ಮೂವರಿಗೆ ಜೀವದಾನ ಮಾಡಿದ ಮುದ್ದು ಮಗು

ಒಂದು ತಿಂಗಳ ಹಿಂದೆ ದುಃಖದ ಮಡುವಿನಲ್ಲಿದ್ದ  ೭ ವರ್ಷದ ಬಾಲಕನ ಕುಟುಂಬ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮೂವರು ರೋಗಿಗಳಿಗೆ ಜೀವದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ೭ ವರ್ಷದ ಬಾಲಕ ಶಂಕರ ಬಡಿಗೇರ್ ಹೈ ಗ್ರೇಡ್ ಪೊಂಟೈನ್ ಗ್ಲೈಯೋಮಾಸ್‌ನಿಂದ ಬಳಲುತ್ತಿದ್ದ. ಪೊಂಟೈನ್ ಗ್ಲೈಯೋಮಾಸ್ ಗೆಡ್ಡೆಗಳು ಅಥವಾ ಕ್ಯಾನ್ಸರ್ ಗಡ್ಡೆಗಳು ಮಿದುಳಿನ ವಿವಿಧ ಭಾಗಗಳಿಗೆ ಆವರಿಸಿದ್ದವು. ಇದಕ್ಕೆ ಬ್ರೈನ್ ಸ್ಟೆಮ್ ಎಂದು ಕರೆಯಲಾಗುತ್ತದೆ. ಈ ಬಾಲಕನಿಗೆ ಅಂಟಿಕೊಂಡಿದ್ದ ಕ್ಯಾನ್ಸರ್ ತುಂಬಾ ಗಂಭೀರ ಸ್ವರೂಪಕ್ಕೆ ಹೋಗಿತ್ತು. ಇದರ ಪರಿಣಾಮ ಮಿದುಳಿನ ಎಲ್ಲಾ ಚಟುವಟಿಕೆಗಳು ನಿಷ್ಕ್ರಿಯಗೊಂಡಿದ್ದರಿಂದ ಜುಲೈ ೧೯ ರಂದು ಬ್ರೈನ್ ಡೆಡ್ ಎಂದು ಘೋಷಿಸಲಾಯಿತು.

boy1ಇದಾದ ಬಳಿಕ ಶಂಕರ್ ಪೋಷಕರಾದ ಶಿವಕುಮಾರ್ ಮತ್ತು ಸುನೀತಾ ಬಡಿಗೇರ್ ಅವರಿಗೆ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟಕರವಾಗಿತ್ತು. ಇದಕ್ಕಾಗಿ ಅವರು ಮತ್ತೊಬ್ಬರ ನೆರವು ಸಲಹೆ ಕೋರಿದರು. ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಿಯಾಗಿರುವ ಶಿವಕುಮಾರ್ ಅವರು ವೃತ್ತಿಯಲ್ಲಿ ಬಡಗಿಯಾಗಿದ್ದಾರೆ. ಶಂಕರನ ಅಜ್ಜ ಹಲವಾರು ದೇವಾಲಯಗಳಿಗೆ ಮರದ ರಥಗಳನ್ನು ನಿರ್ಮಿಸಿ ಕೊಟ್ಟು ಹೆಸರು ಗಳಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯನ್ನೂ ಗಳಿಸಿದ್ದಾರೆ.

ಶಂಕರನಿಗೆ ೨ ವರ್ಷದ ತಮ್ಮನೂ ಇದ್ದಾನೆ.  ಮಕ್ಕಳಲ್ಲಿ ಶೇ.೮೦ ರಷ್ಟು ಬ್ರೈನ್ ಸ್ಟೆಮ್ ಟ್ಯೂಮರ್‌ಗಳು ಪೊಂಟೈನ್ ಗ್ಲೈಯೋಮಾಸ್ ಆಗಿರುತ್ತವೆ. ಈ ಗೆಡ್ಡೆಗಳು ಬ್ರೈನ್ ಸ್ಟೆಮ್ನ್ ಸಾಮಾನ್ಯ ನರ್ವ್ ಸೆಲ್‌ಗಳಲ್ಲಿ ಗಡ್ಡೆಯ ಗಾತ್ರವನ್ನು ಹೆಚ್ಚಿಸುತ್ತವೆ. ಈ ಗಡ್ಡೆಗಳನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆಯಲು ಸಾಧ್ಯವೇ ಇಲ್ಲ. ಏಕೆಂದರೆ, ಈ ನರಗಳೆಲ್ಲಾ ಮಿದುಳಿನಾದ್ಯಂತ ಹರಡಿಕೊಂಡಿದ್ದು, ದೇಹದ ಸಂರಚನೆ ಮತ್ತು ಕಾರ್ಯಚಟುವಟಿಕೆಗಳನ್ನು ನಿಯಂತ್ರಣದಲ್ಲಿಡುತ್ತವೆ. ದುರಾದೃಷ್ಠವೆಂದರೆ ಈ ರೋಗಕ್ಕೆ ತುತ್ತಾದ ಬಹುತೇಕ ಮಕ್ಕಳು ಸಾವನ್ನಪ್ಪುತ್ತವೆ.

