ಮುಯ್ಯಿಗೆ ಮುಯ್ಯಿ 24 ಉಗ್ರರ ಹತ್ಯೆ

ಇಸ್ಲಮಾಬಾದ್, ಫೆ. ೧೭ – ಸಿಂಧ್ ಪ್ರಾಂತ್ಯದ ಸೆಹ್ವಾನ್‌ನ ಲಾಲ್ ಶಾಹ್‌ಬಾದ್ ಖಲಂದರ್ ಎಂಬ ಸೂಫಿ ಪವಿತ್ರ ಸ್ಥಳದಲ್ಲಿ ನಿನ್ನೆ ಐಸಿಸ್ ಸಂಘಟನೆ ಆತ್ಮಹತ್ಯಾ ಬಾಂಬ್ ಸ್ಫೋಟಿಸಿ 100ಕ್ಕೂ ಹೆಚ್ಚು ಮಂದಿಯ ಮಾರಣಹೋಮ ನಡೆಸಿದ ನಂತರ ಪಾಕಿಸ್ತಾನದ ರಕ್ಷಣಾ ಪಡೆಗಳು ದೇಶಾದ್ಯಂತ ದಾಳಿ ನಡೆಸಿ 24ಕ್ಕೂ ಹೆಚ್ಚು ಉಗ್ರರನ್ನು ಕೊಂದು ಹಾಕಿವೆ.
ದಕ್ಷಿಣ ವಲಯ ಒಂದರಲ್ಲೇ 18 ಮಂದಿ ಉಗ್ರಗಾಮಿಗಳನ್ನು ಕೊಂದು ಹಾಕಿರುವುದಾಗಿ ಸಿಂಧ್ ರೇಂಜರ್ಸ್ ಅರೆಸೇನಾ ಪಡೆಯವರು ಹೇಳಿದ್ದಾರೆ.
ಸಿಂಧ್‌ನ ಕತೂರ್ ಸಮೀಪ ಅರೆಸೇನಾ ಪಡೆಗಳ ಮೇಲೆ ಉಗ್ರರು ಘರ್ಷಣೆಗಿಳಿದಾಗ 7 ಮಂದಿ ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಯಿತು. ನೆಹ್ವಾಲ್‌ನಲ್ಲಿ ಪರಿಹಾರ ಕಾರ್ಯ ಕೈಗೊಂಡ ನಂತರ ಪಡೆಗಳು ಹಿಂದಿರುಗುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಯೋಧನೊಬ್ಬ ಗಾಯಗೊಂಡಿದ್ದಾನೆ.
ಕರಾಚಿಯ ಮಂಘೋಪುರದಲ್ಲಿ ನಡೆಸಿದ ದಾಳಿಯಲ್ಲಿ ಇತರ 11 ಮಂದಿ ಉಗ್ರರನ್ನು ಕೊಲ್ಲಲಾಗಿದೆ ಎಂದೂ ರೇಂಜರ್‌ಗಳು ತಿಳಿಸಿದ್ದಾರೆ.
ಉಗ್ರಗಾಮಿಗಳನ್ನು ಇಲ್ಲವಾಗಿಸುವ ಬಗ್ಗೆ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ದಾಳಿಗಳನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ. ಕಳೆದ ವಾರಾಂತ್ಯದವರೆಗೆ 8 ಭಯೋತ್ಪಾದಕ ದಾಳಿಗಳಲ್ಲಿ ಹತ್ತಾರು ಜನ ಸತ್ತ ನಂತರ ಸರ್ಕಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

Leave a Comment