ್ನು ಗಡಿಪಾರು ಮಾಡಿದಾಗ ಈ ಯುವಕನ ಅಮೆರಿಕ ಕನಸು ನುಚ್ಚು ನೂರಾಯಿತು. ದೀಪ್ ಶುಕ್ರವಾರ ಭಾರತಕ್ಕೆ ತಲುಪಿದ್ದು ಹಿಂದೂಸ್ತಾನ್ ಟೈಮ್ಸ್ ಜತೆ ಅನುಭವ ಹಂಚಿಕೊಂಡಿದ್ದಾರೆ.

ಅಲ್ಲಿನ ಘೋರ ಅನುಭವದ ಬಗ್ಗೆ ವಿವರಿಸಿದ ದೀಪ್, ನನ್ನ ಕಣ್ಣ ಮುಂದೆಯೇ ಪನಾಮ ಅರಣ್ಯದಲ್ಲಿ ಮೂರು ಮಂದಿ ಸಾವಿಗೀಡಾಗಿದ್ದನ್ನು ನೋಡಿದ್ದೇನೆ. ನಮ್ಮ ಗುಂಪಿನಲ್ಲಿದ್ದವರೇ ಅನಾರೋಗ್ಯಕ್ಕೊಳಗಾಗಿದ್ದಾರೆ. ಇಕ್ವೆಡೋರ್‌ನಿಂದ ಮೆಕ್ಸಿಕೊಗೆ ಹೋಗಿ ಅಲ್ಲಿಂದ ಅಮೆರಿಕಗೆ ದಾಟುತ್ತಿದ್ದಂತೆ ವೇರಕ್ರೂಜ್ ನಿರಾಶ್ರಿತರ ಶಿಬಿರದಲ್ಲಿ ಮೆಕ್ಸಿಕನ್ ಅಧಿಕಾರಿಗಳು ನನ್ನನ್ನು ವಶಪಡೆದುಕೊಂಡರು.

ಇತಿಹಾಸದಲ್ಲಿ ಇದೇ ಮೊದಲ ಬಾರಿ ಮೆಕ್ಸಿಕೊ ಜನರನ್ನು ಗಡಿಪಾರು ಮಾಡಿದ್ದು. ನಾವು ಹಲವಾರು ಕಷ್ಟಗಳನ್ನು ಎದುರಿಸಿ ಮೆಕ್ಸಿಕೊದ ತಪಾಚುಲಾ ನಿರಾಶ್ರಿತರ ಶಿಬಿರಕ್ಕೆ ಬಂದಿದ್ದೆವು. ಇನ್ನೆರಡು ದಿನ ಇದ್ದಿದ್ದರೆ ನಾನು ಮೆಕ್ಸಿಕೊ- ಅಮೆರಿಕ ಗಡಿ ದಾಟಿ ಬಿಡುತ್ತಿದ್ದೆ ಅಂತಾರೆ ದೀಪ್. ದೀಪ್ ಅವರು ಶನಿವಾರ ಪಂಜಾಬ್‌ನಲ್ಲಿರುವ ಮನೆಗೆ ತಲುಪಿದ್ದಾರೆ.

