ಮೂವರು ಖದೀಮರ ಬಂಧನ: 4 ಲಕ್ಷ ಬೆಲೆಯ ವಸ್ತುಗಳು ವಶ

ಕೊರಟಗೆರೆ, ಮೇ ೧೪- ರಾತ್ರಿ ವೇಳೆ ಬೀಗ ಹಾಕಿದ್ದ ಮನೆಗಳು ಹಾಗೂ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂರು ಮಂದಿ ಖದೀಮರನ್ನು ಇಲ್ಲಿನ ಪೊಲೀಸರು ಪತ್ತೆಹಚ್ಚಿ ಬಂಧಿಸಿ, 1.62 ಲಕ್ಷ ರೂ. ಬೆಲೆಯ 54 ಗ್ರಾಂ ಚಿನ್ನ, ಬೆಳ್ಳಿ ಒಡವೆಗಳು, 3 ದ್ವಿಚಕ್ರ ವಾಹನಗಳು ಹಾಗೂ ಎಲ್.ಇ.ಡಿ ಟಿ.ವಿ, 3 ಮೊಬೈಲ್‍ಗಳು ಸೇರಿದಂತೆ ಒಟ್ಟು 4 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ

ಕಳೆದ ಜನವರಿ ತಿಂಗಳಲ್ಲಿ ತೋವಿನಕೆರೆ ಗ್ರಾಮದ ಮನೆಯೊಂದರಲ್ಲಿ 1.62 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ ತುರುವೇಕೆರೆಯ ದೇವೇಗೌಡ ಬಡಾವಣೆಯ ವೆಂಕಟೇಶ್, ತುಮಕೂರಿನ ಬೆಳಗುಂಬ ರಸ್ತೆಯ ಭಾಗ್ಯನಗರದ ಗೋಪಾಲ್, ಕೋತಿತೋಪಿನ ಕೃಷ್ಣ ಎಂಬುವರನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಸದರಿ ಆರೋಪಿಗಳು ತೋವಿನಕೆರೆ ಗ್ರಾಮದ ನರಸಿಂಹಮೂರ್ತಿ ಎಂಬುವರ ಮನೆಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ 1.62 ಲಕ್ಷ ಮೌಲ್ಯದ ಚಿನ್ನಾಭರಣಗಳು ಮತ್ತು ಬೆಳ್ಳಿ ಒಡವೆಗಳನ್ನು ಕದ್ದು ಪರಾರಿಯಾಗಿದ್ದರು.

ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡ ರಚಿಸಿದ್ದು, ರಾತ್ರಿ ವೇಳೆ ಗಸ್ತಿನಲ್ಲಿದ್ದ ಪೊಲೀಸರಿಗೆ ತೋವಿನಕೆರೆ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂರು ಮಂದಿ ಅಪರಿಚಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ 9 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

ಒಟ್ಟು 9 ಪ್ರಕರಣಗಳನ್ನು ಭೇದಿಸುವಲ್ಲಿ ಕೊರಟಗೆರೆ ಸಿಪಿಐ ನದಾಫ್, ಪಿಎಸೈ ಮಂಜುನಾಥ್ ಹಾಗೂ ಸಿಬ್ಬಂದಿಗಾಳದ ರಾಮಚಂದ್ರಯ್ಯ, ಲೋಹಿತ್, ಸೋಮನಾಥ್, ಶಿವಪ್ರಸಾದ್, ದೊಡ್ಡಲಿಂಗಯ್ಯ ಶ್ರಮಿಸಿದ್ದಾರೆ.

ಸದರಿ ಆರೋಪಿಗಳನ್ನು ಮಾಲು ಸಮೇತ ಪತ್ತೆಹಚ್ಚಿ ಬಂಧಿಸುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಅಧೀಕ್ಷಕಿ ಡಾ.ವಿ.ಜೆ.ಶೋಭರಾಣಿ ಹಾಗೂ ಮಧುಗಿರಿ ಪೊಲೀಸ್ ಉಪಾಧೀಕ್ಷಕ ಶ್ರೀನಿವಾಸಮೂರ್ತಿ ಅಭಿನಂದಿಸಿದ್ದಾರೆ.

Leave a Comment