ಮುಸ್ಲಿಂರ ಸಹಕಾರಕ್ಕೆ ಸಿಎಂ ಮನವಿ

ಬೆಂಗಳೂರು, ಏ. ೩- ಕೊರೊನಾ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಜನಜಾಗೃತಿ ಮೂಡಿಸಿ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುವ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಸ್ಲಿಂ ಸಮುದಾಯದ ಶಾಸಕರು ಹಾಗೂ ಮುಖಂಡರ ಜತೆ ಸಮಾಲೋಚನೆ ನಡೆಸಿದರು.

ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿಂದು ಮುಸ್ಲಿಂ ಮುಖಂಡರ ಜತೆ ಸಭೆ ನಡೆಸಿದ ಮುಖ್ಯಮಂತ್ರಿ ಅವರು, ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡದೆ ಧಾರ್ಮಿಕ ಸಭೆಯಲ್ಲಿ ಆಗಿರುವ ಆಚಾತುರ್ಯಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಿ, ದೆಹಲಿಗೆ ಭೇಟಿ ನೀಡಿದ ರಾಜ್ಯದ ವ್ಯಕ್ತಿಗಳ ಮಾಹಿತಿ ನೀಡಿ. ಇವರೆಲ್ಲರೂ ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಹಾಗೂ ಕ್ವಾರಂಟೈನ್‌ನನ್ನು ಕಟ್ಟನಿಟ್ಟಾಗಿ ಪಾಲಿಸುವಂತೆ ಮನವೊಲಿಸಲು ಸಹಕಾರ ನೀಡಿ ಎಂದು ಮನವಿ ಮಾಡಿದರು.

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಮದ್ದು. ಹಾಗಾಗಿ ಜಾತಿ, ಧರ್ಮ, ಬೇಧ ಮರೆತು ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕೊರೊನಾ ಸೋಂಕು ತಡೆಯಲು ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳು ಮಾಡಿದ ಮನವಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮುಖಂಡರು ಸಮ್ಮತಿ ವ್ಯಕ್ತಪಡಿಸಿದರು.  ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಕೊರೊನಾ ವಿರುದ್ದ ಸಮರ ಸಾರೋಣ ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಹೇಳಿದರು.

ಕೊರೊನಾ ತಡೆ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಮುಸ್ಲಿಂ ಸಮುದಾಯದಲ್ಲೂ ಈ ಬಗ್ಗೆ ಜನ ಜಾಗೃತಿ ಮೂಡಿಸಿ ಸೋಂಕು ತಡೆಯಲು ಸಹಕರಿಸುವಂತೆ ಅವರು ಮುಸ್ಲಿಂ ಮುಖಂಡರಲ್ಲಿ ಮನವಿ ಮಾಡಿದರು.

ಸಿ.ಎಂ. ಇಬ್ರಾಹಿಂ ಹೇಳಿಕೆ
ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ, ಕೊರೊನಾದಿಂದ ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ದೆಹಲಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಸಮುದಾಯದವರು ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳುವಂತೆ ಹೇಳಿದ್ದಾರೆ. ಪುಕ್ಸಟ್ಟೆ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಏನು ತೊಂದರೆ ಎಂದರು.

ಯಾಱ್ಯಾರ ಮೇಲೆ ಅನುಮಾನ ಇದೆಯೋ ಆ ಮುಸ್ಲಿಂ ಬಾಂಧವರು ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಇಬ್ರಾಹಿಂ ಹೇಳಿದರು.  ಮುಸ್ಲಿಂ ಸಮುದಾಯ ಸಾಮೂಹಿಕ ನಮಾಜ್ ನಿಲ್ಲಿಸಿ ಸಹಕಾರ ಕೊಡುತ್ತಿದ್ದೇವೆ. ಕೆಲವೆಡೆ ಮಾಂಸ, ಮೀನು ಮಾರಾಟಕ್ಕೆ ಬಿಟ್ಟಿದ್ದರೆ ಕೆಲವೆಡೆ ಬಿಟ್ಟಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎಂದರು.

ಲಾಕ್‌ಡೌನ್ ಎಷ್ಟು ದಿನ ಎಂದು ಕೇಂದ್ರ ಸರ್ಕಾರ ಯೋಚಿಸಬೇಕು. ತೆರಿಗೆ ಸಂಗ್ರಹ ಶೂನ್ಯವಾಗಿದೆ. ಜನ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುಬಹುದು ಎಂಬ ಆತಂಕವೂ ಇದೆ. ಜನರಲ್ಲಿ ಜಾಗೃತಿ, ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.

ಜಮೀರ್ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜಮೀರ್ ಅಹಮದ್ ಖಾನ್, ದೆಹಲಿಯಲ್ಲಿ ಜಮಾತ್‌ಗೆ ಯಾರು ಯಾರು ಹೋಗಿ ಬಂದಿದ್ದಾರೋ ಅವರೆಲ್ಲಾ ದಯಮಾಡಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆಗಿರುವುದು ಬೇರೆ ಕಾರಣಕ್ಕೆ. ಎಂಸಿಆರ್, ಎನ್ಆರ್‌ಪಿ ಸರ್ವೆಗೆ ಹೋಗಿದ್ದಾರೆ ಎಂದು ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಇದೆ ಎಂದರು.  ಏನೇ ಇರಲಿ ಕೊರೊನಾ ಸೋಂಕು ತಡೆಯಲು ಎಲ್ಲ ರೀತಿಯ ಸಹಕಾರವನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳ ಈ ಸಭೆಯಲ್ಲಿ ಶಾಸಕರುಗಳಾದ ಸಿ.ಎಂ. ಇಬ್ರಾಹಿಂ, ಜಮೀರ್ ಅಹಮದ್ ಖಾನ್, ಎಂ.ಎ. ಹ್ಯಾರೀಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ನಸೀರ್ ಅಹಮದ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Leave a Comment