ಮುಚ್ಚುವ ಭೀತಿಯಲ್ಲಿ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ

ನಾಗರಾಜ ಹೂವಿನಹಳ್ಳಿ

ಕಲಬುರಗಿ,ಡಿ.5-ರಾಜ್ಯದ ಮೂರು ಕಡೆ ಆರಂಭಿಸಲಾಗಿದ್ದ ಸರ್ಕಾರಿ ಶಿಕ್ಷಕ/ಶಿಕ್ಷಕಿಯರ ತರಬೇತಿ ಸಂಸ್ಥೆಗಳ ಪೈಕಿ ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣ ಮತ್ತು ಧಾರಾವಾಡ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಈಗಾಗಲೆ ಮುಚ್ಚಿಹೋಗಿದ್ದು, ಇಲ್ಲಿನ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯೂ ಇದೀಗ ಅಂತಹದೊಂದು ಭೀತಿಯನ್ನು ಎದುರಿಸುತ್ತಿದೆ.

ನಗರದ ಎಸ್.ಟಿ.ಬಿ.ಟಿ ಬಳಿ ಇರುವ ಸುಮಾರು 40 ವರ್ಷ ಹಳೆಯದಾದ ಈ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲೀಗ ಅಗತ್ಯಕ್ಕಿಂತ ಕಡಿಮೆ ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿರುವುದೇ ಈ ಭೀತಿಗೆ ಕಾರಣವಾಗಿದೆ.

ಕನ್ನಡ ಮತ್ತು ಉರ್ದು ಭಾಷಾ ಮಾಧ್ಯಮದಲ್ಲಿರುವ ರಾಜ್ಯದ ಏಕೈಕ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಈ ಮೊದಲು ಕನ್ನಡ ಮತ್ತು ಉರ್ದು ಭಾಷಾ ಮಾಧ್ಯಮದಲ್ಲಿ 100ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆಯುತ್ತಿದ್ದರು.

ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತ ನಡೆದಿದ್ದು, ಪ್ರಸಕ್ತ ವರ್ಷ ಕನ್ನಡ ಮಾಧ್ಯಮದಲ್ಲಿ 56 ಮತ್ತು ಉರ್ದು ಮಾಧ್ಯಮದಲ್ಲಿ 22 ( ಪ್ರಥಮ, ದ್ವಿತೀಯ ವರ್ಷ ಸೇರಿ) ಪ್ರಶಿಕ್ಷಣಾರ್ಥಿಗಳು ಮಾತ್ರ ತರಬೇತಿ ಪಡೆಯುತ್ತಿದ್ದಾರೆ.

2015ಕ್ಕೂ ಮುಂಚೆ ಪ್ರವೇಶ ಪಡೆಯುತ್ತಿದ್ದ ವಿದ್ಯಾರ್ಥಿನಿಯರ ಸಂಖ್ಯೆ ಸಾಕಷ್ಟಿತ್ತು. ಆದರೆ, 2016ರಿಂದ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯಾಗುತ್ತಿದೆ. ಕಳೆದ ಎಂಟತ್ತು ವರ್ಷಗಳಿಂದ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಮಾಡಿಕೊಳ್ಳದೇ ಇರುವುದು, ಪಿಯುಸಿ ಪರೀಕ್ಷೆ ಮುಗಿದ ತಕ್ಷಣವೇ ಪ್ರವೇಶಾತಿಗೆ ಅಧಿಸೂಚನೆ ಹೊರಡಿಸದದೇ ಜೂನ್, ಜುಲೈ ತಿಂಗಳಲ್ಲಿ ಅಧಿಸೂಚನೆ ಹೊರಡಿಸುತ್ತಿರುವುದು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮತ್ತು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕಡ್ಡಾಯಗೊಳಿಸಿರುವುದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪಡೆಯದೇ ಇರಲು ಪ್ರಮುಖ ಕಾರಣವೆನ್ನಲಾಗುತ್ತಿದೆ.

ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಮಾಡಿಕೊಳ್ಳುವುದರ ಮೂಲಕ, ಡಿಇಡಿ ಮುಗಿಸಿದವರಿಗೆ ಟಿಇಟಿ ಇಲ್ಲವೇ ಸಿಇಟಿ ಎರಡರಲ್ಲಿ ಒಂದು ಪರೀಕ್ಷೆ ಮಾತ್ರ ಕಡ್ಡಾಯಗೊಳಿಸುವುದರ ಮೂಲಕ ಮತ್ತು ಪ್ರವೇಶಾತಿಯ ಅಧಿಸೂಚನೆಯನ್ನು ಬೇಗನೆ ಪ್ರಕಟಿಸುವುದರ ಮೂಲಕ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಪ್ರವೇಶ ಪಡೆಯಲು ಅನುಕೂಲ ಮಾಡುವುದರ ಮೂಲಕ ಇಂತಹ ತರಬೇತಿ ಸಂಸ್ಥೆಗಳನ್ನು ಜೀವಂತವಾಗಿರಿಸಬಹುದಾಗಿದೆ ಎಂಬುವುದು ಶಿಕ್ಷಣ ತಜ್ಞರ ಅಭಿಮತವಾಗಿದೆ.

40 ವರ್ಷ ಹಳೆಯದಾದ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದ ಅದೆಷ್ಟೋ ಪ್ರಶಿಕ್ಷಣಾರ್ಥಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇನ್ನೂ ಅದೆಷ್ಟೋ ಜನ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಶಿಕ್ಷಕರ ತರಬೇತಿ ಪಡೆಯಲು ಪರ್ಯಾಯ ವ್ಯವಸ್ಥೆ ರೂಪಿಸುವುದರ ಮೂಲಕ ಇಂತಹ ತರಬೇತಿ ಸಂಸ್ಥೆಗಳನ್ನು ಉಳಿಸಬೇಕಿದೆ ಎನ್ನುತ್ತಾರೆ ದೈಹಿಕ ಶಿಕ್ಷಕ ಶಿಕ್ಷಣ ಬೋಧಕರಾದ ಡಾ.ಶಿವಲಿಂಗಪ್ಪ ಗೌಳಿ ಅವರು.

ಹೈದ್ರಾಬಾದ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ. ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿನಿಯರು ತರಬೇತಿ ಪಡೆಯುತ್ತಿದ್ದು, ಆ ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ಒಂದನ್ನು ಆರಂಭಿಸುವುದರ ಮೂಲಕ ಸರ್ಕಾರಿ ಶಾಲಾ ಕಾಲೇಜು ಮತ್ತು ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಅಂದಾಗ ಮಾತ್ರ ಹೈದ್ರಾಬಾದ ಕರ್ನಾಟಕ ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಿದೆ ಎಂದು ಉಪನ್ಯಾಸಕ ಬಿ.ಎಂ.ರಾವೂರ ಹೇಳುತ್ತಾರೆ.

ಒಟ್ಟಾರೆ ವಿದ್ಯಾರ್ಥಿನಿಯರ ಕೊರತೆಯ ಕಾರಣಕ್ಕೆ ಸರ್ಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಮುಚ್ಚಿ ಹೋಗದಂತೆ ಸರ್ಕಾರ ಮತ್ತು ಈ ಭಾಗದ ಜನ ಪ್ರತಿನಿಧಿಗಳು ಮುತುವರ್ಜಿ ವಹಿಸಬೇಕಿದೆ.

ಬಾಗಿಲು ಮುಚ್ಚಿದ ಖಾಸಗಿ ಸಂಸ್ಥೆಗಳು

ಈ ಹಿಂದೆ ಜಿಲ್ಲೆಯಲ್ಲಿ 60 ರಿಂದ 62 ಖಾಸಗಿ ಶಿಕ್ಷಕ/ಶಿಕ್ಷಕಿಯರ ತರಬೇತಿ ಕಾಲೇಜುಗಳಿದ್ದವು. ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕೆ ಇದರಲ್ಲಿ ಬಹುತೇಕ ಕಾಲೇಜುಗಳು ಈಗಾಗಲೆ ಬಾಗಿಲು ಮುಚ್ಚಿವೆ. 6 ರಿಂದ 7 ಕಾಲೇಜುಗಳು ಮಾತ್ರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ನಡೆಸಿಕೊಂಡು ಹೋಗಲಾಗುತ್ತಿದೆ. ಸದ್ಯ ಈ ಸಂಸ್ಥೆಯಗಳು ಕೃತಕ ಉಸಿರಾಟ (ವೆಂಟಿಲೇಟರ್) ಮೇಲೆ ಬದುಕುಳಿದಂತಾಗಿದೆ.

Leave a Comment