ಮುಲಾರಪಟ್ಣ ತಾತ್ಕಾಲಿಕ ರಸ್ತೆ ತೆರವು

ಬಂಟ್ವಾಳ, ಜೂ. ೧೫- ಕಳೆದ ವರ್ಷ ಜೂನ್ ತಿಂಗಳಲ್ಲಿ ಬಂಟ್ವಾಳ ತಾಲೂಕಿನ ಗಡಿಭಾಗವಾದ ಅರಳ ಗ್ರಾಮ ಮತ್ತು ಮಂಗಳೂರು ತಾಲೂಕಿನ ಮುತ್ತೂರು ಗ್ರಾಮ ಸಂಪರ್ಕಿಸುವ ೩೦ ವರ್ಷ ಹಳೆಯ ಮುಲ್ಲಾರಪಟ್ನ ಸೇತುವೆಯು ಮುರಿದು ಬಿದ್ದ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ರಸ್ತೆಯನ್ನು ಶುಕ್ರವಾರ ತೆರವುಗೊಳಿಸಲಾಗಿದೆ.
ಕಳೆದ ವರ್ಷ ಜೂ.೨೬ರಂದು ಮುಲಾರಪಟ್ಣ ಸೇತುವೆ ಮುರಿದು ಬಿದ್ದು ಒಂದು ವರ್ಷ ಆಗುತ್ತಾ ಬಂದರೂ ಇಲ್ಲಿ ಹೊಸ ಸೇತುವೆ ನಿರ್ಮಾಣದ ಕಾರ್ಯ ಮಾತ್ರ ಈ ವರೆಗೂ ನಿರ್ಮಾಣವಾಗಿಲ್ಲ. ಈ ಸೇತುವೆ ಮುರಿದು ಬಿದ್ದ ಬಳಿಕ ವಾಹನ ಸಂಚಾರವೂ ಸೇತುವೆ ಎರಡೂ ಬದಿಯಿಂದಲೇ ವಾಪಾಸಾಗುತ್ತಿದ್ದು, ಪಾದಚಾರಿಗಳಿಗೆ ಮಾತ್ರ ಇಲ್ಲಿರುವ ತೂಗುಸೇತುವೆ ಸಹಕಾರಿಯಾಗಿತ್ತು.
ಕಳೆದ ಡಿಸೆಂಬರ್ ನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ.ಆಶ್ರಫ್ ನೇತೃತ್ವದಲ್ಲಿ ಜಿಎಚ್‌ಎಂ ಫೌಂಡೇಶನ್ ವತಿಯಿಂದ ನದಿಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿದ್ದರು. ಇದರಿಂದಾಗಿ ಲಘುವಾಹನ ಸೇರಿದಂತೆ ಇಲ್ಲಿನ ಮುತ್ತೂರು ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸಹಿತ ಈ ಭಾಗದ ಜನಸಾಮಾನ್ಯರಿಗೆ ನದಿ ದಾಟಲು ಅನುಕೂಲಕರವಾಗಿತ್ತು. ಈ ನಡುವೆ ಅಕ್ರಮ ಮರಳು ಸಾಗಾಟವಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.
ಇದೀಗ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿ ಕೂಡಾ ನೆರೆ ನೀರು ಹರಿಯಲು ಆರಂಭಗೊಂಡಿದ್ದು, ಕಳೆದ ೬ ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಅನುಕೂಲವಾಗಿದ್ದ ಈ ತಾತ್ಕಾಲಿಕ ರಸ್ತೆಯನ್ನು ಶುಕ್ರವಾರ ತೆರವುಗೊಳಿಸುವ ಕಾರ್ಯ ನಡೆದಿದೆ.
೧೪.೬೭ ಕೋ.ಮಂಜೂರು: ಮುರಿದ ಮುಲಾರಪಟ್ಣ ಸೇತುವೆ ನಿರ್ಮಾಣಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರ ಮತುವರ್ಜಿಯಿಂದ ಸರಕಾರ ಈಗಾಗಲೇ ೧೪.೬೭ ಕೋ.ರೂ.ಮಂಜೂರುಗೊಳಿಸಿದ್ದು,ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ.ಮುಂದಿನ ಬೇಸಿಗೆಯಲ್ಲಿ ಸೇತುವೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ. ಮಳೆ ಆರಂಭವಾದ ಹಿನ್ನಲೆಯಲ್ಲಿ ನದಿಯಲ್ಲಿ ನೀರು ತುಂಬುವುದರಿಂದ ತಾತ್ಕಾಲಿಕ ರಸ್ತೆಯ ತೆರವಿಗೆ ಸೂಚಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

Leave a Comment