ಕೆಲವೇ ಕೆಲವು ಮಕ್ಕಳು ಈ ಪೊಂಟೈನ್ ಗ್ಲೈಯೋಮಾದಿಂದ ಪಾರಾಗುತ್ತಾರೆ. ಇದಕ್ಕೆ ಒಂದೇ ಒಂದು ಚಿಕಿತ್ಸಾ ಮಾರ್ಗವೆಂದರೆ ರೇಡಿಯೋಥೆರಪಿ. ಈ ಚಿಕಿತ್ಸೆ ಬಹುತೇಕ ಪ್ರಕರಣಗಳಲ್ಲಿ ಮಗುವಿನ ಆರೋಗ್ಯವನ್ನು ಸುಧಾರಿಸಬಹುದು. ಆದಾಗ್ಯೂ, ಬದುಕುಳಿಯುವ ಅವಧಿ ಕಡಿಮೆಯದ್ದಾಗಿರುತ್ತದೆ. ಏಕೆಂದರೆ, ಈ ಚಿಕಿತ್ಸೆಯನ್ನು ಪಡೆದ ನಂತರ ಕೆಲವು ತಿಂಗಳಲ್ಲಿ ಗಡ್ಡೆ ಬೆಳೆಯಲಾರಂಭಿಸುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿನ ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್ ಶಂಕರನ ಕುಟುಂಬದ ಸಮ್ಮತಿ ಪಡೆದು ಮಗುವನ್ನು ದಾಖಲಿಸಿಕೊಂಡು ಹೃದಯ ಮತ್ತು ಎರಡು ಮೂತ್ರಪಿಂಡಗಳನ್ನು ತೆಗೆಯಲಾಯಿತು. ಹೃದಯವನ್ನು ೧೩ ವರ್ಷದ ಬಾಲಕಿಗೆ ಕಸಿ ಮಾಡಲಾಯಿತು. ಇದು ಆಸ್ಪತ್ರೆಯಲ್ಲಿ ಮಗುವೊಂದಕ್ಕೆ ಹೃದಯ ಕಸಿ ಮಾಡಿದ ಮೊದಲ ಪ್ರಕರಣವಾಗಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಈ ಹೆಣ್ಣು ಮಗು ಹೃದಯಕ್ಕಾಗಿ ಕಳೆದ ಆರು ತಿಂಗಳಿಂದ ಕಾಯುತ್ತಿತ್ತು. ಈ ಕಸಿ ಶಸ್ತ್ರಚಿಕಿತ್ಸೆ ನಂತರ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.

boy3

ಎರಡು ಮೂತ್ರಪಿಂಡಗಳ ಪೈಕಿ ಒಂದನ್ನು ೪೪ ವರ್ಷ ಮತ್ತು ಮತ್ತೊಂದನ್ನು ೪೨ ವರ್ಷದ ಪುರುಷರಿಗೆ ಕಸಿ ಮಾಡಲಾಗಿದೆ. ೪೪ ವರ್ಷದ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದರೆ, ೪೨ ವರ್ಷದ ವ್ಯಕ್ತಿ ಕಳೆದ ೭ ವರ್ಷಗಳಿಂದ ಬಳಲುತ್ತಿದ್ದರು. ಡಾ.ಅನಿಲ್‌ಕುಮಾರ್ ಬಿ.ಟಿ, ಡಾ.ನರೇಂದ್ರ ಎಸ್, ಡಾ.ಮನೋಹರ್ ಮತ್ತು ಡಾ.ರಾಜೀವ್ ಇ.ಎನ್. ಅವನ್ನೊಳಗೊಂಡ ತಜ್ಞ ವೈದ್ಯರ ತಂಡ ಈ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸ್ತುತ ಇಬ್ಬರೂ ರೋಗಿಗಳ ಆರೋಗ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದೆ. ತಮ್ಮ ಮಗನ ಅಂಗಾಂಗಳ ದಾನದ ಬಗ್ಗೆ ಮಾತನಾಡಿದ ಶಂಕರನ ತಾಯಿ ಸುನೀತಾ, ಮಗನನ್ನು ಕಳೆದುಕೊಂಡು ಭಾರೀ ದುಃಖದಲ್ಲಿದ್ದೆವು. ನನ್ನ ಮಗನನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ನಡೆಸಿದೆವು. ಆದರೆ, ಆಗಲಿಲ್ಲ. ಮಗುವಿನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗುವಿಗೆ ನ್ಯಾಯ ಒದಗಿಸಿzವೆ ಎಂಬ ಧನ್ಯತಾಭಾವ ನಮ್ಮಲ್ಲಿದೆ ಎಂದು ಕಣ್ಣೀರು ಹಾಕುತ್ತಲೇ ವಿವರಿಸಿದರು.

Leave a Comment