2017ರಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದಾಗ ರಾಜ್ಯದಲ್ಲಿ ಟ್ರಕ್ ಮಾಲೀಕರ ಸಂಘಟನೆಗಳನ್ನು ನಿಲ್ಲಿಸಿದರು. ಇದರ ಪರಿಣಾಮ ಸಂದೀಪ್ ಅವರ ಅಪ್ಪ ಮುಖ್ತಿಯಾರ್ ಸಿಂಗ್ ಅವರು ತಮ್ಮ ಬಳಿ ಇದ್ದ ನಾಲ್ಕು ಟ್ರಕ್‌ಗಳಲ್ಲಿ ಎರಡನ್ನು ಮಾರಬೇಕಾಗಿ ಬಂತು. ವ್ಯವಹಾರ ಕುಸಿಯುತ್ತಾ ಹೋಗಿ ಕುಟುಂಬ ಬಡತನ ಅನುಭವಿಸತೊಡಗಿತು. ಮನೆಯ ಬಡತನ ನಿವಾರಣೆಗಾಗಿ ಸಂದೀಪ್‌ ಅಮೆರಿಕಗೆ ಹೋಗುವುದಾಗಿ ನಿರ್ಧರಿಸಿದರು. ಅದಕ್ಕಾಗಿ ಅಪ್ಪ 16 ಲಕ್ಷ ಸಾಲವನ್ನು ಪಡೆದಿದ್ದರು. ಅಕ್ಟೋಬರ್ 19ರಂದು ದೆಹಲಿ ವಿಮಾನ ನಿಲ್ದಾಣದಿಂದ ಮನೆಗೆ ಕರೆಮಾಡಿದ ಸಂದೀಪ್, ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂಬ ವಿಷಯ ತಿಳಿಸಿದ್ದರು.
ನನ್ನ ಪಯಣ ತುಂಬಾ ಕಷ್ಟಕರವಾಗಿತ್ತು. ನಾನು ಮೊದಲು ಇಕ್ವೆಡೋರ್‌ಗೆ ತಲುಪಿ ಅಲ್ಲಿಂದ ಮೆಡಿಲಿನ್‌ಗೆ ಬಂದೆ. ಪನಾಮ ಅರಣ್ಯ ದಾಟಬೇಕಾದರೆ 6 ದಿನಗಳು ಬೇಕಾಗಿ ಬಂತು. ನಾವೆಲ್ಲರೂ ಹಸಿವು, ಬಾಯಾರಿಕೆಯಿಂದ ಬಳಲಿದ್ದೆವು. ಕೋಸ್ಟರಿಕ, ನಿಕರಗುವಾ , ಹೊಂಡುರಾಸ್ ಮತ್ತು ಗ್ವಾಟೆಮಾಲವನ್ನು ನಾವು ಬಸ್, ಟ್ಯಾಕ್ಸಿ ಮತ್ತು ದೋಣಿ ಮೂಲಕ ದಾಟಿದೆವು.
ರಾಜ್‌ಪುರದ ಒಬ್ಬ ವ್ಯಕ್ತಿ ಮತ್ತು ಕೈತಾಲ್ (ಹರಿಯಾಣ)ದ ಇಬ್ಬರು ವ್ಯಕ್ತಿಗಳು ಮೆಕ್ಸಿಕೊ ದಾರಿಯಲ್ಲಿ ಸಾವಿಗೀಡಾದರು. ಹಲವಾರು ಮೃತದೇಹಗಳು ಮತ್ತು ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಹಲವಾರು ಜನರನ್ನು ನಾನು ಕಂಡೆ. ಅಂದಹಾಗೆ ಟ್ರಾವೆಲ್ ಏಜೆಂಟ್ ಬಗ್ಗೆ ದೀಪ್‌ಗೆ ಯಾವುದೇ ದೂರು ಇಲ್ಲ. ರಾಜ್ಯ ಸರ್ಕಾರ ಉದ್ಯೋಗ ನೀಡದಿರುವ ಕಾರಣ ನಮಗೆ ವಿದೇಶಕ್ಕೆ ಹೋಗಬೇಕಾಗಿ ಬಂತು ಅಂತಾರೆ ದೀಪ್.

ಪಟಿಯಾಲಾದ 22ರ ಹರೆಯದ ಯುವಕನದ್ದೂ ಕೂಡಾ ಇದೇ ಕತೆ. ಅಮೆರಿಕ ತಲುಪುದಕ್ಕಾಗಿ ಈತ 22 ಲಕ್ಷ ಖರ್ಚು ಮಾಡಿದ್ದನು. ನಾನು ಏಳು ತಿಂಗಳು ಅಲ್ಲಿ ನರಕಯಾತನೆ ಅನುಭವಿಸಿದೆ. ಕೊನೆಗೆ ಗಡಿಪಾರಾದೆ. ಪಂಜಾಬ್‌ನಲ್ಲಿ ಭವಿಷ್ಯವಿಲ್ಲ. ಅದೊಂದು ನರಕ ಸದೃಶ ಅನುಭವವಾಗಿತ್ತು ಎಂದು ಯುವಕ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

Leave a Comment