ಮೃತ ಮಹಿಳೆ ಕುಟುಂಬಕ್ಕೆ ಸಾಂತ್ವನ

 

ಮುದನೂರು ಗ್ರಾಮಕ್ಕೆ ಸಚಿವ ರಾಜಶೇಖರ ಪಾಟೀಲ ಭೇಟಿ

ಕೆಂಭಾವಿ,ಜ.11-ಪಟ್ಟಣ ಸಮೀಪದ ಮುದನೂರು ಗ್ರಾಮದಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಕಿಡಗೇಡಿಗಳು ವಿಷ ಬೆರೆಸಿದ ಘಟನೆಗೆ ಸಂಬಂಧಿಸಿದಂತೆ ತೆಗ್ಗೆಳ್ಳಿ ಗ್ರಾಮದ ಮೃತಪಟ್ಟ ಮಹಿಳೆ ಹೊನ್ನಮ್ಮ ಮನೆಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ ಹಾಗೂ ಶಾಸಕ ನರಸಿಂಹನಾಯಕ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಪಾಟೀಲ, ಕಿಡಗೇಡಿಗಳ ಈ ಹೇಯ ಕೃತ್ಯ ಸಮಾಜದಲ್ಲಿ ತಲೆತಗ್ಗಿಸುವ ಘಟನೆ ಆಗಿದ್ದು, ಬಾವಿಯಲ್ಲಿ ವಿಷ ಬೆರೆಸಿದ ಆರೋಪಿಯನ್ನು ಕೂಡಲೆ ಪತ್ತೆ ಹಚ್ಚಿ ಬಂಧಿಸುವಂತೆ ಎಸ್.ಪಿ ಅವರಿಗೆ ಸೂಚನೆ ನೀಡಲಾಗಿದೆ. ಎರಡೂ ಗ್ರಾಮಗಳಿಗೆ ನೀರಿನ ತೊಂದರೆ ಆಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಜನತೆಗೆ ಯಾವುದೆ ತೊಂದರೆ ಆಗದಂತೆ ಕ್ರಮ ವಹಿಸಲು ಜಿಪಂ ಸಿಎಸ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ  ಜೊತೆ ಚರ್ಚಿಸಿ ಮೃತ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರವನ್ನು ಒದಗಿಸಲಾಗುವುದು ಎಂದು ಹೇಳಿದ ಅವರು, ಗ್ರಾಮದಲ್ಲಿ ಕೆಟ್ಟು ಹೋಗಿರುವ ಶುದ್ಧ ನೀರಿನ ಘಟಕ ಮರು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು ಅದು ಶೀಘ್ರದಲ್ಲೆ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು. ಜಿಪಂ ಅಧ್ಯಕ್ಷ ರಾಜಶೇಖರ ಪಾಟೀಲ, ಡಿಸಿ ಎಮ್. ಕೂರ್ಮಾರಾವ, ಎಸ್.ಪಿ ಯಡಾ ಮಾರ್ಟಿನ್ ಮರ್ಬನ್ಯಾಂಗ, ಎಸಿ ಮಂಜುನಾಥಸ್ವಾಮಿ, ತಹಸೀಲ್ದಾರ ಸುರೇಶ ಚವಲ್ಕರ್, ಇಒ ಜಗದೇವಪ್ಪ ಜೊತೆಗಿದ್ದರು.

@12bc =ಕಿಡಗೇಡಿಗಳ ಶೀಘ್ರ ಬಂಧನ

ಸುರಪುರ ತಾಲೂಕಿನ ತೆಗ್ಗೆಳ್ಳಿ- ಶಖಾಪೂರ ಗ್ರಾಮದಲ್ಲಿ ಬುಧವಾರ ಕುಡಿಯುವ ನೀರು ಮತ್ತು ನಲ್ಲಿ ಸರಬರಾಜು ಮಾಡುತ್ತಿರುವ ಬಾವಿಗೆ ಕಿಡಿಗೇಡಿಗಳು ವಿಷ ಸುರಿದ ಹಿನ್ನಲೆಯಲ್ಲಿ ಗುರುವಾರ ಗಣಿ ಮತ್ತು ಭೂ ವಿಜ್ಷಾನ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತವಾರಿ ಸಚಿವರಾದ ರಾಜಶೇಖರ ಪಾಟೀಲ್ ಹುಮನಬಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು ಈ ಪ್ರಕರಣದಲ್ಲಿ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ತನಿಖೆಯಿಂದ ಹಿಂದೆ ಸರಿಯುವುದಿಲ್ಲ. ಪೊಲೀಸ್ ತನಿಖೆ ಈಗಾಗಲೇ ನಡೆದಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಹೇಳಿದರು. ನಂತರ ತೆಗ್ಗೆಳ್ಳಿ ಶಖಾಪೂರ ಗ್ರಾಮಕ್ಕೆ ಭೇಟಿ ನೀಡಿದರು.

ಈ ಸಂಧರ್ಭದಲ್ಲಿ ಜಿ ಪಂ ಅಧ್ಯಕ್ಷ ರಾಜಶೇಖರ  ಪಾಟೀಲ್ ವಜ್ಜಲ, ಸುರಪುರ ಕ್ಷೇತ್ರದ  ಶಾಸಕ ನರಸಿಂಹನಾಯಕ (ರಾಜುಗೌಡ), ಜಿಲ್ಲಾಧಿಕಾರಿ ಎಮ್ ಕೂರ್ಮರಾವ್, ಕೆಂಭಾವಿ ಪೋಲೀಸ್ ಠಾಣೆ  ಪಿಎಸ್ಐ ಅಜೀತಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಗು ಸೇರಿ 6 ಜನ ಅಸ್ವಸ್ಥ: ಶಹಾಪುರ ಆಸ್ಪತ್ರೆಗೆ ದಾಖಲು

ಶಹಾಪುರಜ.11-ಸುರಪುರ ತಾಲ್ಲೂಕಿನ ಮುದನೂರ ಬಾವಿಯಲ್ಲಿ ವಿಷ ಕಲಬೆರಿಕೆ ಮಾಡಿದ ಕಿಡಗೇಡಿಗಳ ಕುಕೃತ್ಯಕ್ಕೆ ತೆಗ್ಗಳ್ಳಿ- ಶಖಾಪುರ ಗ್ರಾಮದಲ್ಲಿ 6 ವರ್ಷದ ಮಗು ಸೇರಿ 6 ಜನ ಅಸ್ವಸ್ಥರಾಗಿದ್ದು, ಅವರನ್ನು ಗುರುವಾರ ತಡರಾತ್ರಿ ಶಹಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಾಂತಿ ಭೇದಿಯಿಂದ ಬಳಲುತ್ತಿದ್ದ ಶಖಾಪುರ ಗ್ರಾಮದ ಶಾಂತಮ್ಮ ಈರಣ್ಣ (25), ಲಕ್ಷ್ಮೀಬಾಯಿ ಮಲ್ಲಣ್ಣ (40), ಕಸ್ತೂರೆಮ್ಮ ತಿಪ್ಪಣ್ಣ (42), ಮಲ್ಲಮ್ಮ ವಿರುಪಾಕ್ಷಿ (25), ಮೌನೇಶ ರಾಯಪ್ಪ (25), ಈರಣ್ಣ ರಾಯಪ್ಪ (28), ಅಶ್ವಿನಿ ವಿರೂಪಾಕ್ಷ (6) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

 

 

 

Leave a Comment