ಮೂಲಭೂತವಾದ ರಾಷ್ಟ್ರೀಯವಾದವಲ್ಲ

ಕಮಲಾಪುರ (ಹೊಸಪೇಟೆ).ಫೆ.14.ಮೂಲಭೂತವಾದವನ್ನೇ ರಾಷ್ಟ್ರೀಯವಾದ ಎಂದು ಬಿಂಬಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಆದರೆ, ವಾಸ್ತವದಲ್ಲಿ ಮೂಲಭೂತವಾದ ರಾಷ್ಟ್ರೀಯವಾದವಲ್ಲ. ತಿಳಿದವರು ಮೌನ ಮುರಿದು ಅದರ ಬಗ್ಗೆ ಪ್ರತಿಕ್ರಿಯಿಸದಿದ್ದರೆ ಅದು ಆತ್ಮವಂಚನೆ ಆಗುತ್ತದೆ’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ದಿ ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌’ 29ನೇ ಮಹಾಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಮೂಲಭೂತವಾದಿಗಳು, ಗರ್ಭಗುಡಿ ಸಂಸ್ಕೃತಿಯವರು ಚರಿತ್ರೆಯ ಚಾರಿತ್ರ್ಯ ಹಾಳು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಹರಣ ಕೂಡ ಆಗುತ್ತಿದೆ. ಚರಿತ್ರೆ ಗೊತ್ತಿಲ್ಲದ, ಚಾರಿತ್ರ್ಯ ಇಲ್ಲದವರು ಚರಿತ್ರೆ ಬಗ್ಗೆ ಮಾತನಾಡುತ್ತಿದ್ದಾರೆ.  ಎಲ್ಲಾ ತಿಳಿದುಕೊಂಡವರು, ಚರಿತ್ರೆಕಾರರು ಅದರ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿದೆ. ಇಲ್ಲವಾದರೆ ಸುಳ್ಳೇ ಸತ್ಯವೆಂದು ಜನ ಭಾವಿಸುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಸಂಕಟದ ಸ್ಥಿತಿಯಲ್ಲಿ ತಿಳಿದವರು ಏಕಧ್ವನಿಯಲ್ಲಿ ಮಾತನಾಡಬೇಕು. ಧರ್ಮ, ರಾಜಕೀಯ ಪಕ್ಷಗಳ ಕಾರಣಕ್ಕಾಗಿ ವಾಸ್ತವವನ್ನು ಮರೆಮಾಚಲಾಗುತ್ತಿದೆ. ಧರ್ಮ, ಸಂಸ್ಕೃತಿಯನ್ನು ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಚರಿತ್ರೆಯಲ್ಲಿ ನಾಯಕ–ಖಳನಾಯಕರೆಂಬುದೆ ಇಲ್ಲ. ಟಿಪ್ಪು ಸುಲ್ತಾನ್‌ ಕಾಲದಲ್ಲಿ ದೇಶ ಎಂಬ ಪರಿಕಲ್ಪನೆಯೇ ಇರಲಿಲ್ಲ. ಹೀಗಾಗಿ ಆತ ದೇಶಭಕ್ತನೋ ಅಥವಾ ದೇಶದ್ರೋಹಿಯೋ ಎಂಬ ಚರ್ಚೆಯೇ ಅಪ್ರಸ್ತುತ’ ಎಂದು ತಿಳಿಸಿದರು.

Leave a Comment