ಮೂರನೇ ಟಿ-20 ಪಂದ್ಯ ನಾಳೆ : ಸರಣಿ ಜಯದ ಮೇಲೆ ಟೀಮ್ ಇಂಡಿಯಾ ಕಣ್ಣು

ಹ್ಯಾಮಿಲ್ಟನ್, ಜ 28 – ಮೊದಲ ಎರಡು ಪಂದ್ಯಗಳ ಭರ್ಜರಿ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಭಾರತ ತಂಡ ನಾಳೆ ಇಲ್ಲಿನ ಸೆಡ್ಡಾನ್ ಪಾರ್ಕ್ ಅಂಗಳದಲ್ಲಿ ನಡೆಯುವ ಮೂರನೇ ಹಣಾಹಣಿಯಲ್ಲಿ ಗೆದ್ದು ನ್ಯೂಜಿಲೆಂಡ್ ನೆಲದಲ್ಲಿ ಮೊದಲ ಟಿ-20 ಸರಣಿ ಜಯದ ಸಾಧಿಸಲು ಸಜ್ಜಾಗಿದೆ.

ಕಳೆದ ಎರಡೂ ಪಂದ್ಯಗಳಲ್ಲಿ ಪ್ರವಾಸಿ ತಂಡ ನ್ಯೂಜಿಲೆಂಡ್ ತಂಡದ ಎದುರು ಮೂರು ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿತ್ತು. ಮೊದಲನೇ ಪಂದ್ಯದಲ್ಲಿ ಭಾರತ 204 ರನ್ ಗಳ ಗುರಿಯನ್ನು ಸುಲಭವಾಗಿ ಮುಟ್ಟಿತ್ತು. ಬಳಿಕ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 132 ರನ್ ಗಳಿಗೆ ನಿಯಂತ್ರಿಸಿತ್ತು. ಬಳಿಕ ಗುರಿ ಹಿಂಬಾಲಿಸಿ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತ್ತು.

ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅದರಲ್ಲೂ ಕನ್ನಡಿಗ ರಾಹುಲ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಲ್ಲೂ ಎಲ್ಲರ ಗಮನ ಸೆಳೆದಿದ್ದರು. ಮತ್ತೊಂದೆಡೆ ಅಯ್ಯರ್, ನಾಲ್ಕನೇ ಕ್ರಮಾಂಕದಲ್ಲಿ ಪರಿಪೂರ್ಣ ಬ್ಯಾಟ್ಸ್‌ಮನ್ ರೀತಿ ಬ್ಯಾಟ್ ಬೀಸಿದ್ದರು. ತಾನೊಬ್ಬಅದ್ಭುತ ಮ್ಯಾಚ್ ಫಿನಿಷರ್ ಎಂದು ಸಾಬೀತುಪಡಿಸಿದ್ದ.

ಈಗಾಗಲೇ ಎರಡು ಪಂದ್ಯಗಳನ್ನು ಕೈಚೆಲ್ಲಿಕೊಂಡಿರುವ ನ್ಯೂಜಿಲೆಂಡ್ ತಂಡ ನಾಳಿನ ಪಂದ್ಯದಲ್ಲಿ ಮೂರು ವಿಭಾಗಗಳಲ್ಲಿ ಸುಧಾರಣೆ ಕಂಡುಕೊಂಡು ನಾಳಿನ ಪಂದ್ಯ ಗೆದ್ದು ಸರಣಿ ಜೀವಂತವಾಗಿರಿಸಿಕೊಳ್ಳುವ ವಿಶ್ವಾಸವನ್ನು ನಾಯಕ ಕೇನ್ ವಿಲಿಯಮ್ಸನ್ ಹೊಂದಿದ್ದಾರೆ. ಇತ್ತೀಚೆಗಷ್ಟೇ ಅನುಭವಿ ಆಟಗಾರರು ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ತಂಡ ಭಾರತವನ್ನು ಎದುರಿಸುತ್ತಿದೆ.

