ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 12 ಲಕ್ಷ ರೂಪಾಯಿ ಪರಿಹಾರ

ಕಲಬುರಗಿ,ಆ.4-ಜಿಲ್ಲೆಯ ಸೇಡಂ ತಾಲ್ಲೂಕಿನ ಕೋಡ್ಲಾ ಸಮೀಪದ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ದುರಂತದಲ್ಲಿ ಮೃತಪಟ್ಟ 6 ಜನ ಕಾರ್ಮಿಕರ ಕುಟುಂಬಕ್ಕೆ ತಲಾ 12 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಕಾರ್ಖಾನೆಯ ಕೋಡ್ಲಾ ಘಟಕದ ಮುಖ್ಯಸ್ಥ ಅರವಿಂದಕುಮಾರ ಪಾಟೀಲ ತಿಳಿಸಿದ್ದಾರೆ.

ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಅವರಿಗೆ ಅರವಿಂದಕುಮಾರ ಪಾಟೀಲ ಅವರು, ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 12 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಲಿಖಿತ ರೂಪದಲ್ಲಿ ತಿಳಸಿದ್ದಾರೆ.

ಕಟ್ಟಡ ನಿರ್ಮಾಣಕ್ಕೆ ಮುನ್ನ ತಾತ್ಕಾಲಿಕವಾಗಿ ನಿರ್ಮಿಸುವ ಶೆಡ್ (ಸ್ಕ್ಯಾಫೋಲ್ಡಿಂಗ್) ಕುಸಿದು ಬಿದ್ದು ಬಿಹಾರ ಮೂಲದ ತಬರಕ್ ಅಲಿ, ಬಿಪಿನ್ ಸುಹಾನಿ, ಅಜಯ್, ಅಹ್ಮದ್ ಜುಬೀರ್, ಕೋಕೋ ಮತ್ತು ಸುಧಾಕರ ಎಂಬುವವರು ಮೃತಪಟ್ಟು, ಹಲವಾರು ಜನ ಕಾರ್ಮಿಕರು ಗಾಯಗೊಂಡಿದ್ದರು.

ಕಾರ್ಮಿಕರ ಸಾವಿಗೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿ ನೂರಾರು ಜನ ಕಾರ್ಮಿಕರು ಶುಕ್ರವಾರ ಕಾರ್ಖಾನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Leave a Comment