ಮೂತ್ರಪಿಂಡ ಸಮಸ್ಯೆಗಳು-ಪರಿಹಾರ ಕುರಿತು ಉಪನ್ಯಾಸ

ದಾವಣಗೆರೆ, ಅ. 11- ನಗರದ ಮಾಗನೂರು ಬಸಪ್ಪ ಶಾಲಾ ಸಭಾಂಗಣದಲ್ಲಿ ಅ. 13 ರಂದು ಸಂಜೆ 6-30 ಕ್ಕೆ ಹಮ್ಮಿಕೊಂಡಿರುವ ಶಿವಗೋಷ್ಟಿ 270-ಸ್ಮರಣೆ-ವಚನಸಿರಿ ಕಾರ್ಯಕ್ರಮದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಮತ್ತು ಪರಿಹಾರ ಕುರಿತು ಮೂತ್ರಕೋಶ ತಜ್ಞ ಡಾ.ಮೋಹನ್ ಕೇಶವಮೂರ್ತಿ ಉಪನ್ಯಾಸ ನೀಡಲಿದ್ದಾರೆ ಎಂದು ಎಸ್ಎಸ್ಐಎಂಎಸ್ ನ ಮೂತ್ರಕೋಶ ತಜ್ಞ ಡಾ.ಕಿರಣ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈ ಉಪನ್ಯಾಸ ಕಾರ್ಯಕ್ರಮದಲ್ಲಿ ವಯಸ್ಕರಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂತ್ರವಿಸರ್ಜನೆಯ ಸಮಸ್ಯೆಗಳು, ಮೂತ್ರಪಿಂಡ ಕಸಿ, ಪ್ರೋಸ್ಟೇಟ್ ಗ್ರಂಥಿಯ ಸಮಸ್ಯೆಗಳು ಮತ್ತು ಅದರ ಪರಿಹಾರ, ಮೂತ್ರಪಿಂಡ, ಮೂತ್ರಕೋಶ, ಮೂತ್ರಚೀಲದಲ್ಲಿನ ಕಲ್ಲಿನ ಸಮಸ್ಯೆಗಳು ಹಾಗೂ ಅದರ ಚಿಕಿತ್ಸೆ, ವಯಸ್ಕರ ಮೂತ್ರ ವಿಸರ್ಜನಾಳದ ಕ್ಲಿಷ್ಟಕರ ಪುನರ್ ನಿರ್ಮಾಣ ಮತ್ತು ಪ್ರಧಾನ ಮೂತ್ರಗ್ರಂಥಿ ಶಸ್ತ್ರ ಪ್ರಕ್ರಿಯೆಗಳ ಬಗ್ಗೆ ಹಾಗೂ ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಮೂತ್ರವಿಸರ್ಜನಾ ಸೋಂಕಿನ ಬಗ್ಗೆ ಮಾಹಿತಿ ನೀಡಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀ ವಹಿಸಿಕೊಳ್ಳಲಿದ್ದಾರೆ. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೂತ್ರಕೋಶದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬೇಕೆಂದು ಅವರು ಮನವಿ ಮಾಡಿದರು.

Leave a Comment