ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ನಾಳೆ ಎಐಎಂಐಎಂ ಪಕ್ಷದಿಂದ ಪ್ರತಿಭಟನೆ

ಬಳ್ಳಾರಿ, ಡಿ.6: ಬಳ್ಳಾರಿ ನಗರದಲ್ಲಿ ಸ್ವಚ್ಛತೆ ಕಾಪಾಡುವುದೂ ಸೇರಿದಂತೆ ನಾಗರೀಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಎಐಎಂಐಎಂ (ಮಜ್ಲಿಸ್) ಪಕ್ಷದ ವತಿಯಿಂದ ನಾಳೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಆಲ್ ಇಂಡಿಯಾ ಎಂಐಎಂ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಾಕೀರ್ ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಸ್ವಚ್ಛತೆ ಮಾಯವಾಗುತ್ತಿದೆ. ಹೊರ ಮತ್ತು ಒಳ ಚರಂಡಿಗಳ ಸಮರ್ಪಕ ನಿರ್ವಹಣೆಯಾಗುತ್ತಿಲ್ಲ, 8-10 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ರಸ್ತೆಗಳ ದುರಸ್ತಿ, ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದರು.

ನಗರದಲ್ಲಿ ಕಸ-ಕಡ್ಡಿ, ಹೊಲಸುಗಳಿಂದಾಗಿ ಕ್ರಿಮಿಕೀಟಗಳು, ನೊಣ-ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ನಾಗರೀಕರು ವಿವಿಧ ರೋಗಗಳಿಂದ ನರಳಾಡುವಂತಾಗಿದೆ. ಆದುದರಿಂದ ನಗರದಲ್ಲಿನ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ನಾಳೆ ಬೆಳಿಗ್ಗೆ 10 ಗಂಟೆಗೆ ಕೌಲ್ ಬಜಾರ್ ನಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು, ಹಿರಿಯ ನಾಗರೀಕ ಯುವಕರೂ ಸೇರಿದಂತೆ ನೂರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಜಾಕೀರ್ ತಿಳಿಸಿದರು.

ನೂರಾರು ಕೋಟಿ ಮಂಜೂರು
ಕಳೆದ ಮೂಱ್ನಾಲ್ಕು ವರ್ಷಗಳಲ್ಲಿ ಮಹಾನಗರ ಪಾಲಿಕೆಗೆ ನೂರಾರು ಕೋಟಿ ರೂಪಾಯಿಗಳ ಹಣ ಮಂಜೂರಾಗಿದ್ದರೂ ಅಭಿವೃದ್ಧಿ ಪರ ಕಾರ್ಯಗಳು ಕಾಣುತ್ತಿಲ್ಲ. ಹಣದ ಸದ್ಬಳಕೆಯಾಗಿದೆಯೆ? ಎನ್ನುವ ಸಂಶಯ ಮೂಡುತ್ತಿದೆ. ಕೌಲ್ ಬಜಾರ್ ನ ಕೆಲವೆಡೆಗಳಲ್ಲಿ ಇನ್ನೂ ಕೂಡಾ ಶೌಚಾಲಯಗಳೇ ಇಲ್ಲದಂತಹ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಐಎಂಐಎಂ ಪಕ್ಷದ ವೀರೇಶ್, ಶಿವಕುಮಾರ್, ಅಲಿಸಾಬ್, ಡಾ|| ರಹೀಲ್, ಅಲ್ತಾಫ್, ರೋಷನ್, ಸೂಫಿ, ಅರೀಫ್, ಅಬೂಬಕ್ಕರ್, ರೋಷನ್ ಮತ್ತು ಇತರರು ಉಪಸ್ಥಿತರಿದ್ದರು.

Leave a Comment