ಮೂಲಸೌಲಭ್ಯಗಳ ಕೊರತೆಯಲ್ಲಿ ದಿನದ ತರಕಾರಿ ಮಾರುಕಟ್ಟೆ

ಸಿರುಗುಪ್ಪ, ಸೆ.8: ನಗರದಲ್ಲಿ ಸಾರ್ವಜನಿಕರು ನೆಮ್ಮದಿಯಿಂದ ಬದುಕು ಸಾಗಿಸಲು ಅನುಕೂಲಕರ ವಾತಾವರಣ ಕಲ್ಪಿಸುವುದು ಆಡಳಿತದ ಕರ್ತವ್ಯ, ಈ ನಿಟ್ಟಿನಲ್ಲಿ ಇಲ್ಲಿನ ನಗರಸಭೆ ಎಡವಿದೆ ಎನ್ನುವುದಕ್ಕೆ ಸಂತೆ ಬಜಾರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ದಿನದ ತರಕಾರಿ ಮಾರುಕಟ್ಟೆಯಲ್ಲಿ ನೀರು ನಿಂತು ಕೆಸರು ಗದ್ದೆಯಾಗಿದೆ.

ತರಕಾರಿ ಕೊಳ್ಳಲು ಹೋಗುವ ಜನರಿಗೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ತರಕಾರಿ ಬೆಳೆದ ರೈತರು ನಿಂತ ನೀರಿನಲ್ಲಿಯೇ ತಮ್ಮ ತರಕಾರಿಗಳನ್ನು ವಾಹನಗಳಿಂದ ಇಳಿಸಿಕೊಂಡು ಹರಾಜು ಮಾರುಕಟ್ಟೆಗೆ ತೆರಳಬೇಕಾಯಿತು. ಬೇರೆ ಕಡೆಯಿಂದ ಬಂದ ಎಲೆ ಕೋಸು, ಹೀರೆಕಾಯಿ, ಹಸಿಮೆಣಸಿನಕಾಯಿ, ಸೋರೆಕಾಯಿ, ಈರುಳ್ಳಿ ಸೇರಿದಂತೆ ಸೊಪ್ಪು, ತರಕಾರಿಗಳನ್ನು ನಿಂತ ಕಲುಷಿತ ನೀರಿನಲ್ಲಿಯೇ ಇಟ್ಟು ಸಾಗಾಣಿಕೆ ಮಾಡಿದ್ದರಿಂದ ತರಕಾರಿಗಳು ಕಲುಷಿತ ನೀರಿನಿಂದಾಗಿ ಇದನ್ನು ಬಳಸುವ ಜನರಿಗೆ ಅನಾರೋಗ್ಯ ಉಂಟಾಗುವ ಪರಿಸ್ಥಿತಿ ಏರ್ಪಟ್ಟಿದೆ.

