ಮೂರುಸಾವಿರ ಮಠದಲ್ಲಿ ಸತ್ಯದರ್ಶನ ಸಭೆ: ಪೊಲೀಸ್ ಸರ್ಪಗಾವಲು

ಹುಬ್ಬಳ್ಳಿ, ಫೆ 23: ವೀರಶೈವ ಸಮುದಾಯದ ಪ್ರತಿಷ್ಠಿತ ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದದ ಹಿನ್ನೆಲೆಯಲ್ಲಿ ಇಂದು ಸತ್ಯ ದರ್ಶನ ಸಭೆಯನ್ನು ಶ್ರೀ ದಿಂಗಾಲೇಶ್ವರ ಸ್ವಾಮಿಗಳು ನಿಶ್ಚಿತವಾಗಿ ಮಾಡುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಮಠದ ಸುತ್ತಲೂ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.
ಪೊಲೀಸ್ ಇಲಾಕೆಯಿಂದ ನೂರಾರು ಪೊಲೀಸರು ಸೇರಿದಂತೆ ಕೆ.ಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ. ಕೃಷ್ಣಕಾಂತ ಮಠದ ಸುತ್ತಲೂ ಪರಿಶೀಲನೆ ನಡೆಸಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ ಮುಂದಿನ ಪರಿಸ್ಥಿತಿಗೆ ಅನುಗುಣವಾಗಿ ಬಂದೋಬಸ್ತ ಒದಗಿಸಲಾಗುವುದು ಎಂದು ತಿಳಿಸಿದರು.
ಸತ್ಯ ದರ್ಶನ ಸಭೆಗೆ ಅನುಮತಿ ವಿಚಾರವಾಗಿ ಮಾತನಾಡಿದ ಅವರು ಎಷ್ಟು ಜನರು ಸಭೆಗೆ ಬರುತ್ತಾರೆ ಎನ್ನುವುದರ ಪೂರ್ಣ ಮಾಹಿತಿ ಸದ್ಯಕ್ಕಿಲ್ಲ. ಈಗಿರುವ ಮಾಹಿತಿ ಪ್ರಕಾರ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ ಎಂದರು.
ಮಠದ ಆವರಣದ ಸುತ್ತಲೂ ಬ್ಯಾರಿಕೇಡ್‍ಗಳನ್ನು ಹಾಕಲಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಸಭೆಗೆ ಈಗಾಗಲೇ ಎಲ್ಲ ರೀತಿಯ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಚಾತುರ್ಯ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗುವುದು ಎಂದರು.
ಕೋಟ್ಯಂತರ ಭಕ್ತರ ಮತ್ತು ಸಮುದಾಯದ ಚಿತ್ತ ಈಗ ಮಠದ ವಿದ್ಯಮಾನದತ್ತ ಕೇಂದ್ರೀಕೃತವಾಗಿದ್ದು, ಇಂದು ನಡೆಯುವ ಸಭೆಗೆ ಪ್ರಮುಖ ಗಣ್ಯರನ್ನು ದಿಂಗಾಲೇಶ್ವರ ಶ್ರೀಗಳು ಆಹ್ವಾನಿಸಿದ್ದಾರೆ.
ಸತ್ಯದರ್ಶನ ಸಭೆ ನಡೆದೇ ನಡೆಯುತ್ತದೆ. ಯಾರು ಏನೇ ಮಾಡಿದರೂ ಸಭೆ ನಿಶ್ಚಿತ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ. ಸಭೆಗೆ ಸುಮಾರು 10 ರಿಂದ 14 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಶ್ರೀಮಠಕ್ಕೆ ಆಗಮಿಸುವ ಮುಂಚಿತವಾಗಿ ಇಂದು ಬೆಳಿಗ್ಗೆ ಬಸವೇಶ್ವರರು, ಕಿತ್ತೂರು ಚನ್ನಮಮ್, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಪ್ರತಿಮೆಗೆಲ್ಲ ಮಾಲಾರ್ಪಣೆ ಮಾಡಿ ಮಠಕ್ಕೆ ಆಗಮಿಸುವುದಾಗಿ ತಿಳಿಸಲಾಗಿದ್ದು, ಈ ಮೆರವಣಿಗೆಗೂ ಸಹ ನೂರಾರು ಪೊಲೀಸರ ಸರ್ಪಗಾವಲನ್ನು ಒದಗಿಸಲಾಗಿದೆ.

Leave a Comment