ಮೂಲ್ಕಿ ಪರಿಸರದಲ್ಲಿ ನಕಲಿ ಗೊಬ್ಬರ ಮಾರಾಟ!

ಮಹಿಳೆಯರು ಇರುವ ಮನೆಗಳೇ ಟಾರ್ಗೆಟ್

 

ಹಳೆಯಂಗಡಿ, ಡಿ.೬- ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಕೆರೆಕಾಡು, ಪಡುಪಣಂಬೂರು, ಬೆಳ್ಳಾಯರು ಪರಿಸರದಲ್ಲಿ ತೆಂಗಿನ ಗಿಡಗಳಿಗೆ ಹಾಕುವ ಗೊಬ್ಬರವೆಂದು ಪ್ಯಾಕೆಟ್‌ಗಳಲ್ಲಿ ಮಣ್ಣು ತಂದು ಸುರಿದು ಹಣ ಪಡೆದು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಒಂದು ಪ್ಯಾಕೆಟ್‌ಗೆ ೫೦ ರೂ. ಎಂದು ೫೦೦-೧೦೦೦ ರೂ. ಹಣವನ್ನು ದೋಚುತ್ತಿದ್ದು ಈಗಾಗಲೇ ಹಲವಾರು ಮಂದಿ ಹಣ ಕಳೆದುಕೊಂಡಿದ್ದಾರೆ.

 

ಕಪ್ಪು ಬಣ್ಣದ ಸಪೂರ ದೇಹದ ಅಂದಾಜು ೪೫-೫೦ ವರ್ಷ ವಯಸ್ಸಿನ ವ್ಯಕ್ತಿ ಬೈಕ್‌ನಲ್ಲಿ ಮಣ್ಣಿನ ಪ್ಯಾಕೆಟ್ ಹಿಡಿದು ತಂದು ಮಹಿಳೆಯರೇ ಇರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದಾನೆ ಎನ್ನಲಾಗಿದೆ. ಬೆಳಗ್ಗೆ ಮನೆಯ ಗಂಡಸರು ಕೆಲಸಕ್ಕೋ ಇಲ್ಲ ಇನ್ನಿತರ ಕಾರ್ಯಕ್ಕೆ ಮನೆಯಿಂದ ಹೊರಹೋಗುವುದನ್ನೇ ಕಾದು ಕುಳಿತು ಎಂಟ್ರಿ ಕೊಡುವ ಅನಾಮಿಕ ವ್ಯಕ್ತಿ ತನ್ನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಕಂಪೆನಿಯ ಮಾಹಿತಿ ಯಾವುದೂ ನೀಡುವುದಿಲ್ಲ. ಸಣ್ಣ ಸಣ್ಣ ಪ್ಯಾಕೆಟ್‌ಗಳನ್ನು ಚೀಲದಿಂದ ಹೊರಕ್ಕೆ ತೆಗೆದು ಬಲವಂತವಾಗಿ ತೆಂಗಿನ ಮರದ ಬುಡಕ್ಕೆ ಸುರಿದು ೫೦೦-೧೦೦೦ ಹೀಗೆ ವಸೂಲಿ ಮಾಡುತ್ತಿದ್ದಾನೆ ಎನ್ನಲಾಗಿದೆ. ಗೊಬ್ಬರ ಎಂದು ಹೇಳುವ ಪ್ಯಾಕೆಟ್‌ಗಳ ಕವರ್ ಕೂಡಾ ಬಿಡದೆ ಕೊಂಡೊಯ್ಯುತ್ತಿದ್ದು ಇದರಿಂದ ಈತನನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ಮೂಲ್ಕಿ ಠಾಣಾ ಪೊಲೀಸರು ಈ ಬಗ್ಗೆ ಗಮನಿಸಬೇಕಾಗಿ ನಾಗರಿಕರು ಮನವಿ ಮಾಡಿದ್ದಾರೆ.

Leave a Comment