ಟ್ರೆಂಟ್ ಬೌಲ್ಟ್ ಹಾಗೂ ಲಾಕಿ ಫರ್ಗೂಸನ್ ಅವರು ಗಾಯದಿಂದಾಗಿ ಸರಣಿಯಿಂದ ದೂರ ಉಳಿದಿದ್ದಾರೆ. ಮತ್ತೊಂದೆಡೆ ಸ್ಟಾರ್‌ ಆಲ್ರೌಂಡರ್ ಗಳಾದ ಕಾಲಿನ್ ಡಿ ಗ್ರಾಂಡ್ಹೋಮ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರು ಲಯ ಕಳೆದುಕೊಂಡಿದ್ದು, ಭಾರತದ ಬೌಲರ್ ಗಳಿಗೆ ಬ್ಯಾಟಿಂಗ್ ಮಾಡುವಲ್ಲಿ ತಡಕಾಡುತ್ತಿದ್ದಾರೆ.

ನಾಳಿನ ಪಂದ್ಯದಲ್ಲಿ ಬ್ಲೈರ್ ಟಿಕ್ನರ್ ಬದಲು ಡೆರ್ಲಿ ಮಿಚೆಲ್ ಅಥವಾ ಸ್ಕಾಟ್ ಕುಗ್ಲೆಜ್ನ ಅವರಲ್ಲಿ ಒಬ್ಬರನ್ನು ಅಂತಿಮ 11 ರಲ್ಲಿ ಆಡಿಸಲಿದ್ದಾರೆ. ಟಿಕ್ನರ್ ಅವರು ಅವರು ಕಳೆದ ಎರಡು ಪಂದ್ಯಗಳಲ್ಲಿ ಮಾಡಿದ ಆರು ಓವರ್ ಗಳಿಂದ 68 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು.

ನಾಳೆ ನಡೆಯುವ ಪಂದ್ಯಕ್ಕೂ ನಾಯಕ ವಿರಾಟ್ ಕೊಹ್ಲಿ ಅದೇ ಅಂತಿಮ 11 ಆಟಗಾರರನ್ನು ಕಣಕ್ಕೆ ಇಳಿಸಲಿದ್ದಾರೆ. ಅದೇ ತಂಡವನ್ನು ಮುಂದುವರಿಸಿ ಚುಟುಕು ಸರಣಿಯನ್ನು ವಶಪಡಿಸಿಕೊಳ್ಳು ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಕಳೆದ ಪಂದ್ಯಗಳಾಡಿದ್ದ ಈಡನ್ ಪಾರ್ಕ್ ಅಂಗಳಕ್ಕಿಂತ ಸೆಡ್ಡಾನ್ ಪಾರ್ಕ್ ದೊಡ್ಡದಾಗಿದೆ. ಕಳೆದ ಪಂದ್ಯದಂತೆ ಈ ಅಂಗಳದಲ್ಲಿ ಸಿಕ್ಸರ್ ಗಳನ್ನು ಸಿಡಿಸಲು ಸಾಧ್ಯವಿಲ್ಲ.

ಸಂಭಾವ್ಯ ಆಟಗಾರರು

ಭಾರತ: ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್/ಶಿವಂದುಬೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ಜಸ್ಪ್ರಿತ್ ಬುಮ್ರಾ.

ನ್ಯೂಜಿಲೆಂಡ್: ಮಾರ್ಟಿನ್ ಗುಪ್ಟಿಲ್, ಟಿಮ್ ಸೀಫರ್ಟ್, ಕೇನ್ ವಿಲಿಯಮ್ಸನ್(ನಾಯಕ), ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್ಹೋಮ್, ಡೆರ್ಲಿ ಮಿಚೆಲ್, ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ, ಹಮೀಶ್ ಬೆನೆಟ್, ಬ್ಲೈರ್ ಟಿಕ್ಕರ್, ಟಿಮ್ ಸೌಥ್.

Leave a Comment