ಮಾರುಕಟ್ಟೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂದುಗಡೆ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ತರಕಾರಿ ಮಾರುಕಟ್ಟೆಗೆ ತರಕಾರಿಗಳನ್ನು ಬೆಳಗಿನ ಜಾವವೆ ತಂದಿದ್ದರಿಂದ ರೈತರು ಶೌಚಾ ಹಾಗೂ ಸ್ನಾನಕ್ಕೆ ತೆರಳಲು ನಿಂತ ನೀರಿನಲ್ಲಿಯೇ ಹೋಗಬೇಕಾಯಿತು. ಮಾರುಕಟ್ಟೆಯಲ್ಲಿ ಮೀನು ಮಾರಾಟಗಾರರು, ಕೋಳಿ ಸೇರಿದಂತೆ ಮಾಂಸವನ್ನು ಮಾರಾಟ ಮಾಡುವ ವ್ಯಾಪಾರಿಗಳು ಕೂಡ ನಿಂತ ನೀರಿನಿಂದಾಗಿ ಪರಿತಪಿಸುವಂತಾಯಿತು. ಮಾರುಕಟ್ಟೆಯ ನೀರು ಹರಿದು ಹೋಗಲು ಇರುವ ಚರಂಡಿಗಳಲ್ಲಿ ಕೋಳಿ ಮಾಂಸ ವ್ಯಾಪಾರಸ್ಥರು ಮಾಂಸ ಉತ್ಪಾದಿಸುವಾಗ ಉಳಿಯುವ ಕೋಳಿ ಪುಕ್ಕಗಳನ್ನು ಚರಂಡಿಗಳಲ್ಲಿಯೇ ಹಾಕುತ್ತಿರುವುದರಿಂದ ನೀರು ಹರಿದು ಹೋಗಲು ಅಡತಡೆ ಉಂಟಾಗುತ್ತಿದೆ. ಹಾಗೂ ನಗರಸಭೆಯ ಕರ್ಮಚಾರಿಗಳು ಪ್ರತಿನಿತ್ಯವೂ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಹಾಗೂ ಚರಂಡಿಗಳ ಮೇಲೆಯೇ ಮಳಿಗೆಯ ಮಾಲೀಕರು ಕಟ್ಟೆಗಳನ್ನು ನಿರ್ಮಿಸಿಕೊಂಡಿರುವುದರಿಂದ ಸ್ವಚ್ಛತೆಗೆ ಅಡೆತಡೆ ಉಂಟಾಗುತ್ತಿದೆ. ಸ್ವಲ್ಪ ಮಳೆ ಬಂದರೂ ತಗ್ಗಿನ ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ. ಹಾಗೂ ನೀರು ಸಂಗ್ರಹಣ ಘಟಕವನ್ನು ಶುದ್ಧಿಮಾಡುವಾಗ ಹೊರಹಾಕುವ ನೀರು ಕೂಡ ಈ ಚರಂಡಿಗಳಲ್ಲಿ ಹರಿಯುತ್ತದೆ. ಪ್ರತಿನಿತ್ಯದ ದಿನಬಳಕೆಗೆ ಅವಶ್ಯಕವಾದ ತರಕಾರಿ ಸೇರಿದಂತೆ ಇತರೆ ವಸ್ತುಗಳಿಗಾಗಿ ನಗರ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು ಇಲ್ಲಿಯೇ ಖರೀದಿಸುವುದರಿಂದ ಪ್ರತಿನಿತ್ಯವೂ ಗ್ರಾಹಕರಿಂದ ತುಂಬಿ ಜನನಿಬಿಡ ವಾಗಿರುತ್ತದೆ. ಇಂದು ಗ್ರಾಹಕರು ಮಾಂಸ ಸೇರಿದಂತೆ ಇನ್ನಿತರ ತರಕಾರಿಗಳನ್ನು ಕೊಳ್ಳಲು ನಿಂತ ನೀರಿನಲ್ಲಿಯೇ ಮೂಗು ಮುಚ್ಚಿಕೊಂಡು ಖರಿದಿಸಿದರೆ, ಕೆಲವೊಬ್ಬರು ಅನಾರೋಗ್ಯಕರ ವ್ಯವಸ್ಥೆ ಇರುವುದರಿಂದ ವಾಪಸ್ಸು ತೆರಳಿದರು.

ರೈತ ಅಲ್ಲಾಭಕ್ಷಿ ಮಾತನಾಡಿ ಬೆಳಗಿನ ಜಾವವೇ ತರಕಾರಿಗಳನ್ನು ತಂದಿದ್ದೇನೆ, ಇಲ್ಲಿ ತರಕಾರಿಗಳನ್ನಿಡಲು ಸರಿಯಾದ ವ್ಯವಸ್ಥೆಯೇ ಇಲ್ಲ, ನೀರಿನಲ್ಲಿಟ್ಟ ತರಕಾರಿಗಳನ್ನು ಕೊಳ್ಳಲು ವ್ಯಾಪರಸ್ಥರು ಮುಂದೆ ಬರುತ್ತಿಲ್ಲ. ಆದ್ದರಿಂದ ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಆಕ್ರೋಷ ವ್ಯಕ್ತಪಡಿಸಿದರು.

ತರಕಾರಿ ಮಾರಾಟಗಾರ ಮಹಮ್ಮದ್ ಹುಸೇನ್ ಮಾತನಾಡಿ ಹಲವಾರು ವರ್ಷಗಳಿಂದ ದಿನದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ಧೇನೆ. ನಗರಸಭೆಯವರು ಕೇವಲ ಕರವಸೂಲಿಗೆ ಆಸಕ್ತಿ ತೋರುತ್ತಾರೆ ವಿನ: ಇಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ಆಸಕ್ತಿ ವಹಿಸುತ್ತಿಲ್ಲ. ಗ್ರಾಹಕರಿಗೆ ಶುದ್ಧವಾದ ಸ್ವಚ್ಛ ತರಕಾರಿಯನ್ನು ನೀಡಲು ರೈತರಿಂದ ಬಂದ ತರಕಾರಿಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಲು ನೀರಿನ ಟ್ಯಾಂಕರ್ ವ್ಯವಸ್ಥೆಯಿಲ್ಲ. ಹಾಗೂ ತರಕಾರಿ ವ್ಯಾಪಾರ ಮಾರುಕಟ್ಟೆಯಲ್ಲಿ ಶೇಖರಣೆಗೊಳ್ಳುವ ತರಕಾರಿ ತ್ಯಾಜ್ಯಗಳ ವಿಲೇವಾರಿ ಮಾಡುತ್ತಿಲ್ಲ. ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನಗರಸಭೆಯವರು ಮಾಡಿಕೊಡಬೇಕೆಂದು ಒತ್ತಾಯಿಸಿದರು.

Leave a Comment