ಮೆಕ್ಕೆಜೋಳಕ್ಕೆ ಹುಳುಗಳ ಬಾಧೆ

ಹೊನ್ನಾಳಿ:ಆ,13;ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆ ಮೆಕ್ಕೆಜೋಳಕ್ಕೆ ಹುಳುಗಳ ಬಾಧೆ ವಿಪರೀತವಾಗಿದ್ದು, ರೈತರು ದಿಕ್ಕುತೋಚದಂತಾಗಿದ್ದಾರೆ. ಎಲೆ ತಿನ್ನುವ ಹುಳುಗಳ ಬಾಧೆ ವೇಗವಾಗಿ ಹರಡುತ್ತಿದೆ. ಇದರೊಂದಿಗೆ ಎಲೆಗಳ ಮೇಲೆ ಚುಕ್ಕೆಗಳಂಥ ಗುರುತುಗಳಾಗಿ ಕ್ರಮೇಣ ಎಲೆ ಪೂರ್ಣ ನಾಶವಾಗುತ್ತವೆ.
ತಾಲೂಕಿನ ಎಚ್. ಕಡದಕಟ್ಟೆ, ಸೊರಟೂರು, ತುಗ್ಗಲಹಳ್ಳಿ, ಅರಬಗಟ್ಟೆ ಮತ್ತಿತರ ಗ್ರಾಮಗಳ ಜಮೀನುಗಳಲ್ಲಿ ಮೆಕ್ಕೆಜೋಳಕ್ಕೆ ಹುಳುಗಳ ಬಾಧೆ ವಿಪರೀತವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಹಾರದ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಒತ್ತಾಯಿಸುತ್ತಾರೆ ತಾಲೂಕು ರೈತ ಸಂಘದ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್.
ಈ ಸಮಸ್ಯೆ ಮೆಕ್ಕೆಜೋಳದ ಬೆಳೆಗೆ ಹೊಸದಾಗಿ ಪ್ರಾರಂಭವಾಗಿದ್ದು, ಹಾನಿಯುಂಟುಮಾಡುವ ಕೀಟ ಯಾವುದು ಎಂದು ಇನ್ನೂ ಪತ್ತೆಹಚ್ಚಬೇಕಿದೆ. ಸದ್ಯಕ್ಕೆ ಆ ಕೀಟವನ್ನು “ಫಾಲ್ಸ್ ಆರ್ಮಿ ವರ್ಮ್” ಎಂದು ಹೆಸರಿಸಲಾಗಿದೆ ಎಂದು ವಿವರಿಸುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಡಾ.ಎಚ್.ಕೆ. ರೇವಣಸಿದ್ಧನಗೌಡ.
ಕಾಂಡ ಕೊರಕದ ಬಾಧೆಯೂ ಹೆಚ್ಚಾಗಿದ್ದು, ಕೀಟಗಳ ಉಪಟಳದಿಂದ ಮೆಕ್ಕೆಜೋಳದ ಬೆಳೆಗಾರರು ಕಂಗಾಲಾಗಿದ್ದಾರೆ. ಇವುಗಳ ಉಪಟಳದಿಂದ ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಕ್ಲೋರೋಫೈರಿಫಾಸ್ ಸೇರಿದಂತೆ ಇತರೆ ಕೀಟನಾಶಕಗಳನ್ನು ಸಿಂಪಡಿಸಬೇಕು. ಯಾವುದೇ ಕಾರಣಕ್ಕೂ ರೈತರು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ಡಾ.ಎಚ್.ಕೆ. ರೇವಣಸಿದ್ಧನಗೌಡ. ಹೆಚ್ಚಿನ ಮಾಹಿತಿಗೆ ಹೊನ್ನಾಳಿಯ ಸಹಾಯಕ ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಬಹುದು ಎಂದು ಅವರು ತಿಳಿಸಿದರು.

Leave a Comment