ಮುತ್ತಿನ ನಗರಿ ಅವಳಿ ಸ್ಫೋಟ ಇಬ್ಬರು ಆರೋಪಿಗಳಿಗೆ ಶಿಕ್ಷೆ

ಹೈದರಾಬಾದ್, ಸೆ. ೪: ಹನ್ನೊಂದು ವರ್ಷಗಳ ಹಿಂದೆ (೨೦೦೭ರಲ್ಲಿ) ಹೈದರಾಬಾದ್‌ನಲ್ಲಿ ಒಟ್ಟು ೪೪ ಜನರ ಸಾವಿಗೆ ಕಾರಣವಾಗಿದ್ದ ‘ಜೋಡಿ ಸ್ಫೋಟ’ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅಪರಾಧಿಗಳೆಂದು ಘೋಷಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಬರುವ ಸೋಮವಾರ ಪ್ರಕಟಿಸಲಾಗುವುದು. ಉಳಿದ ಮೂವರು ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಲಾಗಿದೆ.

ಮೊಹಮದ್ ಅಕ್ಬರ್ ಇಸ್ಮಾಯಿಲ್ ಚೌಧರಿ ಮತ್ತು ಅನೀಖ್ ಷಫೀಕ್ ಸೈಯದ್ ಎಂಬುವರನ್ನು ಅಪರಾಧಿಗಳೆಂದು ಘೋಷಿಸಲಾಗಿದೆ. ಉಳಿದಂತೆ ಫಾರೂಕ್ ಶರ್ಫುದ್ದೀನ್ ತರ್ಕಾಶ್, ಮೊಹಮದ್ ಸಾದಿಕ್ ಇಸ್ರಾರ್ ಅಹ್ಮದ್ ಶೇಖ್ ಮತ್ತು ತಾರಿಖ್ ಅಂಜುಮ್ ಎಂಬ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೆ ಆದೇಶಿಸಲಾಗಿದೆ.

ಆದರೆ ಭದ್ರತಾ ದೃಷ್ಟಿಯಿಂದ ಐವರೂ ಆರೋಪಿಗಳನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಕರೆತಂದಿರಲಿಲ್ಲ. ನ್ಯಾಯಾಧೀಶರು ಈ ಹಿಂದೆ ಆಗಸ್ಟ್ ೨೭ ರಂದು ಈ ಪ್ರಕರಣದ ತೀರ್ಪನ್ನು ಸೆ. ೪ಕ್ಕೆ ಮುಂದೂಡಿದ್ದರು. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಆರೋಪಿಗಳು ನಡೆಸಿದ್ದ ಈ ಸರಣಿ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ತೆಲಂಗಾಣ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಪೊಲೀಸರು ಐವರೂ ಆರೋಪಿಗಳನ್ನು ಬಂಧಿಸಿದ್ದರು.

ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸ್ಥಾಪಕರೆನ್ನಲಾದ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ಎಂಬ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಾಲ್ಕು ಆರೋಪ ಪಟ್ಟಿಗಳಲ್ಲಿ ಹೇಳಲಾಗಿತ್ತು.

Leave a Comment