ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಚಿವರ ಸೂಚನೆ

ಮೈಸೂರು.ಜ.11- ಗ್ರಾಮಾಂತರ ಪ್ರದೇಶಗಳ ಜನತೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳಾದ ಶುದ್ದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ, ವೃದ್ಧಾಪ್ಯ ವೇತನ ಇವುಗಳನ್ನು ಶೀಘ್ರವಾಗಿ ಕಲ್ಪಿಸಿಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ಬೆಳಿಗ್ಗೆ ಇಲವಾಲ ಹೋಬಳಿಯ ದೊಡ್ಡಮಾರಗೌಡನ ಹಳ್ಳಿ ಹಾಗೂ ಮೈಸೂರು ತಾಲೂಕಿನ ಬೀರಿಹುಂಡಿ ಕ್ಲಸ್ಟರ್ ನುಗ್ಗಹಳ್ಳಿ ಗ್ರಾಮಗಳಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅಲ್ಲಿನ ಜನತೆ ಶುದ್ದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಮಸ್ಯೆ ಚರಂಡಿ ವ್ಯವಸ್ಥೆ ಸರಿಯಿಲ್ಲ, ಹಿರಿಯರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ ಇತ್ಯಾದಿಗಳು ನಿಗದಿತ ಸಮಯಕ್ಕೆ ಬಾರದೆ ಬಹಳ ತೊಂದರೆ ಅನುಭವಿಸುತ್ತಿದ್ದೇವೆ ಎಂಬ ದೂರುಗಳ ಸರಮಾಲೆಯನ್ನೇ ಸಚಿವರ ಮುಂದೆ ಬಚ್ಚಿಟ್ಟರು. ಇದಲ್ಲದೆ ಶಾಲಾ ಕಟ್ಟಡದಲ್ಲಿ ಬಿಸಿಯೂಟ ವ್ಯವಸ್ಥೆ ಸರಿಯಿಲ್ಲ. ಅಂಗನವಾಡಿ ಕಟ್ಟಡ ಶಿಥಿಲಗೊಂಡಿದೆ ಇದರ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಈ ಎರಡೂ ಗ್ರಾಮಗಳ ಜನತೆ ಸಚಿವರಲ್ಲಿ ಮನವಿ ಮಾಡಿದರು.
ಈ ಎರಡೂ ಗ್ರಾಮಗಳ ಜನತೆಯ ಸಮಸ್ಯೆಗಳನ್ನು ತದೇಕ ಚಿತ್ತದಿಂದ ಆಲಿಸಿದ ಸಚಿವ ದೇವೇಗೌಡ ತಮ್ಮೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿವಿಧ ಇಲಾಖಾಧಿಕಾರಿಗಳಿಗೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಇಂದಿನಿಂದಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ಸಲ ಪ್ರವಾಸ ಕೈಗೊಂಡ ಸಂಧರ್ಭದಲ್ಲಿ ಮತ್ತೆ ಇದೇ ರೀತಿಯ ಸಮಸ್ಯೆಗಳ ಬಗ್ಗೆ ಇಲ್ಲಿನ ಜನತೆ ಮಾಹಿತಿ ನೀಡಿದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Leave a Comment