ಮೂಢನಂಬಿಕೆ ವಿರುದ್ಧ ಜಾಗೃತಿಗೆ ಜ್ಞಾನವಿಜ್ಞಾನ ನಡಿಗೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಆ. ೧೬- ಮೂಢನಂಬಿಕೆ ಮತ್ತು ಅವೈಜ್ಞಾನಿಕ ವಿಚಾರಗಳ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಆ.20ರಂದು ವೈಜ್ಞಾನಿಕ ಮನೋಭಾವಕ್ಕಾಗಿ ಭಾರತ ಜ್ಞಾನವಿಜ್ಞಾನ ಸಮಿತಿ ನಡಿಗೆಯನ್ನು ಸಂಘಟಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳೊಂದಿಗೆ ಸೇರಿ ಈ ನಡಿಗೆ ಸಂಘಟಿಸಲಾಗುತ್ತಿದೆ.
ನಗರದ ಪುರಭವನದ ಮುಂದೆ ಅಂದು ಮಧ್ಯಾಹ್ನ 2.30ಕ್ಕೆ ಸಣ್ಣ ಸಭೆ ನಡೆಸಿ ನಂತರ ಕಾರ್ಪೋರೇಷನ್ ಕೆಂಪೇಗೌಡ ರಸ್ತೆ ಮೂಲಕ ಸರ್ಕಾರಿ ಕಲಾ ಕಾಲೇಜಿನವರೆಗೆ ನಡಿಗೆ ಸಂಘಟಿಸಲಾಗುವುದು. ನಂತರ ಕಾಲೇಜಿನ ಖಾಸಗಿ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಎಸ್.ಜಿ. ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈಜ್ಞಾನಿಕ ಮತ್ತು ವೈಚಾರಿಕತೆ ಅಳವಡಿಸಿಕೊಳ್ಳುವುದು ದೇಶದ ಪ್ರತಿ ನಾಗರಿಕನ ಸಂವಿಧಾನಬದ್ದ ಕರ್ತವ್ಯ. ಆದರೆ ದೇಶದಲ್ಲಿ ಇಂದು ಸಂವಿಧಾನದ ಮೇಲೆ ತೀವ್ರ ದಾಳಿ ನಡೆಸಲಾಗುತ್ತಿದೆ ಎಂದರು. ಮೂಢನಂಬಿಕೆಗಳು, ಅವೈಜ್ಞಾನಿಕ ವಿಚಾರಗಳನ್ನು ಆಡಳಿತ ನಡೆಸುತ್ತಿರುವವರು ಸಂವಿಧಾನಿಕ ಜವಾಬ್ದಾರಿ ಹುದ್ದೆಯಲ್ಲಿರುವವರೇ ಹರಡುತ್ತಿದ್ದಾರೆ. ಇದರಿಂದ ಜನತೆ ದಾರಿ ತಪ್ಪುತ್ತಿದ್ದು ಮೌಢ್ಯತೆಯನ್ನು ಸಂಭ್ರಮಿಸುವ ಸಂಸ್ಕೃತಿಯೆಡೆಗೆ ತಳ್ಳುತ್ತಿದೆ. ಇತಿಹಾಸದುದ್ದಕ್ಕೂ ಬೆಳೆದುಬಂದಿರುವ ವೈಚಾರಿಕ ಪರಂಪರೆಯಿಂದ ಜನತೆ ವಿಮುಕ್ತರಾಗುತ್ತಿದ್ದಾರೆ. ವಿಚಾರವಾದಿಗಳು, ಬುದ್ಧಿಜೀವಿಗಳು, ಬರಹಗಾರರ ಮೇಲೆ ಮೌಢ್ಯಶಕ್ತಿಯಿಂದ ದಾಳಿ ನಡೆಯುತ್ತಿದೆ ಎಂದರು.
ಡಾರ್ವಿನ್ ವೈಜ್ಞಾನಿಕ ವಿಚಾರವಾದ ಸುಳ್ಳು ಎಂದು ಅದನ್ನು ಪಠ್ಯದಿಂದ ತೆಗೆದುಹಾಕಬೇಕೆನ್ನುತ್ತಿರುವುದು ವಿಜ್ಞಾನ ಮತ್ತು ತರಗತಿ ಬೋಧನೆ ಮೇಲೆ ನಡೆಸುತ್ತಿರುವ ದಾಳಿಗೆ ಸಾಕ್ಷಿ ಎಂದ ಅವರು, ಡಾ. ನರೇಂದ್ರದಾಬೂಲ್ಕರ್ ಅವರನ್ನು ಹತ್ಯೆಗೈದ ಆ.20ನ್ನು ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ ಎಂದು ರಾಷ್ಟ್ರವ್ಯಾಪಿ ಆಚರಿಸಲು ಅಸಂಖ್ಯಾತ ಸಂಘಟನೆಗಳು ಆಚರಿಸಲು ಕರೆ ನೀಡಿವೆ. ಈ ನಿಟ್ಟಿನಲ್ಲಿ ಅಂದು ವೈಜ್ಞಾನಿಕ ಮನೋಭಾವಕ್ಕಾಗಿ ನಡಿಗೆ ಸಂಘಟಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಡಾ. ವಸುಂಧರಭೂಪತಿ, ರುದ್ರಪ್ಪಅನಗವಾಡಿ, ಬಿ.ಟಿ. ಲಲಿತಾನಾಯಕ್, ಶುಭಶಂಕರ್, ನಾಗೇಶ್ ಹರಳಗುಪ್ಪೆ ಮತ್ತಿತರರು ಉಪಸ್ಥಿತರಿದ್ದರು.

Leave a Comment