ಮುನವಳ್ಳಿಯಲ್ಲಿ ರಸ್ತೆ ತಡೆದು ಪ್ರತಿಭಟನೆ

ಮುನವಳ್ಳಿ,ಜು17 : ಮಹದಾಯಿ ಕಣಿವೆ ತಿರುವು ಹಾಗೂ ಕಳಸಾ ಬಂಡೂರಿ ನಾಲಾಗಳ ಮಲಪ್ರಭಾ ನದಿಗೆ ಜೋಡಣೆ ಯೋಜನೆಯ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣ ನೀಡಿದ ಐತೀರ್ಪು ಪ್ರಕಟವಾಗಿ 1 ವರ್ಷ ಗತಿಸಿದರೂ ಸಂಬಂಧಿಸಿದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಮನಹರಿಸದೇ ಕಾಲಹರಣ ಮಾಡುತ್ತಿರುವುದನ್ನು ಖಂಡಿಸಿ ಕಳಸಾ ಬಂಡೂರಿ ಹೋರಾಟ ಸಮಿತಿ, ರೈತ ಸೇನೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹಾಗೂ ರೈತರು ಜು. 16 ರಂದು ಪಟ್ಟಣದ ಶ್ರೀ ಪಂಚಲಿಂಗೇಶ್ವರ ಕ್ರಾಸ್‍ದಲ್ಲಿರುವ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಚಾಲಕ ಶಿವಾನಂದ ಮೇಟಿ ಹಾಗೂ ರೈತ ಮುಖಂಡ ಉಮೇಶ ಬಾಳಿ ಮಾತನಾಡಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ವಿಳಂಬವಾಗಿದ್ದರಿಂದ ಮಳೆ ಕೊರತೆ ಕಾಣಿಸಿಕೊಂಡಿದ್ದು, ರೈತರು ತುಂಬಾ ಸಂಕಷ್ಟದಲ್ಲಿದ್ದು ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರಸಿಂಗ್ ಶೇಖಾವತ್‍ರನ್ನು ಕಂಡು ಮಹದಾಯಿ ಐತೀರ್ಪನ್ನು ಪರಿಗಣಿಸಿ ಸುಮಾರು 6 ಟಿ.ಎಂ.ಸಿ. ನೀರನ್ನು ಮಲಪ್ರಭೆಗೆ ಹರಿಸುವಂತೆ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರ ಹೆಚ್ಚಿನ ಆಸಕ್ತಿ ವಹಿಸಿ ಕೇಂದ್ರಕ್ಕೆ ಮನವಿ ಮಾಡಬೇಕು ಜೊತೆಗೆ ಮಲಪ್ರಭೆಗೆ ನೀರು ಹೋಗದಂತೆ ಕಾಲುವೆಗೆ ಕಟ್ಟಿರುವ ತಡೆಗೋಡೆ ತೆರವುಗೊಳಿಸಿ ಕಳಸಾ ಹಳ್ಳದಿಂದ ಐಸಿಸಿ ಕೆನಾಲ್ ಮೂಲಕ ಮಲಪ್ರಭಾ ನದಿಗೆ ನೀರು ಹರಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಬರೀಷ ಯಲಿಗಾರ, ಸಿಂಗಯ್ಯ ಹಿರೇಮಠ, ಕಲ್ಲಪ್ಪ ನಲವಡೆ, ಅಂದಾನಿ ಗೋಮಾಡಿ, ಗಂಗಪ್ಪ ನಲವಡೆ, ಮೌನೇಶ ಬಡಿಗೇರ,ಆಯ್.ಜಿ.ಚಂದರಗಿ, ಹ.ಬ.ಅಸೂಟಿ, ಅಬ್ದುಲ್ ಟಪಾಲ ಸೇರಿದಂತೆ ರೈತ ಬಾಂಧವರು ಇದ್ದರು.

Leave a Comment