ಮುಚ್ಚುವ  ಪ್ರಸ್ತಾವನೆ  ತಳ್ಳಿಹಾಕಿದ  ಬಿ ಎಸ್ ಎನ್ ಎಲ್,  ಮಾಧ್ಯಮ ವರದಿಗಳು ಸುಳ್ಳು: ಸ್ಪಷ್ಟನೆ

ಚೆನ್ನೈ, ಜುಲೈ 2 – ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್  ಲಿಮಿಟೆಡ್( ಬಿಎಸ್ ಎನ್ ಎಲ್) ಅನ್ನು ಮುಚ್ಚುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಈ ಕುರಿತ ಮಾಧ್ಯಮಗಳ ವರದಿಗಳು ಸುಳ್ಳು ಹಾಗೂ ಕೆಲ ಪಟ್ಟಭದ್ರ ಹಿತಾಸಕ್ತಿಗಳು  ದುರುದ್ದೇಶಗಳಿಂದ ಇಂತಹ ವದಂತಿಗಳನ್ನು ಹಬ್ಬಿಸುತ್ತಿವೆ  ಎಂದು ಬಿಎಸ್ ಎನ್ ಎಲ್  ಹೇಳಿಕೆಯಲ್ಲಿ  ಸ್ಪಷ್ಟಪಡಿಸಿದೆ.

ಕೆಲ ಮಾಧ್ಯಮಗಳಲ್ಲಿ   ಬಿ ಎಸ್ ಎನ್ ಎಲ್ ಕುರಿತು  ಸುಳ್ಳು ವರದಿಗಳು  ಬಿತ್ತರಗೊಂಡಿವೆ ಎಂದು  ಭಾರತೀಯ ಸಂಚಾರ ನಿಗಮ್  ಲಿಮಿಟೆಡ್   ತಮಿಳುನಾಡು ವೃತ್ತದ  ಮುಖ್ಯ ಮಹಾ ಪ್ರಬಂಧಕರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಕೆಲವು ಪಟ್ಟಭದ್ರ ಹಿತಾಸಕ್ತಿಗಳು  ದುರುದ್ದೇಶದಿಂದ  ಇಂತಹ  ವರದಿ ಹಾಗೂ ವದಂತಿಗಳನ್ನು ಹಬ್ಬಿಸುತ್ತಿವೆ. ಈ ಕುರಿತು ಸಾರ್ವಜನಿಕ ಮನಸ್ಸಿನಲ್ಲಿ ಮೂಡಿರುವ  ಸಂಶಯ ನಿವಾರಿಸಲು  ಸ್ಪಷ್ಟನೆ ನೀಡಿರುವ  ನಿಗಮ,  ಬಿ ಎಸ್ ಎನ್ ಎಲ್ ಮುಚ್ಚುವ ಯಾವುದೇ ಪ್ರಸ್ತಾವನೆ ಇಲ್ಲ, ಕೆಲವು ಪತ್ರಿಕೆಗಳು  ಈ ಕುರಿತು ತಪ್ಪು ವರದಿಗಳನ್ನು ಬಿತ್ತರಿಸಿವೆ ಎಂದು  ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ತೀವ್ರ  ಪೈಪೋಟಿ  ಹಾಗೂ  ಶುಲ್ಕ ಪ್ರಮಾಣ ಇಳಿಕೆಯ ಪರಿಣಾಮ ಬಿಎಸ್ ಎನ್ ಎಲ್  ಕಳೆದ ಕೆಲವು ತಿಂಗಳುಗಳಿಂದ  ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿದೆ  ಎಂದು ಹೇಳಿದೆ

ಆದಾಗ್ಯೂ  ಬಿ ಎಸ್ ಎನ್ ಎಲ್  ಅನ್ನು  ಪುನಶ್ಚೇತನ ಗೊಳಿಸುವ ಯೋಜನೆಯೊಂದನ್ನು  ಕೇಂದ್ರ ಸರ್ಕಾರ ಸಿದ್ದಪಡಿಸಿದ್ದು, ಪ್ರಸ್ತುತ  ಯೋಜನೆ  ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದಿದೆ ಎಂದು ಹೇಳಿದೆ.

ಬಿಎಸ್ ಎನ್ ಎಲ್  ಸಾರ್ವಜನಿಕ ವಲಯದ ಕಂಪನಿಯಾಗಿದ್ದು, ಸರ್ಕಾರದ ಮಾಲಿಕತ್ವ ಹೊಂದಿದ್ದು,  ದೇಶದ ತೀವ್ರವಾದಿ ಪೀಡಿತ ಪ್ರದೇಶಗಳು, ದೂರದ ಪ್ರದೇಶಗಳು ಹಾಗೂ ರಕ್ಷಣಾ ಪಡೆಗಳಿಗೆ  ದೂರ ಸಂಪರ್ಕ ಸೇವೆಗಳನ್ನು ಒದಗಿಸುತ್ತಿದೆ.

ಕಾರ್ಯತಂತ್ರ ದೂರ ಸಂಪರ್ಕ ಸೇವಾ ಸಂಸ್ಥೆಯಾದ  ಬಿಎಸ್ ಎನ್ ಎಲ್  ದೇಶಕ್ಕೆ ಬಹು ಆಗತ್ಯವಾಗಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್  ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಚಂಡಮಾರುತ, ನೆರೆ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭಗಳಲ್ಲಿ  ಸಾರ್ವಜನಿಕರಿಗೆ ಸೇವೆ  ಒದಗಿಸುವ  ಏಕೈಕ ದೂರಸಂಪರ್ಕ  ಸೇವಾ ಸಂಸ್ಥೆ  ಬಿಎಸ್ ಎನ್ ಎಲ್ ಆಗಿದೆ ಎಂದು  ಸಚಿವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಈ ಎಲ್ಲ ಆಂಶಗಳನ್ನು  ಪರಿಗಣಿಸಿ,  ಬಿ ಎಸ್ ಎನ್ ಎಲ್  ತನ್ನ ಸೇವೆಯನ್ನು ಸಾರ್ವಜನಿಕರಿಗೆ ಮುಂದುವರಿಸಲಿದೆ. ಅಗ್ಗದ ದರದಲ್ಲಿ, ಅತ್ಯುತ್ತಮ ದೂರ ಸಂಪರ್ಕ ಸೇವೆಯನ್ನು ಪಾರದರ್ಶಕವಾಗಿ ಜನರಿಗೆ ಒದಗಿಸಲಿದೆ  ಎಂದು ಹೇಳಿಕೆಯಲ್ಲಿ ತಿಳಿಸಿದೆ

ಈ ಸಂಬಂಧ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು ಎಂದು  ಮನವಿ ಮಾಡಿಕೊಂಡಿದೆ.

Leave a Comment